



ವಾರದ ಬೆಳಕು
ಎಲ್ಲವೂ ತಾತ್ಕಾಲಿಕ, ಹಾಯಾಗಿರೋಣ…
ಇಲ್ಲಿ ಯಾವುದೂ ಶಾಶ್ವತವಲ್ಲ. ಎಲ್ಲವೂ ತಾತ್ಕಾಲಿಕ. ಸುಖ – ದುಃಖ, ಲಾಭ – ನಷ್ಟ, ಚಿಂತೆ – ನೆಮ್ಮದಿ, ಕಷ್ಟ – ಸುಲಭ, ಶಾಂತಿ – ಅಶಾಂತಿ, ಉತ್ಸಾಹ – ನಿರುತ್ಸಾಹ, ಲವಲವಿಕೆ – ಖಿನ್ನತೆ ಇತ್ಯಾದಿ ಇತ್ಯಾದಿ ಎಲ್ಲವೂ ಬರಬಹುದು. ಹೀಗೆ ಬಂದರೆ, ಹಾಗೆ ಹೋಗುತ್ತದೆ. ಹಾಗೆ ಹೋದರೆ ಹೀಗೆ ಬಂದುಬಿಡುತ್ತದೆ. ಬೆಳಕು – ಕತ್ತಲೆಯ ಹಾಗೆ, ಹಗಲು – ರಾತ್ರಿಯ ಹಾಗೆ. ಆಗಮನ – ನಿರ್ಗಮನ ಅತ್ಯಂತ ಸಹಜ.
ಹಗಲು ಮೊದಲೊ, ರಾತ್ರಿ ಮೊದಲೊ ಹೇಳಲಾಗದು. ಬೆಳಕು ಮೊದಲೊ, ಕತ್ತಲು ನಂತರವೋ ಮೊದಲೇ ತಿಳಿಯಲಾಗದು. ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ರೀತಿ. ಎರಡೂ ಇರುವುದು ಜೀವನದ ನೀತಿ.
ಕತ್ತಲೆಯನ್ನು ನಕಾರಾತ್ಮಕವಾಗಿ ನೋಡಬೇಕಾಗಿಲ್ಲ. ಬೆಳಕನ್ನು ಸಕಾರಾತ್ಮಕವೆಂದೂ ಭಾವಿಸಬೇಕಾಗಿಲ್ಲ. ಕೇವಲ ಸಕಾರಾತ್ಮಕ ಚಿಂತನೆ, ಯೋಚನೆ, ಯೋಜನೆ, ದೃಷ್ಠಿಕೋನಗಳಿಂದ ಮಾತ್ರ ಕತ್ತಲೆಯೂ ಬೆಳಕಾಗಬಹುದು, ರಾತ್ರಿಯೂ ಹಗಲಾಗಬಹುದು. ನಕಾರಾತ್ಮಕ ಭಾವನೆಯನ್ನೇ ಬೆಳೆಸುತ್ತಾ ಹೋದರೆ… ಹಗಲೂ ರಾತ್ರಿಯಾಗಿಯೇ ಹೋದೀತು. ಬೆಳಕೂ ಕತ್ತಲೆಯನ್ನು ಕೊಟ್ಟೀತು. ಕೆಲವೊಮ್ಮೆ ಕತ್ತಲು ಮತ್ತು ಬೆಳಕು ಎರಡೂ ಸುಖವನ್ನು ತಂದುಕೊಡಬಹುದು. ಕೆಲವೊಮ್ಮೆ ಇವೆರಡೂ ಕಷ್ಟವನ್ನೂ ತಂದುಕೊಡಬಹುದು.
ಯಾವುದೇ ಸಮಸ್ಯೆಗಳಿಗೂ ಹತಾಶೆ – ನಿರಾಶೆ, ಕಳವಳ – ತಳಮಳ, ಗೊಂದಲ – ಚಂಚಲತೆಯ ಅಗತ್ಯವಿಲ್ಲ. ಮಾಡಬಾರದು ಸಹ. ಭಯವೇ ಮರಣ, ಧೈರ್ಯವೇ ಜೀವನ. ಆತ್ಮವಿಶ್ವಾದಿಂದ ಮುನ್ನಡೆಯಲು ಕಲಿತವನು ನಿಜಕ್ಕೂ ಜಾಣ.
