ಎಕ್ಕಲೆ ಇತ್ತ್ಂಡ ಬೊಕ್ಕಲ ಉಂಡು

Picture of RB NEWS

RB NEWS

Bureau Report

ಜಿರಲೆ ಇದ್ದರೆ ಮತ್ತಷ್ಟು ಉಂಟು ಎನ್ನುವ ತುಳುವಿನ ಮಾತು ಅದು. ಹಾಗೆಂದರೆ,ಇನ್ನಷ್ಟು ಜಿರಲೆಗಳಿವೆ ಎಂದು.
ಮಕ್ಕಳು ಅಳುವಾಗ ಮೂಲೆಯಲ್ಲಿದ್ದ ಅಥವಾ ಎಲ್ಲಾದರೂ ಅವಿತುಕೊಂಡಿದ್ದ ಜಿರಲೆಯನ್ನು ಹುಡುಕಿ ತಂದು ಅವರೆದುರಿಗೆ ನೆಲದಲ್ಲಿ ಅಂಗಾತ ಹಾಕಿದರೆ ಜಿರಲೆ ಗಿರಗಿರನೆ ತಿರುಗತ್ತಲೇ ಕಾಲು ಅಲ್ಲಾಡಿಸುತ್ತಿರುತ್ತದೆ. ಅದಕ್ಕೆ ಹೆದರಿ ಮಕ್ಕಳು ಅಳು ನಿಲ್ಲಿಸುತ್ತಾರೆ
ಮಕ್ಕಳೇ ನಿಮ್ಮ ಬಾಯಲ್ಲಿ ಎಕ್ಕಳೆ! ಅದೂ ಕೂಡ ದೊಡ್ಡವರ ಬಾಯಲ್ಲಿ ಹೊರಬೀಳುವ ತಮಾಷೆ! (ತುಳುವಿನ ಎಕ್ಕಳೆ =ಜಿರಲೆ)
ತೊಟ್ಟಿಲಲ್ಲಿ ಮಲಗಿರುವ ಪುಟ್ಟ ಮಗುವಿನ ತಲೆಯನ್ನು ನೆಕ್ಕುತ್ತವೆ ಜಿರಲೆಗಳು. ಮಗುವಿನ ತಲೆಗೂದಲು ಅಲ್ಲಲ್ಲಿ ಬೋಳಾಗುವುದನ್ನು ಕಂಡಾಗಲೇ ಅದು ಜಿರಲೆಯ ಕಾರುಬಾರು ಎಂದು ಗೊತ್ತಾಗಿ ನಂತರದ ದಿನದಲ್ಲಿ ಮಗುವನ್ನು ರಾತ್ರಿ ಮಲಗಿಸುವಾಗ ತಲೆಗೆ ತೆಂಗಿನೆಣ್ಣೆ ಹಚ್ಚುತ್ತಾರೆ.
ಸಂಪಿಗೆ ಹೂವೆಂದರೆ ಮಹಿಳೆಯರಿಗೆ ಅಚ್ಚುಮೆಚ್ಚು. ಅದರ ಮಾಲೆಯನ್ನು ಇವತ್ತು ಮುಡಿದರೆ ನಾಳೆಯ ದಿನವೂ ತಲೆಗಿಡುವುದಕ್ಕುಂಟು,ಮೂರು ದಿನಕ್ಕೂ ಬಳಸುವುದುಂಟು.ಹೂವು ಬಾಡಿ ಕಪ್ಪಾದರೂ ಪರಿಮಳ ಕಡಿಮೆಯಾಗುವುದಿಲ್ಲ.
ಸಂಪಿಗೆ ಬಿಡಿ ಹೂವು ,ಅದರ ಮಾಲೆಯನ್ನು ಮನೆಯೊಳಗಿಟ್ಟಾಗ ರಾತ್ರಿ ಜಿರಲೆ ಬಂದು ಅದರ ತೊಟ್ಟಿನ ಬುಡವನ್ನು ತಿಂದು ಹೋಗುವುದುಂಟು. ಅದರಿಂದಾಗಿ ಹೂವಿನ ಎಸಳುಗಳು ಉದುರಿಬೀಳುವುದು. ಅದನ್ನು ತಪ್ಪಿಸುವುದಕ್ಕಾಗಿ ಸಂಪಿಗೆ ಮೊಗ್ಗು ಅಥವಾ ಬಿಡಿ ಹೂವನ್ನು ಮನೆಯಲ್ಲಿಡುವಾಗ ರಾತ್ರಿಯಲ್ಲಿ ಅದರ ತೊಟ್ಟಿನ ಭಾಗಕ್ಕೆ ತೆಂಗಿನೆಣ್ಣೆ ಸವರುವುದು. ಜಿರಲೆ ಹತ್ತಿರ ಬರುವುದಿಲ್ಲ.
ಕಾಗದ ಪುಸ್ತಕಗಳನ್ನು ತಿಂದು ಲಗಾಡಿ ತೆಗೆಯುವುದೇ ಅವುಗಳ ಪ್ರಧಾನ ಕಸುಬು ಎನ್ನಬಹುದು. ಪೇರಿಸಿಟ್ಟ ಪುಸ್ತಕಗಳನ್ನು ಎಂದಾದರೊಮ್ಮೆ ತೆಗೆದಾಗ ಪುಟಗಳನ್ನೇ ತಿಂದಿರುತ್ತವೆ. ಅವುಗಳ ದಾಳಿ ಗೊತ್ತೇ ಆಗುವುದಿಲ್ಲ.

