


ವಾರದ ಬೆಳಕು
ಓದುವ ಹವ್ಯಾಸ
ಒಂದಲ್ಲ ಒಂದು ಹವ್ಯಾಸವನ್ನು ಜೀವನದಲ್ಲಿ ರೂಢಿಸಿಕೊಳ್ಳದವರು ಬಹುತೇಕ ಯಾರೂ ಇಲ್ಲ. ಒಳ್ಳೆಯದೋ, ಕೆಟ್ಟದ್ದೋ ಬದುಕಿನ ಪಯಣದಲ್ಲಿ ಯಾವುದಾದರು ಒಂದಾದರೂ ಹವ್ಯಾಸ ಮನುಷ್ಯನಾದವನಿಗೆ ಇದ್ದೇ ಇರುತ್ತದೆ. ಯಾವ ಹವ್ಯಾಸವೂ ಇಲ್ಲದವನ ಜೀವನ ನೀರಸ.
ಓದುವ ಹವ್ಯಾಸ ಅತ್ಯುತ್ತಮ ಹವ್ಯಾಸಗಳ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿದೆ. ಹೇಗೆ ನೋಡಿದರೂ ಓದುವ ಹವ್ಯಾಸದಿಂದ ಆಗಬಹುದಾದಷ್ಟು ಲಾಭ, ಪ್ರಯೋಜನ, ಪರಿಣಾಮ ಬೇರೆ ಯಾವುದೇ ಹವ್ಯಾಸದಿಂದಲೂ ಲಭಿಸಲಾರದು. ಅತ್ಯಂತ ಸಲುಭದ, ಸರಳವಾದ, ದೈಹಿಕ ಶ್ರಮವೂ ಇಲ್ಲದ ಅತೀ ಕಡಿಮೆ ಕರ್ಚಿನ ಹವ್ಯಾಸವೆಂದರೆ ಅದು ಓದುವ ಹವ್ಯಾಸ.
ಮಕ್ಕಳು, ಮಹಿಳೆಯರು, ವೃದ್ಧರು ಸಹ ಅಳವಡಿಸಕೊಳ್ಳಬಹುದಾದ ಹವ್ಯಾಸವಿದು. ನಯಾ ಪೈಸೆ ಕರ್ಚು ಕೂಡಾ ಮಾಡದೆ ಆರಂಭಿಸಿ ಉಳಿಸಿ ಬೆಳೆಸಿಕೊಳ್ಳಬಹುದಾದ ಹವ್ಯಾಸವೂ ಹೌದು.
ನಾವು ಓದುವ ಯಾವುದೇ ಒಂದು ಉತ್ತಮ ಪುಸ್ತಕ ಇರಬಹುದು, ಆ ಪುಸ್ತಕ ಏಕ ಕಾಲಕ್ಕೆ ತಾಯಿ – ತಂದೆ, ಅಣ್ಣ – ಅಕ್ಕ, ಗೆಳೆಯ – ಗೆಳತಿ, ಅಧ್ಯಾಪಕ, ವೈದ್ಯ, ವಕೀಲ, ತರಬೇತುದಾರ – ಸಂಪನ್ಮೂಲ ಶಕ್ತಿ, ಸಮರ್ಥ ಮಾರ್ಗದರ್ಶಕ ಇತ್ಯಾದಿ ಇತ್ಯಾದಿಯಾಗಿ ಕೆಲಸ ಮಾಡುತ್ತದೆ. ಮನೋರಂಜನೆಯನ್ನೂ ನೀಡಬಲ್ಲುದು.
ನಾವು ಯಾವ ಪುಸ್ತಕವನ್ನು ಓದುತ್ತೇವೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ. ಓದಲೇಬಾರದ ಪುಸ್ತಕ ಎಂದು ಯಾವುದೂ ಇಲ್ಲ. ಯಾವ ಪುಸ್ತಕ ಓದಿದರೂ ತೊಂದರೆ ಇಲ್ಲ. ಯಾವ ವಿಷಯದ ಮೇಲೆ ಹೆಚ್ಚು ಆಸಕ್ತಿ, ಕುತೂಹಲ ಇದೆಯೋ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನೇ ಆರಂಭದ, ಮೊದಲ ಓದಿಗೆ ಆಯ್ಕೆ ಮಾಡುವುದು ಸೂಕ್ತ.
