ಊಟ ಮುಗಿಸಿದ ಮಂಗಳೂರಿನ ‘ಪಿರೇರ ಹೊಟೇಲ್’
ಮಂಗಳೂರಿನ ಹೃದಯ ಭಾಗದಲ್ಲಿದ್ದ ಪಿರೇರ ಹೊಟೇಲ್ ತನ್ನ ಶತಮಾನದ ಇತಿಹಾಸವನ್ನು ಉಳಿಸಿಕೊಂಡು ಈ ತಿಂಗಳ ಜುಲೈ 27 ರಂದು ಊಟ ಮುಗಿಸಿತು.
ಮುಖ್ಯ ರಸ್ತೆಯಿಂದ ಸೆಂಟ್ರಲ್ ಮಾರುಕಟ್ಟೆಯತ್ತ ತಿರುಗುವ ಕೈ ರಸ್ತೆ ಹತ್ತಿರವೇ ಇದ್ದ ಮಹಡಿಯ ಕಟ್ಟಡದ ಮಹಡಿ ಮೇಲಿದ್ದ ಮೀನು ಮಾಂಸಾಹಾರದ ಹೊಟೇಲಾಗಿತ್ತು ಪಿರೇರ ಹೊಟೇಲ್.
ಆ ಹೊಟೇಲು ಬಹಳ ಪ್ರಸಿದ್ಧಿಯನ್ನು ಪಡೆದಿರುವಲ್ಲಿ ಅನೇಕವಾಗಿ ರುಚಿಯ ಬಗ್ಯೆ ಏನಾದರು ಹೇಳುವುದರ ಜೊತೆಗೆ ದನ ಮತ್ತು ಹಂದಿ ಮಾಂಸದ ಖಾದ್ಯ ಅಲ್ಲಿ ದೊರೆಯುತ್ತಿರುವುದು. ಸ್ನೇಹಿತರುಗಳು ಹೇಳುವುದುಂಟು,’ನಾನು ಪಿರೇರಾಗೆ ಹೋಗಿ ,ಎರಡು ಪ್ಲೇಟು ಬೀಫ್ ಸುಕ್ಕ ತಗೊಂಡು ಗಡದ್ದಾಗಿ ಊಟ ಮಾಡಿದೆ.’ ಎಂದು.
ಮಂಗಳೂರು ಪರಿಸರ ಮತ್ತು ಮಂಗಳಗಂಗೋತ್ರಿ ವರೆಗಿನ ಬಹುತೇಕ ಯುವಕ ವಿದ್ಯಾರ್ಥಿಗಳು ಮಾಂಸಾಹಾರದ ಊಟವನ್ನು ಪಿರೇರಾದಲ್ಲೆ ಮಾಡುತ್ತಿದ್ದರು. ಕುರಿ ಮಾಂಸ ಮತ್ತು ವಿವಿಧ ಜಾತಿಯ ಮೀನಿನ ಖಾದ್ಯವೂ ಅಲ್ಲಿ ದೊರೆಯುತ್ತಿತ್ತು. ಹಿಂದೂಗಳಲ್ಲಿ ಕೆಲವಷ್ಟು ಮಂದಿ ಆ ಹೊಟೇಲಿಗೆ ಹೋಗುವುದಿರಲಿಲ್ಲ ಕಾರಣ,ಬೀಫ್ ಇದೆ ಎಂದು.
ಬೀಫ್ ಪದಾರ್ಥವನ್ನು ಕದ್ದು ಮುಚ್ಚಿ ತಿನ್ನುವವರಿಗೆ ಪಿರೇರಾ ಹೊಟೇಲ್ ಹೇಳಿ ಮಾಡಿಸಿದಂತಿತ್ತು. ಅಲ್ಲಿಗೆ ತನ್ನ ಊರಿನವರು ಯಾಕೆ ಬರುತ್ತಾರೆ ?ಎನ್ನುವ ನಂಬಿಕೆ ಕಾರಣದಿಂದ ಬೀಫನ್ನು ಸಕತ್ತಾಗಿ ತಿನ್ನುತ್ತಿದ್ದರು. ಇನ್ನು,ಮೇಲ್ಜಾತಿಯವರೆಂದುಕೊಂಡವರಲ್ಲಿಯೂ ಕೆಲವರು ಬೀಫ್ ತಿನ್ನುವುದಕ್ಕಾಗಿ ಆ ಹೊಟೇಲಿಗೇ ಹೋಗುವುದು.
