ಓಡಿಬಂದ ವಿವಾಹಿತೆ ಪ್ರಕರಣಕ ಸುಖ್ಯಾಂತ!

Picture of RB NEWS

RB NEWS

Bureau Report


ಕಾರ್ಕಳ : ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿ ಬಂದ ವಿವಾಹಿತ ಮಹಿಳೆಯನ್ನು ಕಾರ್ಕಳ ನಗರ ಪೊಲೀಸರು ಸಂಧಾನದ ಮೂಲಕ ಪತಿಗೆ ಒಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ.
ಗಂಗಾವತಿ ಮೂಲದ ಭಾಗ್ಯ (22) ಐದು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕುರುಗೋಡು ನಿವಾಸಿ ಬಸವರಾಜರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಪುಟ್ಟ ಮಕ್ಕಳು ಇದ್ದಾರೆ. ವಿವಾಹದ ಬಳಿಕ ದಂಪತಿ ಬೆಂಗಳೂರಿನ ರಾಮನಗರದಲ್ಲಿ ವಾಸವಿದ್ದು, ಬಸವರಾಜ ಗಾರೆ ಮೇಸ್ತ್ರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಈ ನಡುವೆ ಭಾಗ್ಯಳಿಗೆ ತನ್ನ ಊರಾದ ಗಂಗಾವತಿಯ ಪರಸಪ್ಪ ಎಂಬ ಯುವಕನ ಪರಿಚಯವಾಗಿ, ಅದು ಬಳಿಕ ಪ್ರೇಮ ಸಂಬಂಧವಾಗಿ ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 10ರಂದು ಭಾಗ್ಯ ತನ್ನ ಕುಟುಂಬವನ್ನು ಬಿಟ್ಟು ಪ್ರಿಯಕರನೊಂದಿಗೆ ಮನೆ ತೊರೆದಿದ್ದಳು.
ಪರಸಪ್ಪ ಈ ಹಿಂದೆ ಕಾರ್ಕಳದ ಕಲ್ಲುಕೋರೆಯಲ್ಲಿ ಕೆಲಸ ಮಾಡಿದ್ದ ಹಿನ್ನೆಲೆ, ಪರಿಚಿತರ ಸಹಾಯದಿಂದ ಕಾರ್ಕಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಪತ್ನಿ ನಾಪತ್ತೆಯಾಗಿರುವುದರಿಂದ ಆತಂಕಗೊಂಡ ಬಸವರಾಜ ಹುಡುಕಾಟ ನಡೆಸಿ, ಪರಸಪ್ಪನ ಅಣ್ಣನ ಮೂಲಕ ಇಬ್ಬರೂ ಕಾರ್ಕಳದಲ್ಲಿರುವ ಮಾಹಿತಿ ತಿಳಿದುಕೊಂಡಿದ್ದಾರೆ.
ಈ ಸಂಬಂಧ ಕಾರ್ಕಳ ನಗರ ಠಾಣೆಗೆ ಮಾಹಿತಿ ತಲುಪಿದ ಹಿನ್ನೆಲೆಯಲ್ಲಿ ಪೊಲೀಸರು ಭಾಗ್ಯ ಹಾಗೂ ಪರಸಪ್ಪನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಆರಂಭದಲ್ಲಿ ಭಾಗ್ಯ ಪ್ರಿಯಕರನನ್ನು ಬಿಡಲು ನಿರಾಕರಿಸಿದ್ದರೆ, ಪರಸಪ್ಪನೂ ಪೊಲೀಸರ ಮಾತಿಗೆ ಒಪ್ಪಿಗೆ ನೀಡಲಿಲ್ಲ. ಬಳಿಕ ಪರಸಪ್ಪನ ಮನೆಯವರು ಮಧ್ಯಪ್ರವೇಶಿಸಿ ಆತನನ್ನು ಅಲ್ಲಿಂದ ಕರೆದುಕೊಂಡು ಹೋದರು.
ನಂತರ ಭಾಗ್ಯಳಿಗೆ ಪೊಲೀಸರು ಕುಟುಂಬದ ಹೊಣೆಗಾರಿಕೆ ಬಗ್ಗೆ ಸಮಜಾಯಿಷಿ ನೀಡಿ ಮನವೊಲಿಸಿದರು. ಕೊನೆಗೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡು, ಇನ್ನು ಮುಂದೆ ಪತಿ ಮತ್ತು ಮಕ್ಕಳೊಂದಿಗೆ ಜೀವನ ನಡೆಸುವುದಾಗಿ ಒಪ್ಪಿಕೊಂಡಳು. ಇದರಿಂದ ಪ್ರಕರಣ ಸುಖಾಂತ್ಯ ಕಂಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top