ಜಿರಲೆಯಲ್ಲಿ ಸಾಮಾನ್ಯವಾಗಿ ಎರಡು ಜಾತಿಯದ್ದಿರುತ್ತದೆ. ಒಂದು ಜಾತಿಯದ್ದು ರೆಕ್ಕೆಯ ಜಿರಲೆ. ಮತ್ತೊಂದಕ್ಕೆ ರೆಕ್ಕೆ ಇಲ್ಲ.ಆದರೆ ಅದರ ಹೊಟ್ಟೆಯ ಅಡಿ ಭಾಗದಲ್ಲಿ ಅಂಟು ದ್ರವ ಸುರಿಯುತ್ತಿರುತ್ತದೆ. ಕೈಗೆ ತಾಗಿದರೆ ಅಂಟು ಅಂಟು,ಮೈಮೇಲೆ ಬಿದ್ದಾಗಲೂ ಅಲ್ಲಿ ಅಂಟು. ಅದು ನೆಲದಲ್ಲಿ ಹರಿದಾಡಿಕೊಂಡಿರುವುದು. ರೆಕ್ಕೆಯ ಜಿರಲೆ ದೀಪ ಆರಿಸಿದಾಕ್ಷಣ ಪುರ್ರನೆ ಹಾರಿ ಬರುತ್ತವೆ.

