
ಒತ್ತಡ ನಿವಾರಣೆಗೆ ಯೋಗದ ಮಹತ್ವ -ಡಾ.ಮಾಲತಿ ಪೈ
ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೆಲಸಕ್ಕೆ ಹೋದರೂ ಒತ್ತಡ, ಕೆಲಸವಿಲ್ಲದೆ ಮನೆಯಲ್ಲಿ ಕುಳಿತರೂ ಒತ್ತಡ ಜೀವನ ಮುಂದೆ ಹೇಗೋ ಎನ್ನುವ ಆತಂಕ. ಒತ್ತಡ ಹಾಗೂ ಆತಂಕವನ್ನು ಹೋಗಲಾಡಿಸಲು ಯೋಗಾಸನ, ಧ್ಯಾನದಿಂದ ಮಾತ್ರ ಸಾಧ್ಯ.
ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೆಲಸವಿದ್ದರೂ, ಕೆಲಸವಿಲ್ಲದಿದ್ದರೂ ಒತ್ತಡವು ಜೀವನ ಮುಂದೆ ಹೇಗೋ ಎನ್ನುವ ಆತಂಕ ಕಾಡಲು ಶುರುವಾಗುತ್ತದೆ.
ಒತ್ತಡ ಹಾಗೂ ಆತಂಕವನ್ನು ಹೋಗಲಾಡಿಸಲು ಯೋಗಾಸನ, ಧ್ಯಾನದಿಂದ ಮಾತ್ರ ಸಾಧ್ಯ. ಹೌದು ನಿತ್ಯ ಕೆಲವು ಆಸನಗಳನ್ನು ಮಾಡುವುದರಿಂದ ಒತ್ತಡ, ಆತಂಕಗಳೆಲ್ಲವೂ ದೂರವಾಗಿ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ.
ಆತಂಕ, ಒತ್ತಡವಿಲ್ಲದ ಜನರನ್ನು ಹುಡುಕುವುದು ಕಷ್ಟ ಸಾಧ್ಯ. ತಾವು ನಾರ್ಮಲ್ ಆಗಿರುವಂತೆ ಬಿಂಬಿಸುತ್ತಾರೆ, ಆದರೆ ತುಂಬಾ ದಿನಗಳ ಕಾಲ ಒತ್ತಡವನ್ನು ಹುದುಗಿಟ್ಟುಕೊಳ್ಳಲು ಸಾಧ್ಯವಿಲ್ಲ.
ಒತ್ತಡ ಎಷ್ಟಿದೆ?
ಇತ್ತೀಚೆಗೆ ನಡೆದ ಸಮೀಕ್ಷೆಯ ಪ್ರಕಾರ ಜನರಲ್ಲಿ ಒತ್ತಡದ ಪ್ರಮಾಣ ಬಹಳ ಹೆಚ್ಚಿರುವುದು ಕಂಡುಬಂದಿದೆ.
ಕೇವಲ ಆರ್ಥಿಕ ಪರಿಸ್ಥಿತಿ, ಉದ್ಯೋಗ, ಕುಟುಂಬ ಅಷ್ಟೇ ಅಲ್ಲದೆ ಆಹಾರ ಭದ್ರತೆ, ಇನ್ಫ್ಲೇಷನ್, ಯುದ್ಧ, ಆರೋಗ್ಯ, ಹವಾಮಾನ ಬದಲಾವಣೆ ಸೇರಿದಂತೆ ಇತರೆ ವಿಷಯಗಳ ಕುರಿತು ಒತ್ತಡವನ್ನು ಎದುರಿಸುತ್ತಿದ್ದಾರೆ.
2021ರಲ್ಲಿ ಅಮೆರಿಕದಲ್ಲಿ ಶೇ.57ರಷ್ಟು ಯುವಕರು ಹಣದ ಬಗ್ಗೆ ಹೆಚ್ಚು ಒತ್ತಡವನ್ನು ಎದುರಿಸುತ್ತಿದ್ದರು, 2022 ರಲ್ಲಿ ಶೇ.65ರಷ್ಟು ಮಂದಿ, ಇನ್ನೂ ಶೇ.80ರಷ್ಟು ಮಂದಿ ಉಕ್ರೇನ್- ರಷ್ಯಾ ನಡುವಿನ ಯುದ್ಧದ ಕುರಿತು ಆತಂಕವನ್ನು ಎದುರಿಸುತ್ತಿದ್ದಾರೆ.
