ಎಂಬಿಎ ಪದವೀಧರನಿಂದ ಕಾರ್ಕಳ ಬಿಳಿಬೆಂಡೆ ಕೃಷಿಯಲ್ಲಿ ಸಾಧನೆ
ಕಾರ್ಕಳದ ಸಾಣೂರಿನ ಗೋಪಾಲ್ ಹಾಗೂ ಲೀಲಾ ದಂಪತಿಯ ಮಗ ಜೀವನ್ ಜಿ. ಕೋಟ್ಯಾನ್ ಇವರು ಎಂಬಿಎ ಶಿಕ್ಷಣವನ್ನು ಮುಗಿಸಿ, ಕೃಷಿಯತ್ತ ಆಕರ್ಷಿಸಿ ಅದರಲ್ಲಿ ಯಶಸ್ವಿಯಾಗಿರುವುದು ಅತ್ಯಂತ ಖುಷಿಯ ವಿಚಾರ.



ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವ ಸಮೂಹ ವಿವಿಧ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು ಆ ಸಾಲಿನಲ್ಲಿ ಸಾಣೂರಿನ ಯುವಕನ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ.
ಸುಮಾರು 07 ಎಕರೆ ಕೃಷಿ ಪ್ರದೇಶದಲ್ಲಿ ಅನಾನಸು, ಅಡಿಕೆ, ಜೊತೆಗೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿ ಮಿಶ್ರ ಕೃಷಿಯಲ್ಲಿ ಯಶಸ್ವಿಯಾದ ಯುವ ರೈತ ಜೀವನ್ ಕೋಟ್ಯಾನ್.
ಸ್ಥಳೀಯ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರು ವರ್ಷಗಳ ಹಿಂದೆ ಕಾರ್ಕಳದ ಸ್ಥಳೀಯ ಬೆಳೆಯಾದ ಬಿಳಿಬೆಂಡೆ ಬೆಳೆಯಲು ಕ್ಷೇತ್ರದಾದ್ಯಂತ ಒಂದು ಅಭಿಯಾನವನ್ನು ನಡೆದಿತ್ತು.
ಸುಮಾರು 20 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಉಚಿತವಾಗಿ ಬಿಳಿಬೆಂಡೆ ಬೀಜವನ್ನು ನೀಡಿ, ಬೆಳೆಯಲು ಪ್ರೇರಣೆಯನ್ನು ನೀಡುವ ಅಭಿಯಾನವನ್ನು ಆರಂಭದ ನಂತರ ಅನೇಕರು ಇದನ್ನು ತಮ್ಮ ಮನೆ ಬಳಕೆಗೆ ಮತ್ತು ವ್ಯಾಪಾರಕ್ಕಾಗಿ ಬಿಳಿಬೆಂಡೆಯನ್ನು ಬೆಳೆಯುವ ಅಭ್ಯಾಸವನ್ನು ಹೆಚ್ಚಿನ ಸಂಖ್ಯೆಯಲ್ಲಿ ರೂಢಿಸಿಕೊಂಡಿದ್ದಾರೆ.
ಈ ಅಭಿಯಾನದಿಂದ ಪ್ರೇರಣೆಗೊಂಡು ಮಿಯ್ಯಾರು ಗ್ರಾಮದ ಪರದೆ ಎಂಬಲ್ಲಿ ಜೀವನ್ ಇವರು ಸುಮಾರು 50 ಸೆಂಟ್ಸ್ ಜಾಗದಲ್ಲಿ ಸುಮಾರು 800ಕ್ಕೂ ಹೆಚ್ಚು ಬಿಳಿಬೆಂಡೆ ಗಿಡವನ್ನು ಬೆಳೆದು ಅದರಲ್ಲಿ ಯಶಸ್ಸು ಕಂಡಿದ್ದಾರೆ.
ನಳನಳಿಸುತ್ತಿರುವ ಬಿಳಿಬೆಂಡೆ ಗಿಡಗಳನ್ನು ನೋಡುವಾಗ ಸಾರ್ಥಕ ಭಾವನೆ ಮನದಲ್ಲಿ ಮೂಡುತ್ತದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಳಿಬೆಂಡೆ ಕೆ.ಜಿಗೆ ಸುಮಾರು ರೂ.160 ರಿಂದ ರೂ.200ರವರೆಗೆ ಬೆಲೆ ಇರುವುದು ಗಮನಾರ್ಹ.
ಇವರ ಬಿಳಿಬೆಂಡೆಯ ತೋಟಕ್ಕೆ ತೆರಳಿದ ಶಾಸಕ ಸುನೀಲ್ ಕುಮಾರ್ ಅವರು ಬೆಳೆಯನ್ನು ವೀಕ್ಷಿಸಿ, ಯುವ ರೈತ ಜೀವನ್ ಜಿ. ಕೋಟ್ಯಾನ್ ಅಭಿನಂದಿಸಿದ್ದಾರೆ.