ಮನೆ ಸ್ವಚ್ಚವಾಗಿರುವುದಷ್ಟೇ ಅಲ್ಲ ಯಾವುದೇ ಪಾತ್ರೆ ಪರಡಿಗಳಲ್ಲಿ ಏನಾದರೂ ದಾಸ್ತಾನು ಇದ್ದು ಹಳತಾಗಿದ್ದರೆ ಅಲ್ಲಿ ಸೇರಿಕೊಂಡಿರುತ್ತವೆ. ಸ್ನಾನದ ಕೋಣೆಯಲ್ಲಿ ಬರುತ್ತಿರುತ್ತವೆ.ಒಟ್ಟಾರೆಯಾಗಿ ಅವುಗಳು ಬಿಲದಲ್ಲಿ,ಡಬ್ಬದಲ್ಲಿ,ಕೊಳುಕು ಮೂಲೆಗಳಲ್ಲಿಯೇ ಹೆಚ್ಚು ಇರುವುದು.
ಜಿರಲೆಯು ಮೈಮೇಲೆ ಹರಿದಾಡಿದರೂ,ಹಾರಾಡಿದರೂ ಪರವಾಗಿಲ್ಲ ಅನಿಸುತ್ತದೆ ಆದರೆ ಅದರ ಹಿಕ್ಕೆ ಮಾತ್ರ ಆಹಾರವನ್ನೇ ಕೆಡಿಸುತ್ತದೆ.
ಅಕ್ಕಿ ಕಾಳಿನ ಗಾತ್ರದಷ್ಟೆ ಇರುವ ಜಿರಲೆಯ ಹಿಕ್ಕೆ( ಎಕ್ಕಳೆ ಬಿಟ್ಟೆ) ಅನ್ನಾಹಾರ ತಿಂಡಿ ಪಾನೀಯಕ್ಕೇನಾದರೂ ಬಿತ್ತಾದರೆ ಅದನ್ನು ಬಿಸಾಡಲೇಬೇಕು.ಅಷ್ಟೊಂದು ಅಹಿತಕರವಾದ ವಾಸನೆ.
ಅತಿಯಾದ ಜಿರಲೆಗಳಿಂದ ಕೆಲವು ರೋಗಗಳು ಹುಟ್ಟುತ್ತದೆ.ಟೈಫಾಯ್ಡ್ ಜ್ವರಕ್ಕೂ ಜಿರಲೆ ಕಾರಣವಾಗುತ್ತದೆ. ಜಿರಲೆಗಳನ್ನು ಸಾಯಿಸುವುದಕ್ಕೆಂದು ಮೊದಲು ಕೀಟನಾಶಕ ಇತ್ತು. ಈಗಲೂ ಹಿಟ್ ಎನ್ನುವ ತುಂಬಾ ಪ್ರಚಾರದ ಜಿರಲೆ ನಾಶಕವಿದೆ. ಹಾಗೆನೆ ಲಕ್ಷ್ಮಣ ರೇಖೆ ಹೆಸರಿನ ಚಾಕ್ ಪೀಸ್ ಕೂಡಾ ಬಹಳ ಬೇಡಿಕೆಯಲ್ಲಿದೆ.
ಉಪದ್ರಕಾರಿ ಜಿರಲೆಯು ಇವತ್ತಿನ ಕಾಲಘಟ್ಟದಲ್ಲಿ ಕ್ರಾಂತಿಕಾರಿ ಹೋರಾಟದ ಚಿಹ್ನೆಯಾಗಿ ಬಂತು ಎಂದರೆ ಯಾವುದಕ್ಕೆ ಯಾವಾಗ ಬೆಲೆ ಬರುತ್ತದೆ ಅನ್ನುವುದನ್ನು ಮುಂಚಿತವಾಗಿ ಹೇಳುವುದಕ್ಕೇ ಸಾಧ್ಯವಿಲ್ಲ.
2026ರಲ್ಲಿ ಮೇಷ ಮಿಥುನ ಸಿಂಹ ಧನು ರಾಶಿಯವರಿಗೆ ಧನಾಗಮನ,ಬಾಕಿಯವರಿಗೆ ಸಂಪತ್ತು,ಇನ್ನುಳಿದವರಿಗೆ ಭಾರೀ ಆಪತ್ತು. ಡಿಕೆಶಿಗೆ ಮುಖ್ಯಮಂತ್ರಿ ಯೋಗ,ವಿಜಯನಿಗೆ ಗೆಲುವಿಲ್ಲ,ಕೇರಳಕ್ಕೆ ಬಿಜೆಪಿ ಯಜಮಾನಿಕೆ ಹೀಗೆ ಏನೇನೆಲ್ಲ ಹೇಳುತ್ತಿದ್ದ ಜ್ಯೋತಿಷಿಗಳು ಜಿರಲೆಯ ಭಾಗ್ಯ ಅಥವಾ ಕೋದಂಡರಾಮವೋ,ಶುಕ್ರದೆಸೆಯನ್ನೋ ಹೇಳಿದ್ದೇ ಇಲ್ಲ!
ಭವಿಷ್ಯಕಾರರ ಚಿಂತನೆಗೂ ಹೊಳೆಯದ ಅದೃಷ್ಟವೆಂದರೆ ಜಿರಲೆ ರಾಷ್ಟ್ರೀಯ ಕೀಟವಾಗಿ ಮೆರೆದುದು! ರಾಜಕೀಯ ಪಕ್ಷವೊಂದನ್ನೇ ಹೆದರಿಸುತ್ತಿರುವುದು!
ಜೈ ಜಿರಲೆ!
-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top