ಒತ್ತಡ ನಿವಾರಣೆಗೆ ಉತ್ತಮ ಯೋಗ
ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದಿಂದ ಬಳಲುತ್ತಿರುತ್ತಾರೆ. ಸುತ್ತಮುತ್ತಲಿನ ಪರಿಸರ ಮತ್ತು ಬಿಡುವೇ ಇಲ್ಲದ ಆಧುನಿಕ ನಗರದ ಜೀವನ ಶೈಲಿಯಿಂದಾಗಿ ಸಾಕಷ್ಟು ಒತ್ತಡಗಳಿಗೆ ಗುರಿಯಾಗುತ್ತಿದ್ದಾರೆ.
ಒತ್ತಡ ಬರಲು ನಾನಾ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಕೆಲಸದ ಒತ್ತಡ ಇತ್ಯಾದಿ. ವೈಯಕ್ತಿಕ ಸಂಬಂಧಗಳಲ್ಲಿನ ಏರುಪೇರು, ಕಿರಿಕಿರಿ ಉಂಟಾಗುವಿಕೆ, ಸುತ್ತಮುತ್ತಲಿನ ಪರಿಸರ ಮಾಲಿನ್ಯ, ಜೀವನದಲ್ಲಿ ಪದೇ ಪದೇ ಎದುರಾಗುವ ಸೋಲಿನಿಂದ ಉಂಟಾಗುವ ಹತಾಶೆ ಮುಂತಾದವು. ಬೆಳಗಿನಿಂದಲೇ ಸಮಸ್ಯೆಗಳು ಆರಂಭವಾಗುತ್ತವೆ.
ಉದಾ: ಅನಗತ್ಯದ ಮೊಬೈಲ್ ಕರೆಗಳ ಕಿರಿಕಿರಿ, ಸ್ನಾನಕ್ಕೆಂದು ಬಾತ್ ರೂಮಿಗೆ ಹೋದರೆ ಬಿಸಿನೀರು ಇಲ್ಲದಿರುವುದು, ಸೋಪ್ ಬಾಕ್ಸ್ ಖಾಲಿ, ಶಾಲಾ ಕಾಲೇಜುಗಳಿಗೆ, ಕಚೇರಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದೇ ಇರುವುದು. ಟ್ರಾಫಿಕ್ ಜಾಮ್, ಮೇಲಧಿಕಾರಿಗಳಿಂದ ಒತ್ತಡ, ಪರೀಕ್ಷೆ ಭಯ, ಗೃಹಿಣಿಯರಿಗೆ ಮನೆಕೆಲಸದ ಒತ್ತಡ, ಇನ್ನು ಉದ್ಯೋಗಸ್ಥ ಮಹಿಳೆಯರಿಗಂತೂ ಡಬಲ್ ಟೆನ್ಷನ್! ಇಂತಹ ಒತ್ತಡಗಳಿಂದ ನಾನಾ ಬಗೆಯ ಅನಾರೋಗ್ಯಗಳು ಒದಗಿ ಬರುತ್ತವೆ.
ನಮ್ಮ ಮನಸ್ಸು ನಿಯಂತ್ರಣಕ್ಕೆ ಸಿಗದೆ ಓಡಾಡಿ ಬಸವಳಿದಿರುತ್ತದೆ. ನಿದ್ರೆ, ಆಹಾರ, ವಿಹಾರ… ಇತ್ಯಾದಿ ವಿಚಾರಗಳಲ್ಲಿ ಕೆಲವೊಮ್ಮೆ ವ್ಯತ್ಯಾಸ ಕಂಡುಬರುತ್ತದೆ. ಹೆಚ್ಚು ಒತ್ತಡ ನಮ್ಮ ಮನಸ್ಸಿನ ಮೇಲೆ ಬಿದ್ದಾಗ ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಇತ್ಯಾದಿ ಕಾಯಿಲೆಗಳು ಬಾಧಿಸುತ್ತವೆ.
ಈ ಎಲ್ಲಾ ಸಮಸ್ಯೆಗಳಿಗೆ ಭಾರತೀಯ ಕಲೆಯಾದ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಸಹಕಾರಿಯಾಗಬಹುದು.
