



ಕನ್ನಡ ಭವನದ “ಕನ್ನಡದ ನಡಿಗೆ -ಶಾಲೆಯ ಕಡೆಗೆ ” ಶೀರ್ಷಿಕೆಯೇ ಮನ ಮುಟ್ಟುವಂತಹದ್ದು -ಡಾ. ನೆಗಳಗುಳಿ
ಮಂಗಳೂರು : ಎಳೆಯರಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ, ಸಾಹಿತ್ಯಾಭಿಮಾನ ಮೂಡಿಸಬೇಕಾದದ್ದು ಕಾಲಘಟ್ಟದ ಅನಿವಾರ್ಯ. ಈ ನಿಟ್ಟಿನಲ್ಲಿ ಕನ್ನಡ ಭವನ ದ. ಕ. ಜಿಲ್ಲಾ ಘಟಕದ ವಿನೂತನ ಪ್ರಯೋಗ “ಕನ್ನಡದ ನಡಿಗೆ -ಶಾಲೆಯ ಕಡೆಗೆ “ಎಂಬ ಏಕ ದಿನ ಸಾಹಿತ್ಯ ಅಭಿಯಾನ ಪ್ರಾಯೋಗಿಕ ಹಾಗೂ ಅನುಕರಣೀಯ ಎಂದು ಮಂಗಳೂರಿನ ಹಿರಿಯ ವೈದ್ಯ ಗಝಲ್ ಕವಿ ಸಾಹಿತಿ ಡಾ. ಸುರೇಶ್ ನೆಗಳಗುಳಿ ಅಭಿಪ್ರಾಯ ಪಟ್ಟರು.
ಇವರು ಮಂಗಳೂರಿನ ಕ್ರಾಸ್ತಿಯ ಪ್ರೌಢ ಶಾಲೆ ಜೆಪ್ಪು ಇಲ್ಲಿನ ಸಭಾಂಗಣದಲ್ಲಿ, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಯೋಜಿಸಿದ ವಿದ್ಯಾರ್ಥಿಗಳಿಗೆ ಏಕ ದಿನ ಸಾಹಿತ್ಯ ಅಭಿಯಾನದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿ ಮಾತನಾಡಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ಉದ್ಘಾಟನೆ ಯನ್ನು ಶಾಲಾ ಮುಖ್ಯ ಶಿಕ್ಷಕಿ ಏವರೆಸ್ಟ್ ಕ್ರಾಸ್ತಾ ಹಾಗೂ ಶಿಕ್ಷಕಿ ಅಲೀಸ್ ಕೆ. ಜೆ ಉದ್ಘಾಟಿಸಿದರು. ಕನ್ನಡ ಭವನದ ಗೌರವ ಅಧ್ಯಕ್ಷರಾದ ಡಾ. ರವೀಂದ್ರ ಜೆಪ್ಪು ಅಧ್ಯಕ್ಷತೆ ವಹಿಸಿದರು.. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕವಿ, ಸಾಹಿತಿ ಡಾ. ಸುರೇಶ್ ನೆಗಳಗುಳಿ ಹಾಗೂ ಕನ್ನಡ ಭವನ ದ. ಕ. ಜಿಲ್ಲಾಧ್ಯಕ್ಷೆ, ಶಿಕ್ಷಕಿ ರೇಖಾ ಸುದೇಶ್ ರಾವ್, ಮಕ್ಕಳ ಕವನ ವಾಚನದ ವಿಮರ್ಶೆಯೊಂದಿಗೆ, ಕವನ ರಚನೆ, ವಾಚನದ ಬಗ್ಗೆ ತರಗತಿ ನಡೆಸಿದರು. 25ರಷ್ಟು ಮಂದಿ ಆಸಕ್ತ ವಿದ್ಯಾರ್ಥಿಗಳು ಕವನ ವಾಚನ, ರಸಪ್ರಶ್ನೆ ಯಲ್ಲಿ ಭಾಗವಹಿಸಿದರು. ಶಿಕ್ಷಕರಾದ ಸಂತೋಷ್ ಕವನ ವಾಚಿಸಿದರು. ಕನ್ನಡ ಭವನ ಕಾರ್ಯಾಧ್ಯಕ್ಷರಾದ ಉಮೇಶ್ ರಾವ್ ಕುಂಬ್ಳೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಶಿಕ್ಷಕಿ ಸುನೀತಾ ರೋಸ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಭವನದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಶಾಲಾ ಶಿಕ್ಷಕಿ ಶ್ರಿತಿ ವಂದಿಸಿದರು. ಕ್ರಾಸ್ತಿಯ ಪ್ರೌಢ ಶಾಲೆ ಜೆಪ್ಪುವಿನ ಸಾಹಿತ್ಯ ಪೋಷಣೆಯ ವಿಶೇಷ ಮುತುವರ್ಜಿ ಯನ್ನು ಅಧ್ಯಕ್ಷ ಭಾಷಣದಲ್ಲಿ ಡಾ. ರವೀಂದ್ರ ಜೆಪ್ಪು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಶಿಕ್ಷಕಿ ರೇಖಾ ಸುದೇಶ್ ರಾವ್ ಸ್ವಾಗತಿಸಿದರು.
Post Views: 171





