ಪಠ್ಯ ಪುಸ್ತಕಗಳ ಓದು ಇದ್ದದ್ದೇ. ಇದು ಕೇವಲ, ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಪಡೆಯಬೇಕಾದ ಅಂಕಗಳಿಕೆಗಾಗಿ ಇರುತ್ತದೆಯಷ್ಟೇ ಹೊರತು, ಇದರಿಂದ ಹೆಚ್ಚಿನದೇನೂ ಪ್ರಯೋಜನವಿಲ್ಲ. ನಿರ್ಧಿಷ್ಟ ವಿಷಯದಲ್ಲಿ ಕೌಶಲ್ಯವಿಲ್ಲದಿದ್ದಲ್ಲಿ ಬಹುತೇಕ ಸಂದರ್ಭಗಳಲ್ಲಿ ಪದವಿ ಪ್ರಮಾಣಗಳಿಂದ ಲಾಭವೂ ಆಗುವುದಿಲ್ಲ. ಆದರೆ ಪಠ್ಯೇತರ ಪುಸ್ತಕಗಳ ಓದು ಮತ್ರು ಅಗತ್ಯವಿರುವ ಕೌಶಲಗಳಿಂದ ಉದ್ಯೋಗ ಗಳಿಕೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಸಾಧ್ಯ. ಮಾದರಿ – ಆದರ್ಶವಾಗಲು ಸಾಧ್ಯ. ಕೌಶಲ್ಯಕ್ಕೂ ಪಠ್ಯೇತರ ಪುಸ್ತಕಗಳ ಓದು ಬಹಳ ಮುಖ್ಯ.
ಹಿಂದೆ, ಮೊಬೈಲ್ ಬರುವ ಮೊದಲು ಪತ್ರಮೈತ್ರಿ (ಪೆನ್ ಫ್ರೆಂಡ್ಸ್) ಎಂಬೊಂದು ಹವ್ಯಾಸವಿತ್ತು. ಪತ್ರಮೈತ್ರಿ ಬೆಳೆಸುವವರಿಗಾಗಿಯೇ ಕೆಲ ವಾರ, ಮಾಸ ಪತ್ರಿಕೆಗಳಲ್ಲಿ “ಸ್ನೇಹಸೇತು” ಎಂಬಿತ್ಯಾದಿ ವಿವಿಧ ಹೆಸರುಗಳಲ್ಲಿ ಅಂಕಣಗಳಿರುತ್ತಿತ್ತು. ಇದರಲ್ಲಿ ಅವರವರ ವಿಳಾಸದ ಜೊತೆಗೆ ಅವರ ಹವ್ಯಾಸ ತಿಳಿಸುವುದೇ ಮುಖ್ಯವಾಗಿತ್ತು. ಸಮಾನ ಹವ್ಯಾಸವಿರುವವರು ಪರಸ್ಪರ ಪತ್ರ ಬರೆದು ಮೈತ್ರಿ (ಸ್ನೇಹ) ಸಾಧಿಸುತ್ತಿದ್ದರು. ಓದುವ ಹವ್ಯಾಸವಿರುವವರೂ ದೂರದೂರದ ಊರಿನವರೂ ಪರಸ್ಪರ ಗೆಳೆಯರಾಗುತ್ತಿದ್ದರು. ವಿವಿಧ ಪುಸ್ತಕಗಳ ಬಗ್ಗೆ, ತಾವು ಓದಿದ ಪುಸ್ತಕಗಳ ಬಗ್ಗೆ ಚರ್ಚೆ, ಸಂವಾದ ನಡೆಸುತ್ತಿದ್ದರು.
ಓದುವ ಹವ್ಯಾಸವಿರುವವರು, ಊರಿನವರು, ಪಕ್ಕದೂರಿನವರು ಅಥವಾ ಆಗಾಗ ಭೇಟಿಯಾಗುವವರಾದರೆ ಪುಸ್ತಕಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ವಿವಿಧ ಪುಸ್ತಕಗಳನ್ನು ಹಣ ಕೊಟ್ಟು ಖರೀದಿಸದೆ ಓದಬಹುದು. ಇಲ್ಲಿ ಓದಿದ ಪುಸ್ತಕಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಪುಸ್ತಕ ಸಂವಾದವನ್ನೂ ನಡೆಸಬಹುದು.