ಏಕಕಾಲಕ್ಕೆ ಹಲವು ಕೆಲಸ ಕಾರ್ಯಗಳ ಒತ್ತಡವಿದ್ದರೂ ಮನಸನ್ನು ನಿಯಂತ್ರಣಗೊಳಿಸುವ ವಿಧಾನ ಗೊತ್ತಿದ್ದರೆ ಸಮರ್ಪಕವಾಗಿ ತನ್ನ ಕೆಲಸ ಕಾರ್ಯಗಳನ್ನು ಹಾಯಾಗಿ ಆರಾಮಾವಾಗಿ ನಿರ್ವಹಿಸಬಹುದು. ಮಾನಸಿಕ ಹಾಗೂ ಶಾರೀರಿಕ ನೆಮ್ಮದಿಗೆ ಪ್ರತಿ ದಿನ ಅರ್ಧ ಗಂಟೆಯಿಂದ ಒಂದು ಗಂಟೆಯ ಯೋಗ ಮಾಡುವುದು ಅತ್ಯಾವಶ್ಯಕ.
ಒತ್ತಡಗಳ ನಿರ್ವಹಣೆ ಮತ್ತು ಆರೋಗ್ಯ
ಒತ್ತಡವೆಂಬುದು ಸಾರ್ವತ್ರಿಕ. ಪ್ರತಿಯೊಬ್ಬರೂ ತಂತಮ್ಮ ಮಟ್ಟದಲ್ಲಿ ಒತ್ತಡವನ್ನು ಅನುಭವಿಸುತ್ತಲೇ ಇರುತ್ತಾರೆ. ಒತ್ತಡಗಳನ್ನು ಸಹಿಸಬಲ್ಲ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ. ಒತ್ತಡಗಳು ಆರೋಗ್ಯದ ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳನ್ನು ಬೀರಬಲ್ಲವು. ಇಂದಿನ ಬದುಕಿನ ಧಾವಂತದಲ್ಲಿ ಒತ್ತಡವೆಂಬುದು ಕಡ್ಡಾಯವಾಗಿ ಹೋಗಿದೆ. ಹೀಗಾಗಿ, ಒತ್ತಡವನ್ನು ನಿರ್ವಹಿಸುವ ಮಾರ್ಗಗಳನ್ನು ಕಂಡುಕೊಂಡು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಹಲವಾರು ಸಂಗತಿಗಳು ಒತ್ತಡಕ್ಕೆ ಕಾರಣವಾಗಬಹುದು. ನಮ್ಮ ಮನಸ್ಸು ಬದಲಾವಣೆಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ; ಆತಂಕ ಪಡುತ್ತದೆ. ಕೆಲವೊಮ್ಮೆ ನಮ್ಮ ಆತ್ಮಾಭಿಮಾನಕ್ಕೆ ಧಕ್ಕೆಯಾಗುವ ಸಂದರ್ಭಗಳಲ್ಲಿ ಜೀವನದ ಮೇಲೆ ನಮ್ಮ ನಿಯಂತ್ರಣ ತಪ್ಪಿಹೋದಂತೆ ಅನಿಸುತ್ತದೆ. ಆಗಲೂ ತೀವ್ರ ಒತ್ತಡದ ಭಾವನೆ ಇರುತ್ತದೆ. ಪ್ರಸ್ತುತ ಸಮಾಜದಲ್ಲಿ ವೃತ್ತಿಗೆ ಸಂಬಂಧಿಸಿದ ಒತ್ತಡಗಳು ಅತ್ಯಂತ ಹೆಚ್ಚು. ಇಂತಹ ಒತ್ತಡಗಳನ್ನು ನಿರ್ವಹಿಸುವ ವಿಧಾನಗಳು ಪ್ರತಿಯೊಬ್ಬರಿಗೂ ವಿಭಿನ್ನ. ನಮ್ಮ ಜೆನೆಟಿಕ್ ರಚನೆ, ಜೀವನದಲ್ಲಿ ಹಿಂದೆ ನಡೆದ ಘಟನೆಗಳು, ವ್ಯಕ್ತಿತ್ವ, ಸಾಮಾಜಿಕ ಪರಿಸರ, ಆರ್ಥಿಕ ಪರಿಸ್ಥಿತಿಗಳು, ಮನಃಸ್ಥಿತಿ, ಮೊದಲಾದುವು ಒತ್ತಡ ನಿರ್ವಹಣೆಯಲ್ಲಿ ಪಾತ್ರ ವಹಿಸುತ್ತವೆ.
