ಕನ್ನಡ ನಾಡು ನುಡಿಗೆ ಕಾಂತಾವರ ಕನ್ನಡ ಸಂಘದ ಕೊಡುಗೆ ಅರ್ಥಪೂರ್ಣವಾದುದು
ಕಾಂತಾವರ : ಕಳೆದ ೪೮ ವರ್ಷಗಳಿಂದ ಕನ್ನಡ ನಾಡು ಹೆಮ್ಮೆಪಡುವಂತಹ ಕನ್ನಡದ ಚಟುವಟಿಕೆಗಳು ಕಾಂತಾವರ ಕನ್ನಡ ಸಂಘದಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಅಭಿನಂದನೀಯವಾಗಿದೆ. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಗೊಂಡು ೫೦ ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭ ಕಾಸರಗೋಡು ಕನ್ನಡಿಗರಿಗೆ ಇದು ಸಂಭ್ರಮಿಸುವ ದಿನವಲ್ಲವಾದರೂ ಇಂದಿಗೂ ಕಾಸರಗೋಡಿನ ಕನ್ನಡಿಗರು ಕನ್ನಡ ನಾಡು ನುಡಿಗೆ ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು ಎಂಬುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡು ಘಟಕದ ಅಧ್ಯಕ್ಷರಾಗಿರುವ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕರ್ನಾಟಕ ರಾಜ್ಯೋತ್ಸವ ದಿನದಂದು ಕಾಂತಾವರ ಕನ್ನಡ ಸಂಘದಲ್ಲಿ ನಡೆದ ‘ಕಾಂತಾವರ ಉತ್ಸವ – ೨೦೨೪’ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸಭಾಧ್ಯಕ್ಷತೆಯನ್ನು ವಹಿಸಿ ಏಳು ಜನ ಸಾಧಕರಿಗೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರದಾನಿಸಿ ಸರಕಾರದ ಧೋರಣೆಯಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಹಿರಿಯ ಲೇಖಕಿ ಹಾಗೂ ಸಂಘಟಕರಾಗಿರುವ ಪ್ರೊ. ಪ್ರಮೀಳಾ ಮಾಧವ್ ಕಾಸರಗೋಡು ಅವರು ಪ್ರಶಸ್ತಿ ಪುರಸ್ಕೃತರಿಗೆ ಶುಭಾಶಂಸನೆ ಸಲ್ಲಿಸಿದರು.
“ನಾಡಿಗೆ ನಮಸ್ಕಾರ ಗ್ರಂಥಮಾಲೆ”ಯ ಸಂಪಾದಕರಾಗಿರುವ ಹಿರಿಯ ವಿಮರ್ಶಕರು ಹಾಗೂ ಕಾದಂಬರಿಕಾರರಾದ ಡಾ. ಬಿ.ಜನಾರ್ದನ ಭಟ್ ಅವರು ಮಾಲೆಯಲ್ಲಿ ಮೂಡಿಬರುತ್ತಿರುವ ಕೃತಿಗಳ ಮಹತ್ವವನ್ನು ತಿಳಿಸಿದರು.
ಕಾಸರಗೋಡಿನ ಹಿರಿಯ ಸಾಹಿತಿ ಹಾಗೂ ಸಂಘಟಕರಾಗಿರುವ ಪ್ರೊ. ಪಿ.ಎನ್.ಮೂಡಿತ್ತಾಯರವರು ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಎಂಟು ಕೃತಿಗಳು ಮತ್ತು ಸಂಸ್ಕೃತಿ ಸಂವರ್ಧನ ಮಾಲೆಯ ಒಂದು ಕೃತಿಯೂ ಸೇರಿದಂತೆ ಒಟ್ಟು ಒಂಬತ್ತು ಕೃತಿಗಳನ್ನು ಲೋಕಾರ್ಪಣೆಗೊಳಿಸಿ, ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿ ಉಳಿಯುವ ಈ ಮಹತ್ವದ ಕೃತಿಗಳ ಪ್ರಕಟಣೆ ಈಗ ೩೫೪ನ್ನು ದಾಟಿದ್ದು ಇದು ನಾಡೇ ಬೆರಗಾಗುವಂತಹ ಕನ್ನಡ ಸಂಘದ ಮಹತ್ಸಾಧನೆಯಾಗಿದೆ ಎಂಬುದಾಗಿ ಅಭಿಪ್ರಾಯಪಟ್ಟರು. ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಬಂದ ಸಾಧಕರು, ಕೃತಿಯ ಲೇಖಕರು ಮತ್ತು ಪ್ರಾಯೋಜಕರು ಹಾಗೂ ದತ್ತಿನಿಧಿಗಳ ಪ್ರಾಯೋಜಕರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಮುಂಜಾನೆ ಕನ್ನಡ ಸಂಘದ ಉಪಾಧ್ಯಕ್ಷರಾದ ಸತೀಶ ಕುಮಾರ್ ಕೆಮ್ಮಣ್ಣು ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ನಾಡಗೀತೆಯೊಂದಿಗೆ ಪ್ರಾರಂಭಗೊoಡ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ ನೆರವೇರಿತು. ಚಾಟುಕವಿ ವಿರಚಿತ ಕರ್ನಾಟಕ ಭಾಗವತದ ‘ಮಹಾಬಲಿ’ ಪ್ರಸಂಗದ ವಾಚನವನ್ನು ಯಜ್ಞೇಶ್ ಆಚಾರ್ಯ ಹೊಸಬೆಟ್ಟು ನಿರ್ವಹಿಸಿದರೆ ಸರ್ಪಂಗಳ ಈಶ್ವರ ಭಟ್ ಅವರು ವ್ಯಾಖ್ಯಾನಿಸಿದರು.






