ಯಾವುದಕ್ಕೂ, ಯಾರ ಬಗ್ಗೆಯೂ ಧ್ವೇಷ ಬೇಡ, ಮತ್ಸರ, ಹೊಟ್ಟೆಕಿಚ್ಚು, ಸಿಟ್ಟು, ಬೇಸರ ಅನಗತ್ಯ. ಸಹಜವಾದ ಪ್ರೀತಿ, ಸರಳವಾದ ಸ್ನೇಹ, ಸಕಾರಾತ್ಮಕ ಭಾವನೆಯಿಂದ ಮಾತ್ರ ನೆಮ್ಮದಿ, ಸಂತೃಪ್ತ ಬದುಕು ಸಾಧ್ಯ.
ಅಹಂಕಾರದಿಂದ ಲಾಭವಿಲ್ಲ. ನಿರಹಂಕಾರದಿಂದ, ಸರಳತೆಯಿಂದ ಯಾವುದೇ ನಷ್ಟವಿಲ್ಲ. ಎಲ್ಲರೊಂದಿಗೂ ಗೌರವದ ನಡೆ ನುಡಿ ಅನುಸರಿಸಿದರೆ ಮನಸ್ಸಿಗೆ ನೆಮ್ಮದಿ.
ಯಾರು ಏನು ಬೇಕಾದರೂ ಹೇಳಲಿ. ಎಡಕಿವಿಯಿಂದ ಕೇಳುವುದು, ಬಲಕಿವಿಯಿಂದ ಬಿಡೋದು. ಯಾರಿಗೂ ಯಾವಾಗಲೂ ಅನ್ಯಾಯ, ಮೋಸ, ವಂಚನೆ, ದ್ರೋಹ ಮಾಡದಿದ್ದರೆ ಸಾಕು. ನೆಮ್ಮದಿಯ ಬದುಕಿಗೆ ಇನ್ನೇನು ಬೇಕು ?
ಯಾವುದೇ ಕೆಟ್ಟ ಚಟಗಳನ್ನೂ ಹತ್ತಿರ ಸುಳಿಯಲು ಬಿಡಬಾರದು. ಒಳ್ಳೆಯ, ಸದುದ್ಧೇಶದ ಗುರಿ – ಸಾಧನೆಗೆ ಇರಬೇಕು ಛಲ, ನಿಧಾನವಾಗಿಯಾದರೂ ಸಿಕ್ಕೇ ಸಿಗುತ್ತದೆ ಸೂಕ್ತ ಫಲ. ಅನುಮಾನವೇ ಬೇಡ.
ಮಾತಿನಲ್ಲಿ ಯಾರ ಬಗ್ಗೆಯೂ, ಯಾರ ವಿರುದ್ಧವೂ ಬೇಡ ದುರುದ್ಧೇಶದ ಗುಪ್ತ ಹೂರಣ. ಬೇಡವೇ ಬೇಡ ಅನಗತ್ಯ ತೋರಣ. ವಿಜೃಂಭಣೆ, ಆಡಂಬರದಿಂದ ಆಗಲುಂಟೇ ಬದುಕು ಬಂಗಾರ ? ಶಾಂತಿ – ಸಮಾಧಾನದ ನಡೆ ನುಡಿಯಿಂದಲಷ್ಟೇ ಜೀವನ ಶೃಂಗಾರ.
ನೆನೆ ನೆನೆ ದಿನ ದಿನವೂ ಮಹಾತ್ಮಾ ಬುದ್ಧನ ಚಿಂತನ. ಹಾಯಾಗಿರೋಣ ಅನುದಿನ.






