ಒತ್ತಡದ ವೇಳೆ ಶರೀರದ ಹಾರ್ಮೋನುಗಳ ಮಟ್ಟದಲ್ಲಿ ಏರುಪೇರಾಗುತ್ತದೆ. ಇದು ಶರೀರದ ರಕ್ಷಕ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ತೋರುತ್ತದೆ. ಇದರಿಂದ ಹಲವಾರು ಕಾಯಿಲೆಗಳಿಗೆ ಶರೀರ ನೆಲೆಯಾಗಬಹುದು. ಅಲ್ಲದೇ, ಮಧುಮೇಹದಂತಹ ದೀರ್ಘಕಾಲಿಕ ಕಾಯಿಲೆಗಳ ನಿಯಂತ್ರಣ ತಪ್ಪುತ್ತದೆ. ಆತಂಕ, ಭೀತಿ, ದುಃಖ, ಕಿರಿಕಿರಿ, ಖಿನ್ನತೆ, ಹತಾಶೆ, ಅನಗತ್ಯ ಕೋಪ, ತಾಳ್ಮೆ ಕಳೆದುಕೊಳ್ಳುವುದು.
ಸತತ ಒತ್ತಡದ ಪರಿಸ್ಥಿತಿ ಆರೋಗ್ಯಕ್ಕೆ ಹಿತಕರವಲ್ಲ. ತಲೆನೋವು, ಅಜೀರ್ಣ, ಉಸಿರಾಟದ ಏರುಪೇರು, ಹೃದಯದ ಏರುಬಡಿತ, ಮೈ-ಕೈ ನೋವು, ಸಂಕಟ ಮೊದಲಾದುವು ಒತ್ತಡದ ಕಾರಣದಿಂದ ಭೌತಿಕ ಶರೀರದ ಆಗುವ ಬದಲಾವಣೆಗಳು. ಒತ್ತಡದ ಕಾರಣದಿಂದ ಉಂಟಾಗುವ ಅನಾರೋಗ್ಯಗಳಿಂದ ಬದುಕಿನಲ್ಲಿ ಅಧಿಕ ಒತ್ತಡದ ಅಸ್ತಿತ್ವವನ್ನು ಮನಗಾಣಬೇಕು; ಒತ್ತಡವನ್ನು ಹೇರುತ್ತಿರುವ ಪರಿಸ್ಥಿತಿಗಳನ್ನು ವಿಶ್ಲೇಷಿಸಬೇಕು. ಕೆಲವೊಮ್ಮೆ ಇದು ಸುಲಭಸಾಧ್ಯವಲ್ಲ. ನಮಗೇ ಅರಿವಿಲ್ಲದ ಯಾವುದೋ ಬದಲಾವಣೆ, ಹೊಂದಾಣಿಕೆಯಾಗದ ಸಂಬಂಧಗಳು ಒತ್ತಡದ ಮೂಲಗಳಾಗಿರಬಹುದು. ಬಹುತೇಕ ಸಂದರ್ಭಗಳಲ್ಲಿ ನಮ್ಮ ಆಲೋಚನೆಗಳು, ವರ್ತನೆಗಳು, ಭಾವನೆಗಳ ಮೇಲೆ ನಿಗಾ ಇರುವುದಿಲ್ಲ. ಹೀಗಾಗಿ ಆತ್ಮಾವಲೋಕನ ಕಷ್ಟವಾಗುತ್ತದೆ. ಇದರ ಪರಿಹಾರಕ್ಕಾಗಿ ನಮ್ಮ ವರ್ತನೆಗಳನ್ನು ಪ್ರಯತ್ನಪೂರ್ವಕವಾಗಿ ದಾಖಲಿಸಬೇಕು.
ಯಾವುದಾದರೂ ಸಂದರ್ಭದಲ್ಲಿ ನಮ್ಮ ವರ್ತನೆ ಅನಪೇಕ್ಷಿತವಾಗಿತ್ತೇ? ಹಾಗೆ ವರ್ತಿಸಿದ ನಂತರ ಮೂಡಿದ ಭಾವನೆಗಳೇನು? ಇದನ್ನು ಬದಲಾಯಿಸಲು ಸಾಧ್ಯವೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು,. ಇದರಿಂದ ಒತ್ತಡದ ಮೂಲಗಳನ್ನು ತಿಳಿಯಬಹುದು.