ಪ್ರತೀ ಗ್ರಾಮ ಪಂಚಾಯತ್ ಹಂತದಲ್ಲೂ ಗ್ರಂಥಾಲಯವಿರುತ್ತದೆ. ಇಲ್ಲಿ ಕೇವಲ 41 ರೂಪಾಯಿ ಪಾಚತಿಸಿದರೆ ಸಾಕು. ಗ್ರಂಥಾಲಯದ ಸದಸ್ಯತ್ವ ಲಭ್ಯ. ನಂತರ ಪ್ರತೀ ವಾರವೂ ಮೂರು ಪುಸ್ತಕಗಳನ್ನು ಪಡೆದುಕೊಂಡು ಮನೆಗೊಯ್ದು ಓದಬಹುದು. ನಗರ ವ್ಯಾಪ್ತಿಯಲ್ಲೂ ಅಲ್ಲಲ್ಲಿ ಗ್ರಂಥಾಲಯವಿರುತ್ತದೆ. ಹೆಚ್ಚಿನ , ದೊಡ್ಡ ಮಟ್ಟದ, ಅಧ್ಯಯನ – ಸಂಶೋಧನಾ ಓದಿಗಾಗಿ ನಗರ ಕೇಂದ್ರ ಕೇಂದ್ರ ಗ್ರಂಥಾಲಯ, ಜಿಲ್ಲಾ ಕೇಂದ್ರ ಗ್ರಂಥಾಲಯಗಳ ಸದಸ್ಯತ್ವಗಳನ್ನೂ ಪಡೆಯಬಹುದು. ಇಲ್ಲೆಲ್ಲ ವಾಚನಾಲಯಗಳೂ ಇವೆ. ವಾಚನಾಲಯಗಳಲ್ಲಿ ಕುಳಿತು ದಿನ, ವಾರ, ಪಾಕ್ಷಿಕ, ಮಾಸ ಪತ್ರಿಕೆಗಳೊಂದಿಗೆ ಪುಸ್ತಕಗಳನ್ನೂ ಓದಬಹುದಾಗಿದೆ. ಎಲ್ಲಾ ಹಂತದ ವಿದ್ಯಾರ್ಥಿಗಳಿಗೂ ಅವರವರ ಶಾಲಾ – ಕಾಲೇಜುಗಳಲ್ಲಿ ಗ್ರಂಥಾಲಯಗಳಿರುತ್ತವೆ. ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಂಡು ಓದುವ ಹವ್ಯಾಸವನ್ನು ಎಲ್ಲರೂ ವೃದ್ಧಿಗೊಳಿಸಬಹುದು.
ಮನೆಯಲ್ಲಿ ಕುಳಿತು ಓದುವಂತೆ, ಪ್ರಯಾಣದ ಸಂದರ್ಭಗಳಲ್ಲಿಯೂ ಬಸ್ ಗಳಲ್ಲಿ, ರೈಲುಗಳಲ್ಲಿ ಓದುವ ಮೂಲಕ ಸಮಯದ ಸದ್ವಿನಿಯೋಗ ಮಾಡಿಕೊಳ್ಳಬಹುದು. ಬಸ್ ಗೆ ಕಾಯುವ ಸಂದರ್ಭವಿದ್ದಾಗಲೂ ಓದಬಹುದು. ಇದಕ್ಕಾಗಿ ಯಾವತ್ತೂ ನಮ್ಮ ಬ್ಯಾಗ್ ನಲ್ಲಿ ಒಂದೆರಡು ಪುಸ್ತಕಗಳನ್ನು ಇರಿಸಿಕೊಳ್ಳುವುದು ಒಳ್ಳೆಯದು.
ಓದುತ್ತಾ ಓದುತ್ತಾ ಹೋದಂತೆ ನಿಧಾನವಾಗಿ ಬರೆಯುವ ಪ್ರಯತ್ನ ನಡೆಸಬಹುದು. ಹೀಗೆ ಬರೆಯುವ ಪ್ರಯತ್ನದಲ್ಲಿ ಮುಂದುವರಿದರೆ ಉತ್ತಮ ಓದುಗನಾದವನು ಒಳ್ಳೆಯ ಕವಿ, ಕಥೆಗಾರ, ಲೇಖಕ, ಸಾಹಿತಿ ಆಗುವುದು ಖಚಿತ. ಓದಿದ ಬಳಿಕ ಓದಿದ ಪುಸ್ತಕಗಳ ಬರಹಗಾರರಿಗೆ ಪತ್ರ ಬರೆದು ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಬರಹಗಾರರ ಜೊತೆಗೂ ಒಂದೊಳ್ಳೆಯ ಸಂಬಂಧ ಇರಿಸಿಕೊಳ್ಳಲು ಅವಕಾಶವಿದೆ.
ಒಂದೊಳ್ಳೆಯ ಪುಸ್ತಕ, ಸಮರ್ಥ – ಹಿರಿಯ ಗುರುವೂ ಹೌದು. ಪುಸ್ತಕಗಳನ್ನು ಓದುವ ಹವ್ಯಾಸದಿಂದ ಆತ್ಮ ವಿಶ್ವಾಸ, ಧೈರ್ಯ, ಅರಿವು ನಮ್ಮದಾಗುತ್ತದೆ. ಓದುಗನೂ ಒಂದೊಳ್ಳೆಯ ಸಂಪನ್ಮೂಲ ವ್ಯಕ್ತಿಯಾಗುತ್ತಾನೆ.




































