ಕಂಬಳ: ಜಿಲ್ಲೆಯ ಸಂಸ್ಕೃತಿ, ಜನರ ಉಸಿರು – ಜಸ್ಟೀಸ್ ಅಬ್ದುಲ್ ನಝೀರ್
RB NEWS
Bureau Report
ಕಂಬಳ: ಜಿಲ್ಲೆಯ ಸಂಸ್ಕೃತಿ, ಜನರ ಉಸಿರು – ಜಸ್ಟೀಸ್ ಅಬ್ದುಲ್ ನಝೀರ್
ಮೂಡುಬಿದಿರೆ: ಕಂಬಳ ಕೇವಲ ಜನಪದ ಕ್ರೀಡೆ ಅಲ್ಲ, ಅದು ಜಿಲ್ಲೆಯ ಜನರ ಜೀವನದ ಭಾಗ, ಅವರ ಸಂಸ್ಕೃತಿ ಮತ್ತು ಉಸಿರಾಗಿದೆ. ಹಿಂದೊಮ್ಮೆ ಕಂಬಳಕ್ಕೆ ತಡೆಯಾಜ್ಞೆ ವಿಧಿಸಿ ಸಂಕಷ್ಟ ಎದುರಾದರೂ, ದೇವರ ಕೃಪೆ ಹಾಗೂ ಕಂಬಳಾಭಿಮಾನಿಗಳ ಅಚಲ ನಂಬಿಕೆಯ ಫಲವಾಗಿ ಈ ಪರಂಪರೆಯ ಕ್ರೀಡೆ ಮತ್ತೆ ಜೀವ ಪಡೆದಿದೆ. ಇಂದು ಕಂಬಳ ಜಾತ್ರೆಯಂತೆ ವಿಜೃಂಭಣೆಯಿಂದ ನಡೆಯುತ್ತಿದ್ದು, ಜನಮನ ಸೆಳೆಯುತ್ತಿದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಹಾಗೂ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಅಬ್ದುಲ್ ನಝೀರ್ ಹೇಳಿದರು. ಅವರು ಶನಿವಾರ ಸಂಜೆ ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕೋಟಿ–ಚೆನ್ನಯ ಜೋಡುಕರೆ ಕಂಬಳದ ಉದ್ಘಾಟನಾ ಸಭೆಯಲ್ಲಿ ಮಾತನಾಡಿದರು. ಕಾಂತಾರ ಸಿನಿಮಾ ಬಿಡುಗಡೆಯ ನಂತರ ಕಂಬಳದ ಖ್ಯಾತಿ ರಾಜ್ಯದ ಗಡಿಗಳನ್ನು ಮೀರಿ ವಿಶ್ವಮಟ್ಟಕ್ಕೆ ವಿಸ್ತರಿಸಿದೆ. ಜನರು ತಮ್ಮ ದಿನನಿತ್ಯದ ಚಿಂತೆಗಳು ಹಾಗೂ ದುಃಖಗಳನ್ನು ಮರೆತು ಕಂಬಳ ಸಂಭ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹರ್ಷಕರ ಸಂಗತಿ. ಕಂಬಳವನ್ನು ಜನ ಇಷ್ಟೊಂದು ಉತ್ಸಾಹ ಮತ್ತು ಆತ್ಮೀಯತೆಯಿಂದ ಆಚರಿಸುತ್ತಾರೆಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದರು. ಸಭೆಗೆ ಆಗಮಿಸಿದ ರಾಜ್ಯಪಾಲರು ಜನರತ್ತ ಕೈಬೀಸಿ ಆತ್ಮೀಯವಾಗಿ ಅಭಿನಂದನೆ ಸಲ್ಲಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಅವರು ರಾಜ್ಯಪಾಲರಿಗೆ ಕಂಬಳದ ಬೆತ್ತ ನೀಡಿ ಗೌರವಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸೇನಾ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿ ಎಡಿಜಿ ಬ್ರೂಸ್ ಫೆರ್ಣಾಂಡೀಸ್, ಕಂಬಳದ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಪ್ರಮುಖರಾದ ರಂಜಿತ್ ಪೂಜಾರಿ, ಮುಖಂಡ ಕೃಷ್ಣ ಜೆ. ಪಾಲೇಮಾರ್, ಹಿರಿಯ ನ್ಯಾಯವಾದಿ ಕೆ.ಆರ್. ಪಂಡಿತ್, ಜಗದೀಶ್ ಅಧಿಕಾರಿ, ಮೇಘನಾಥ ಶೆಟ್ಟಿ, ದಿನೇಶ್ ಪುತ್ರನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಶೂನ್ಯ ತ್ಯಾಜ್ಯ ಕಂಬಳಕ್ಕೆ ಶ್ರಮಿಸಿದ ಕಮ್ಯುನಿಟಿ ಮೊಬಿಲೈಸರ್ ತಂಡವನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಪ್ರದಾನ ಮಾಡಲಾಯಿತು.