- ಕೆಲವು ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು; ಕೆಲವನ್ನು ಬದಲಾಯಿಸಬಹುದು; ಕೆಲವುದರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು; ಕೆಲವನ್ನು ಮಾತ್ರ ಒಪ್ಪಿಕೊಂಡೇ ಮುಂದುವರೆಯಬೇಕು. ಈ ನಾಲ್ಕು ಆಯ್ಕೆಗಳ ನಡುವೆ ಯಾವುದನ್ನು ಹೇಗೆ ಮಾಡಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು.
ಈ ಸಂದರ್ಭದಲ್ಲಿ ಆತ್ಮೀಯರು, ಮಾನಸಿಕ ತಜ್ಞರು, ಆಪ್ತಸಲಹೆಗಾರರು ನೆರವಾಗಬಲ್ಲರು. ನಮ್ಮ ಒತ್ತಡವನ್ನು ಎಲ್ಲರಲ್ಲೂ ಜಾಹೀರು ಮಾಡಿಕೊಳ್ಳುವುದು ಒಳ್ಳೆಯದಲ್ಲ. ತೀರಾ ಆಪ್ತರಾದ, ಸರಿಯಾದ ಪರಿಹಾರ ಸೂಚಿಸಬಲ್ಲ ಗೆಳೆಯರ, ಸಂಬಂಧಿಗಳ ಜೊತೆಗೆ ಮುಕ್ತವಾಗಿ ಮಾತನಾಡುವುದರಿಂದ ಸಮಸ್ಯೆಗಳು ಹಗುರವಾಗಬಲ್ಲವು.
ನಮ್ಮ ಮಿತಿಯನ್ನು ಮೀರಿದ ಕೆಲಸಗಳನ್ನು ಒಲ್ಲೆನೆನ್ನುವ ಮನಃಸ್ಥಿತಿ ಬೆಳೆಯಬೇಕು. ಎಲ್ಲರಿಗೂ ಒಳ್ಳೆಯವರಾಗುವ ಪ್ರಯತ್ನದಲ್ಲಿ ನಮ್ಮನ್ನು ನಾವು ದಹಿಸಿಕೊಳ್ಳಬಾರದು. ಒತ್ತಡವನ್ನು ಹೆಚ್ಚಿಸುವ ಜನರಿಂದ, ಸುದ್ದಿಮೂಲಗಳಿಂದ ದೂರವಿರುವುದು ಸೂಕ್ತ. ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ಸಂಚಾರ ದಟ್ಟಣೆಯಂತಹ ಪ್ರಸಂಗಗಳು ನಮ್ಮ ಒತ್ತಡದ ಮಟ್ಟವನ್ನು ಏರಿಸಲು ಬಿಡಬಾರದು.
ನಮ್ಮ ದೈನಂದಿನ ಕೆಲಸಗಳ ಪಟ್ಟಿಯನ್ನು ಸಾಧ್ಯವಾದಷ್ಟೂ ಹಗುರವಾಗಿಸಬೇಕು; ನಡು ನಡುವೆ ವಿಶ್ರಾಂತಿಗೆ, ಆತ್ಮಾವಲೋಕನಕ್ಕೆ, ವಿಶ್ಲೇಷಣೆಗೆ ಸ್ಥಳಾವಕಾಶ ದೊರೆಯಬೇಕು. ಕೆಲವೊಮ್ಮೆ ಪರಿಸ್ಥಿತಿಯ ಜೊತೆಗೆ ರಾಜಿಗೆ ಸಿದ್ಧವಿರಬೇಕಾಗುತ್ತದೆ. ಸಮತೋಲಿತ ಚಿಂತನೆಗಳು ಮನಸ್ಸನ್ನು ನಿರಾಳವಾಗಿಸುತ್ತವೆ.
