ಕಣ್ಣು ತೆರೆದ ರಾ.ಹೆ. ಪ್ರಾಧಿಕಾರ : ತಂಗುದಾಣ ನಿರ್ಮಾಣ ಯೋಜನೆಗೆ ಹಸಿರು ನಿಶಾನೆ

Picture of RB NEWS

RB NEWS

Bureau Report

ಕಾರ್ಕಳ‌: ರಾ.ಹೆ 169 : ಸಾಣೂರು ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳ ಕಾಲ ಗಾಳಿ ಮಳೆ ಬಿಸಿಲಿಗೆ ಮೈಯೊಡ್ಡಿ ರಸ್ತೆ ಮಧ್ಯದಲ್ಲಿ ಬಸ್ಸು ಕಾಯುವ ಸಂಕಷ್ಟಕ್ಕೆ ಮುಕ್ತಿ ಸನ್ನಿಹಿತವಾಗಿದ್ದು, 4 ಬಸ್ಸು ತಂಗುದಾಣಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಫುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮಂಗಳೂರಿನ ಬಿಕರ್ನ ಕಟ್ಟೆಯಯವರೆಗೆ (45 ಕಿ.ಮೀ.)ರಾಷ್ಟ್ರೀಯ ಹೆದ್ದಾರಿ _ 169 ಚತುಷ್ಪಥ ಕಾಮಗಾರಿ ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.

ಹಳೆ ಬಸ್ಸು ತಂಗುದಾಣಗಳು ಧರಾಶಾಯಿ

ಬಸ್ಸು ತಂಗುದಾಣವಿಲ್ಲದೆ ಹೆದ್ದಾರಿ ಮಧ್ಯದಲ್ಲಿ ಕಾಯುತ್ತಿರುವ ನತದೃಷ್ಟ ಪ್ರಯಾಣಿಕರು.. ರಾಹೆ 169 ಸಾಣೂರು ( ಮುರತ್ತಂಗಡಿ)

ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಬಸ್ಸುತಂಗುದಾಣಗಳನ್ನು ಕೆಡವಿ ಹಾಕಲಾಗಿತ್ತು.

ಹೊಸ ಬಸ್ಸು ನಿಲ್ದಾಣಗಳು ನಿರ್ಮಾಣವಾಗುವವರೆಗೆ ಕನಿಷ್ಠಪಕ್ಷ ತಾತ್ಕಾಲಿಕ ಬಸ್ಸು ತಂಗುದಾಣಗಳನ್ನು ನಿರ್ಮಾಣ ಮಾಡಿಕೊಡಿ ಎನ್ನುವ ನಾಗರಿಕರ ಬೇಡಿಕೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸ್ಪಂದಿಸಿಲ್ಲ. ಕಳೆದ 3 ವರ್ಷಗಳಿಂದ ಸಾಣೂರು ಗ್ರಾಮದ ಬಸ್ಸು ಪ್ರಯಾಣಿಕರು ಬಿಸಿಲು ಮಳೆ ಗಾಳಿಗೆ ಮೈಯೊಡ್ಡಿ ರಸ್ತೆ ಮಧ್ಯದಲ್ಲಿ ಅಸುರಕ್ಷಿತವಾಗಿ ಬಸ್ಸು ಕಾಯಬೇಕಾದ ದುರ್ಗತಿ ಒದಗಿ ಬಂದಿತ್ತು.

ಈ ಬಗ್ಗೆ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಜನ ಪ್ರತಿನಿಧಿಗಳಿಗೆ ಮನವಿ ನೀಡಿ ಪ್ರತಿಭಟನೆ ಮಾಡಿದರೂ ಪ್ರಯೋಜನ ಶೂನ್ಯವಾಗಿತ್ತು.

ರಿಕ್ಷಾ ಚಾಲಕರಿಂದ ತಾತ್ಕಾಲಿಕ ಬಸ್ಸು ತಂಗುದಾಣ ನಿರ್ಮಾಣ

ದಿನಂಪ್ರತಿ ರಸ್ತೆ ಮಧ್ಯದಲ್ಲಿಯೇ ಬಿಸಿಲು ಮಳೆಗೆ ಬಸ್ಸು ಕಾಯಬೇಕಾದ ಜನರ ದುರ್ಗತಿ ನೋಡಿ ಸ್ಥಳೀಯ ರಿಕ್ಷಾ ಚಾಲಕ ಮತ್ತು ಮಾಲಕರು ಜೊತೆಗೂಡಿ ತಾತ್ಕಾಲಿಕ ಬಸ್ಸು ತಂಗುದಾಣವನ್ನು ನಿರ್ಮಾಣ ಮಾಡಿ ಹೆದ್ದಾರಿ ಇಲಾಖೆಗೆ ಎಚ್ಚರಿಕೆ ನೀಡಿ ಸವಾಲು ಒಡ್ಡಿದ್ದರು.

ಸಾಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿ ಎದುರು ಬದುರು ಎರಡು ಬಸ್ಸು ತಂಗುದಾಣಗಳು ಮತ್ತು ಮುರತ್ತಂಗಡಿ ಪರಿಸರದ ಇರುವತ್ತೂರು ರಸ್ತೆ ತಿರುವಿನಲ್ಲಿ ಗಂಗಾ ಸ್ಟೋರ್ಸ್ ಎದುರು ಮತ್ತು ರಸ್ತೆಯ ಇನ್ನೊಂದು ಮಗ್ಗುಲಿನಲ್ಲಿ ಗೇರುಬೀಜ ಕಾರ್ಖಾನೆಯ ಎದುರು ಹೊಸ ಬಸ್ಸು ತಂಗುದಾಣ ನಿರ್ಮಾಣಕ್ಕೆ ಜಾಗ ನಿಗದಿಪಡಿಸಿದ್ದು, ಈಗಾಗಲೇ ಸಾಣೂರಿನಲ್ಲಿ ಬಸ್ಸು ತಂಗುದಾಣಗಳ ನಿರ್ಮಾಣಕ್ಕೆ ಕೆಲಸ ಕಾರ್ಯ ಪ್ರಾರಂಭಗೊಂಡಿರುವುದು ಸಮಾಧಾನಕರ ವಿಷಯ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.

ಗುಣಮಟ್ಟದ ಹೆದ್ದಾರಿ ಕಾಮಗಾರಿಯ ಜೊತೆಗೆ ಸ್ಥಳೀಯ ಜನರ ಮೂಲಭೂತ ಸೌಕರ್ಯ ಮತ್ತು ರಸ್ತೆ ಸುರಕ್ಷತೆಗೆ ಕೂಡ ಹೆದ್ದಾರಿ ಇಲಾಖೆ ಹೆಚ್ಚಿನ ಗಮನ ಕೊಡಬೇಕೆಂದು_ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಹೆದ್ದಾರಿ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.

ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಬಸ್ಸು ತಂಗುದಾಣಗಳ ನೀಲನಕಾಶೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top