ಎನ್ಕೌಂಟರ್ ಗೆ ಬಲಿಯಾದ ಮಾವೋವಾದಿ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರ
RB NEWS
Bureau Report
ಎನ್ಕೌಂಟರ್ ಗೆ ಬಲಿಯಾದ ಮಾವೋವಾದಿ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರ
ಕಾರ್ಕಳ: ನಕ್ಸಲ್ ನಿಗ್ರಹ ದಳ ನಡೆಸಿದ ಎನ್ಕೌಂಟರ್ ಗೆ ಸೋಮವಾರದಂದು ಬಲಿಯಾದ ಮಾವೋವಾದಿ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರವನ್ನು ಆತನ ಹುಟ್ಟೂರು ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕೂಡ್ಲುವಿನ ಮೈರೋಳಿ ಎಂಬಲ್ಲಿ ನೆರವೇರಿಸಲಾಯಿತು.
ವಿಕ್ರಮ್ ಗೌಡನ ಸಹೋದರ ಸುರೇಶ್ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದರು. ಸಹೋದರಿ ಸುಗುಣ ಹಾಗೂ ಸ್ಥಳೀಯರು, ಸ್ವಬಂಧುಗಳು ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಪಾಲ್ಗೊಂಡರು.
ಬಿಗು ಪೋಲೀಸ್ ಬಂದೋಬಸ್ತ್: ಮೃತ ನಕ್ಸಲ್ ವಿಕ್ರಮ್ ಗೌಡ ನ ಅಂತ್ಯ ಕ್ರಿಯೆಯ ವೇಳೆಯಲ್ಲಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಎ ಎನ್ ಎಫ್ ಪಡೆ ಹಾಗೂ ಹೆಬ್ರಿಯ ಪೋಲೀಸ್ ಠಾಣೆಯ ಠಾಣಾಧಿಕಾರಿಗಳಾದ ಮಹಂತೇಶ್ ಜಾಬಗೌಡ , ಮಹೇಶ್ ಟಿ ಎಂ ಹಾಗೂ ಅಜೆಕಾರು ಠಾಣೆಯ ಠಾಣಾಧಿಕಾರಿ ರವಿ ಬಿ. ಕೆ ಉಸ್ತುವಾರಿ ವಹಿಸಿದ್ದರು.
ಮೃತದೇಹ ಸಾಗಿಸುತ್ತಿದ್ದ ಅಂಬುಲೆನ್ಸ್ ನಿಯಂತ್ರಣ ತಪ್ಪಿದಾಗ….
ಬೆಳಗ್ಗೆ ಮಣಿಪಾಲದ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರಕ್ಕಾಗಿ ಮಣಿಪಾಲದಿಂದ ಕೂಡ್ಲುವಿಗೆ ವಿಕ್ರಂ ಗೌಡನ ಮೃತದೇಹವನ್ನು ಅಂಬುಲೆನ್ಸ್ ಮೂಲಕ ಸಾಗಿಸಲಾಗುತ್ತಿತ್ತು.
ಅಂಬುಲೆನ್ಸ್ ಸಾಗುತ್ತಿದ್ದ ಮಾರ್ಗಕ್ಕೆ ಅಡ್ಡವಾಗಿ ದನವೊಂದು ಹಾದು ಹೋಗಿದ್ದು , ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ರಸ್ತೆ ಬದಿಗೆ ಅಂಬುಲೆನ್ಸ್ ಚಲಾಯಿಸಲು ಮುಂದಾಗಿದ್ದರು. ನಿಯಂತ್ರಣ ತಪ್ಪಿದ ಅಂಬುಲೆನ್ಸ್ ರಸ್ತೆಯಿಂದ ಮುನ್ನುಗ್ಗಿ ಪಲ್ಟಿ ಹೊಡೆಯುವ ಹಂತಕ್ಕೂ ತಲುಪಿತು.
ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಬಳಿಕ ಸ್ಥಳೀಯರ ನೆರವಿನಿಂದ ಅಂಬುಲೆನ್ಸ್ ಅನ್ನು ರಸ್ತೆಗೆ ತಂದು ಮೃತದೇಹವನ್ನು ಹೆಬ್ರಿ ಕೂಡ್ಲುವಿಗೆ ರವಾಯಿಸಲಾಯಿತು.