- ಸಮಸ್ಯೆಗಳ ಪರಿಭಾಷೆಯನ್ನು ಅರ್ಥಮಾಡಿಕೊಳ್ಳಬೇಕು: ಕೆಲವೊಂದು ಸಮಸ್ಯೆಗಳು ನಾವು ಊಹಿಸಿಕೊಂಡಷ್ಟು ಗಾಢವಾಗಿರುವುದಿಲ್ಲ. ಸಮಸ್ಯೆಯನ್ನು ಒಮ್ಮೆ ಸರಿಯಾದ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಂಡರೆ, ಅದರ ಪರಿಹಾರ ಸುಲಭವಾಗುತ್ತದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವೇ ಬೇಕೆಂದಿಲ್ಲ; ಕೆಲವೊಂದನ್ನು ಸಮಯಾನುಸಾರ ತಹಬಂದಿಗೆ ತಂದರೂ ಸಾಕು. ಕೆಲವು ಸಂದರ್ಭಗಳು ಮೂಲತಃ ಸಮಸ್ಯೆ ಎನಿಸಿದರೂ, ಕಾಲಕ್ರಮದಲ್ಲಿ ಸೂಕ್ತವಾಗಿ ವಿಶ್ಲೇಷಿಸಿದಾಗ ಅವು ಅವಕಾಶಗಳ ರೂಪ ಪಡೆಯುತ್ತವೆ.
- ಜಿದ್ದಿನ ಮನಃಸ್ಥಿತಿ ಒಳ್ಳೆಯದಲ್ಲ: ಜೀವನದಲ್ಲಿ ಕೆಲವನ್ನು ಕ್ಷಮಿಸಿ ಮುಂದೆ ಸಾಗಬೇಕು. ಸೇಡನ್ನು ಗುರಿಯಾಗಿಸಿ ಚಿಂತಿಸುವುದು ಋಣಾತ್ಮಕ ಆಲೋಚನೆಗಳನ್ನೇ ಹುಟ್ಟುಹಾಕುತ್ತವೆ. ಇದು ಆರೋಗ್ಯಕ್ಕೆ ಹಾನಿಕರ. ಕ್ರಮಬದ್ಧ ವ್ಯಾಯಾಮ, ಪ್ರಾಣಾಯಾಮ, ಧ್ಯಾನ – ಇವು ನಮ್ಮ ಸೈರಣೆಯನ್ನು ಹಿಗ್ಗಿಸುತ್ತವೆ. ಇದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳನ್ನು ಕಳೆಯಲು ಸಹಕಾರಿ. ಇದರ ಜೊತೆಗೆ ಮನಸ್ಸಿಗೆ ಆಹ್ಲಾದ ನೀಡುವ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು, ಆರೋಗ್ಯಕರ ಆಹಾರ, ಚಟಗಳಿಂದ ದೂರವಿರುವುದು, ಸಾಕಷ್ಟು ವಿಶ್ರಾಂತಿ, ನಿದ್ರೆಗಳು ಒತ್ತಡ ನಿರ್ವಹಣೆಯನ್ನು ಸುಲಭವಾಗಿಸುತ್ತವೆ.
- ವೈಯಕ್ತಿಕ ಸಂಬಂಧಗಳ ಅಭಿವೃದ್ಧಿ ಹಲವಾರು ಹಂತಗಳಲ್ಲಿ ಒತ್ತಡ ನಿರ್ಮೂಲನೆಗೆ ದಾರಿಯಾಗುತ್ತದೆ. ಕೌಟುಂಬಿಕ ಸಂಬಂಧಗಳು, ಸ್ನೇಹಿತರು, ವೃತ್ತಿಜೀವನದ ಒಡನಾಡಿಗಳು, ಪರಿಚಿತರ ಜೊತೆಯಲ್ಲಿ ಪ್ರಾಮಾಣಿಕ ಆತ್ಮೀಯತೆಯಿಂದ ವ್ಯವಹರಿಸುವುದು ದೀರ್ಘಕಾಲಿಕ ನೆಲೆಗಟ್ಟಿನಲ್ಲಿ ಪರಸ್ಪರರ ಒತ್ತಡವನ್ನು ತಗ್ಗಿಸುತ್ತದೆ. ನಮಗೇ ಅರಿವಿಲ್ಲದಂತೆ ಮತ್ತೊಬ್ಬರ ಒತ್ತಡಗಳ ನಿವಾರಣೆಯಲ್ಲಿ ನೆರವಾಗಿರುತ್ತೇವೆ.
