ಕಾರ್ಕಳ : ಕಲಿಕೆ ಜೀವನದ ಪ್ರಗತಿಗೆ ಪೂರಕವಾಗಿದೆ. ಹದಿಹರೆಯು ಬದುಕಿನ ಮಹತ್ವದ ಕಾಲಘಟ್ಟವಾಗಿದೆ. ಆ ವಯಸ್ಸಿನ ಮನಸ್ಸಿಗೆ ಬದುಕನ್ನೇ ಬದಲಾಯಿಸುವ ಶಕ್ತಿ ಇದೆ ಎಂದು ಕಾರ್ಕಳ ನಗರದ ಠಾಣಾಧಿಕಾರಿ ಮುರಳೀಧರ ನಾಯ್ಕ ಅಭಿಮತ ವ್ಯಕ್ತ ಪಡಿಸಿದರು.
ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಮಾದಕ ವಸ್ತು ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸುವ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸಮಾಜವು ಗುರುಗಳನ್ನು ಸೃಷ್ಟಿ ಮಾಡಿರುವುದು ವಿದ್ಯಾರ್ಥಿಗಳನ್ನು ಸನ್ಮಾರ್ಗದತ್ತ ಕೊಂಡು ಹೋಗಲೆಂದು. ಅವರ ಹಿತವಚನ, ಕಾಳಜಿ, ಪ್ರೀತಿ ವಿದ್ಯಾರ್ಥಿಗಳ ಪಾಲಿಗೆ ದೀಪದ ಬೆಳಕಾಗಿ ಪ್ರಜ್ವಲಿಸಬೇಕು ಎಂದರು.
ಡ್ರಗ್ಸ್ ಕುರಿತ ಜಾಗೃತಿ ಬಹು ಮುಖ್ಯವಾಗಿದೆ. ಯುವಸಮುದಾಯವು ಮಾದಕ ವಸ್ತುಗಳ ವ್ಯಸನಿಗಳಾಗಿ ಅನ್ಯ ದಾರಿಗೆ ಹೋಗಬಾರದೆಂಬ ಕಳಕಳಿಯೇ ಇದರ ಮೂಲ ಉದ್ದೇಶ. ದೇಶದ ಭವ್ಯ ಪರಂಪರೆ ಬೆಳೆಯುವುದು ನಾಲ್ಕು ಗೋಡೆಗಳ ನಡುವೆ.ಗುರುವಿನ ಮಾರ್ಗದರ್ಶನವನ್ನು ಸರಿಯಾದ ರೀತಿಯಲ್ಧಿ ಉಪಯೋಗಿಸಿಕೊಳ್ಳುವತ್ತ ಗಮನ ಹರಿಸಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಬೆರಳ ತುದಿಯಲ್ಲಿ ಇರುವಾಗ,ದೈಹಿಕವಾಗಿ ಮನಸಿಕವಾಗಿ ಕುಗ್ಗಿಸುವ ಇಂತಹ ಚಟುವಟಿಕೆಗಳಿಗೆ ಮಾರಕವಾಗುವ ಡ್ರಗ್ಸ್ ನಂತಹ ಅಭ್ಯಾಸಗಳನ್ನು ಬದುಕಿಗೆ ತರಬಾರದು ಎನ್ನುವುದರೊಂದಿಗೆ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ವಿಶ್ವದಲ್ಲಿ ಭಾರತ ಅತೀ ಹೆಚ್ಚು ಯುವ ಜನತೆ ಹೊಂದಿರುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುವ ಜನತೆಯಲ್ಲಿ ಇರುವ ಕೌಶಲಗಳು ಇಡೀ ವಿಶ್ವವನ್ನೇ ಭಾರತದೆಡೆಗೆ ಗಮನ ಸೆಳೆಯುವಂತೆ ಮಾಡುವ ಶಕ್ತಿ ಇದೆ. ವ್ಯಸನ ಮುಕ್ತ ಸಮಾಜ ರೂಪಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದರು.
ಪಾಶ್ಚಿಮಾತ್ಯ ಸಂಸ್ಕ್ರತಿಗಳಿಗೆ ಮೊರೆ ಹೋಗಿರುವ ಪರಿಣಾಮವಾಗಿ ಇಂದು ಹಳ್ಳಿ ಹಳ್ಳಿಗಳಿಗೂ ಮಾದಕ ವಸ್ತುಗಳ ಸರಬರಾಜು ಆಗುತ್ತಿದೆ. ಯುವ ಜನರು ಹೆಚ್ಚು ಹೆಚ್ಚಾಗಿ ಅದರ ಸೆಳೆತಕ್ಕೆ ಒಳಗಾಗಿ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ತಂದೊಡ್ಡಿರುವುದು ವಿಷಾದನೀಯವೆಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ.ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಈಶ್ವರ ಭಟ್
ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಪ್ರೊ.ಶಂಕರ್ ಕುಡ್ವ ನಿರೂಪಿಸಿದರು. ಸಹ ವಿದ್ಯಾರ್ಥಿ ಕ್ಷೇಮಪಾಲನಾ
ಅಧಿಕಾರಿ ಪ್ರೊ.ನಂದಕಿಶೋರ್ ಧನ್ಯವಾದ ಸಮರ್ಪಿಸಿದರು.






