ಕೆಲಸ ಮತ್ತು ಒತ್ತಡಗಳ ಸಮರ್ಥ ನಿರ್ವಹಣೆ ಆರೋಗ್ಯದ ದೃಷ್ಟಿಯಿಂದ ಪ್ರಮುಖ ಪಾತ್ರವನ್ನು ವಹಿಸುತ್ತವೆ. ದಾರಿಗಳು ಬೇರೆಬೇರೆಯಾದರೂ, ಒತ್ತಡ ನಿರ್ವಹಣೆಯ ಮೂಲತತ್ತ್ವಗಳು ಒಂದೇ. ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡರಹಿತವಾಗಿ ಬದುಕುವ ಪ್ರಯತ್ನಗಳಿಗಿಂತಲೂ, ಒತ್ತಡವನ್ನು ವಿಶ್ಲೇಷಿಸಿ, ಅವುಗಳನ್ನು ನಿರ್ವಹಿಸುವ ಕಲೆಗಾರಿಕೆಯನ್ನು ಕಲಿಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ
ಪದ್ಮಾಸನ

ಯೋಗಪಟು : ಅನ್ವಿ ಅಂಚನ್
ಮೊದಲು ನೆಲದ ಮೇಲೆ ಕುಳಿತು ಎರಡು ಕಾಲುಗಳನ್ನು ಮುಂದಕ್ಕೆ ಚಾಚಬೇಕು. ನಂತರ ನಿಧಾನವಾಗಿ ಬಲಗಾಲನ್ನು ಮಂಡಿಯ ಬಳಿ ಬಗ್ಗಿಸಿ, ಬಲ ಪಾದವನ್ನು ಹಿಡಿದುಕೊಂಡು ಎಡತೊಡೆಯ ಮೇಲೆ ಇಡಬೇಕು. ಇದೇ ರೀತಿ ಎಡಗಾಲನ್ನೂ ನಿಧಾನವಾಗಿ ಮಂಡಿಯ ಬಳಿ ಬಗ್ಗಿಸಿ ಬಲತೊಡೆಯ ಮೇಲಿಡಬೇಕು. ಬಲಗಾಲು ಮತ್ತು ಎಡಗಾಲು ಒಂದು ಇನ್ನೊಂದನ್ನು ಛೇದಿಸಿರುತ್ತೇವೆ. ಎರಡೂ ಕಾಲುಗಳ ಅಂಗಾಲುಗಳು ಮೇಲ್ಮುಖವಾಗಿರಬೇಕು. ಎರಡೂ ಕಾಲುಗಳ ಮಂಡಿಗಳು ಭೂಮಿಯನ್ನು ಸ್ಪರ್ಶಿಸಿರಬೇಕು. ಕೈಗಳನ್ನು ಆಯಾ ಕಾಲಿನ ಮಂಡಿಗಳ ಮೇಲೆ ಇಟ್ಟು ನೀಳವಾಗಿ ಚಾಚಿರಬೇಕು. ಅಂಗೈಗಳೂ ಈ ಸ್ಥಿತಿಯಲ್ಲಿ ಮೇಲ್ಮುಖನಾಗಿದ್ದು ಆಕಾಶವನ್ನು ನೋಡುತ್ತಿರಬೇಕು. ಬೆರಳುಗಳು ಚಿನ್ಮುದ್ರೆಯ ಸ್ಥಿತಿಯಲ್ಲಿ ಇರಬೇಕು. ಈಗ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಧಾನವಾಗಿ ಉಸಿರಾಡಿ. ನಿಮ್ಮ ಗಮನವನ್ನು ಉಸಿರಾಟದ ಮೇಲೆ ಇರಿಸಿ. 5 ರಿಂದ 10 ನಿಮಿಷಗಳ ಕಾಲ ಈ ಸ್ಥಿತಿಯಲ್ಲಿದ್ದ ನಂತರ, ನಿಮ್ಮ ಕಣ್ಣುಗಳನ್ನು ತೆರೆಯಿರಿ ಮತ್ತು ಸಾಮಾನ್ಯ ಸ್ಥಿತಿಗೆ ಹಿಂತಿರುಗಬೇಕು.
ಲಾಭಗಳು: ಬೆನ್ನುಮೂಳೆ ನೇರವಾಗುವುದರಿಂದ ಜ್ಞಾನತಂತುಗಳು ಸರಿಯಾಗಿ ಕಾರ್ಯ ನಿರ್ವಹಿಸಲಿವೆ. ಇದರಿಂದ ವಿಚಾರಶಕ್ತಿ ಮತ್ತು ಸ್ಮರಣ ಶಕ್ತಿ ವೃದ್ಧಿಯಾಗಲಿದೆ. ದೀರ್ಘ ಉಸಿರಾಟಕ್ಕೆ ಇದು ಬಹಳ ಪ್ರಯೋಜನಕಾರಿ. ಮನಸ್ಸನ್ನು ಕೇಂದ್ರಿಕರಿಸಲು ಪದ್ಮಾಸನ ಸೂಕ್ತ ಆಸನ. ಮಂಡಿ, ಕಾಲುಗಳ ಕೀಲುಗಳಲ್ಲಿನ ನೋವು ಮಾಯವಾಗುವುದರ ಜತೆಗೆ ಸೊಂಟ, ಬೆನ್ನುಗಳಲ್ಲಿ ರಕ್ತಸಂಚಾರ ಸುಗಮವಾಗಲಿದೆ. ಇಡೀ ಶರೀರದಲ್ಲೇ ಹೊಸ ಹುರುಪು ಕಂಡುಬರುತ್ತದೆ.
ಹಲಾಪನ

ಯೋಗಪಟು : ಅನ್ವಿ ಅಂಚನ್
ಮೊದಲು ನೆಲದ ಮೇಲೆ ನೇರವಾಗಿ, ಅಂಗಾತನಾಗಿ ಮಲಗಿಕೊಳ್ಳಬೇಕು. ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಎರಡೂ ಕಾಲುಗಳನ್ನೂ ಉತ್ಥಿತ ಪಾದಾಸನದಂತೆ ನೆಲದಿಂದ ಮೇಲಕ್ಕೆ ಎತ್ತಬೇಕು. ಎರಡೂ ಕೈಗಳಿಂದ ಬೆನ್ನಿಗೆ ಭದ್ರವಾದ ಆಧಾರವನ್ನು ಕೊಟ್ಟು ಸರ್ವಾಂಗಾಸನದಂತೆ ಕಾಲುಗಳನ್ನು ಮೇಲೆತ್ತಿ ಭೂಮಿಗೆ ಲಂಬವಾಗಿ ನಿಲ್ಲಿಸಬೇಕು. ಈ ಸ್ಥಿತಿಯಲ್ಲಿ ನಿಧಾನವಾಗಿ ಉಸಿರಾಡಿ ಅನಂತರ ಕಾಲುಗಳನ್ನು ನೆಲಕ್ಕೆ ಮುಟ್ಟಿಸಬೇಕು. ಅನಂತರ ಕೈಗಳನ್ನು ಕಾಲುಗಳಿಗೆ ವಿರುದ್ಧ ದಿಕ್ಕಿನಲ್ಲಿ ಚಾಚಬೇಕು.
ಲಾಭಗಳು: ಹಲಾಸನದಿಂದ ಜಠರ, ಕರುಳು, ಪಿತ್ತಜನಕಾಂಗ ಮುಂತಾದ ಅಂಗಗಳು ಹೆಚ್ಚು ಬಲಗೊಳ್ಳುವುವು. ಮಲಬದ್ಧತೆ ನಿವಾರಣೆಯಾಗುವುದು. ಹೊಟ್ಟೆಯ ಬೊಜ್ಜು ಕರಗುವುದು. ಕುತ್ತಿಗೆ ಮತ್ತು ಕಾಲುಗಳಲ್ಲಿನ ದೋಷಗಳು ದೂರವಾಗುವುವು. ಈ ಆಸನವು ವಿಶೇಷವಾಗಿ ಬೆನ್ನನೋವು ಮತ್ತು ಸಂಧಿವಾತ ಪರಿಹಾರಕ್ಕೆ ಹೆಚ್ಚು ಉಪಕಾರಿ. ಇದರಿಂದ ಮೆದುಳಿಗೂ ಸರಾಗ ರಕ್ತಸಂಚಾರವಾಗಲಿದೆ. ವಿಶೇಷವಾಗಿ ಬೆನ್ನನೋವು ಮತ್ತು ಸಂಧಿವಾತ ಪರಿಹಾರಕ್ಕೆ ಹೆಚ್ಚು ಉಪಕಾರಿ. ಇದರಿಂದ ಮೆದುಳಿಗೂ ಸರಾಗ ರಕ್ತಸಂಚಾರವಾಗಲಿದೆ.