ಇಗ್ನೇಷಿಯಸ್ ಪಿರೇರಾ ಎಂಬವರು 1921 ರಲ್ಲಿ ಪಿರೇರ ಹೊಟೇಲನ್ನು ಪ್ರಾರಂಭಿಸಿದ್ದರು.ಕ್ರೈಸ್ತ ಧರ್ಮೀಯರಾಗಿರುವುದರಿಂದ ಒಳ್ಳೆಯ ಹಾಗೂ ರುಚಿಯಾಗಿ ಆಹಾರ ತಯಾರು ಮಾಡುವ ಅಡುಗೆಯವರನ್ನು ಸಂಪಾದಿಸಿಕೊಳ್ಳುವುದು ಆಗಿನ ಕಾಲಕ್ಕೆ ಅವರಿಗೆ ಸುಲಭವಾಗಿತ್ತು. ಅವರ ಹೊಟೇಲಿಗೇ ಖಾಯಂ ಅಡುಗೆಯವರು ಬೇಕು ಎಂದು ನುರಿತರನ್ನು ಉಳಿಸಿಕೊಳ್ಳುತ್ತ, ಬಗೆ ಬಗೆಯಲ್ಲಿ ಖಾದ್ಯ ತಯಾರು ಮಾಡುವವರನ್ನು ತಲಾಯಿಸುವಲ್ಲಿ ಅವರು ಮತ್ತು ಅವರ ನಂತರದವರು ಬಹಳ ಶೃದ್ದೆಯಲ್ಲಿ ಹೊಟೇಲ್ ನಡೆಸಿಕೊಂಡು ಬಂದಿದ್ದಾರೆ.
ಹೊಟೇಲ್ ಸಿಬ್ಬಂದಿಗಳಲ್ಲಿ ಪರಿಣತ ಸಿಬ್ಬಂದಿಗಳ ಅಲಭ್ಯತೆಯ ಕಾರಣದಿಂದ ,ನಗರದ ಮುಖ್ಯ ರಸ್ತೆಯಲ್ಲಿರುವುದರಿಂದ ವಾಹನ ನಿಲುಗಡೆಗೆ ಜಾಗ ಇಲ್ಲದ್ದು ಪ್ರಮುಖ ಸಮಸ್ಯೆಯಾಗಿರುವುದರಿಂದ ಮುಂದಿನ ಜನರೇಷನಿಗೆ ಮುಂದುವರಿಸುವುದು ಕಷ್ಟದ ಕೆಲಸ ಎನ್ನುವ ವಿಷಾದ ಈಗ ಹೊಟೇಲ್ ನಡೆಸುತ್ತಿದ್ದವರಿಗೆ ಮನದಟ್ಟಾಗಿರಬೇಕು. ಮುಖ್ಯವಾಗಿ, ಗ್ರಾಹಕರಿಗೆ ಕೊಡುತ್ತಿರುವ ಸೇವೆಯಲ್ಲಿ ಯಾವುದೇ ತರಹದ ಲೋಪ ಬರಬಾರದು ಎನ್ನುವ ಧ್ಯೇಯಕ್ಕೆ ಚ್ಯುತಿಯಾಗಬಾರದು.ಈಗಿನ ಕೆಲಸದವರನ್ನು ನಂಬಿದರೆ ಅದೆಲ್ಲವನ್ನು ಒದಗಿಸುವುದು ಕಷ್ಟದ ಸಂಗತಿ . ಉಳಿಸಿಕೊಂಡು ಬಂದಿದ್ದ ಹೆಸರು,ಪ್ರತಿಷ್ಠೆಯನ್ನು ಕೊನೇಗೆ ಹಾಳು ಮಾಡಿಕೊಂಡು ಮುಚ್ಚುವುದು ಬೇಡವೆಂದೆ ಪಿರೇರ ಹೊಟೇಲನ್ನು ಮುಚ್ಚಿದ್ದಾರೆ.
ಮಾಂಸಾಹಾರ ಪ್ರಿಯರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದ ಬಹು ಪ್ರಸಿದ್ಧ ಹೊಟೇಲು ಜುಲೈ 27 ರಂದು ಕೊನೆಯ ಊಟ ಬಡಿಸಿತು.
ನಿತ್ಯ ಹಾಗೂ ಮಂಗಳೂರಿಗೆ ಭೇಟಿ ನೀಡಿದ್ದಾಗೆಲ್ಲ ಹೊಟೇಲ್ ಪಿರೇರದಲ್ಲಿ ಉಂಡವರ ಪರವಾಗಿ,ಜಿಲ್ಲೆಯ ಪರವಾಗಿ ಹೊಟೇಲ್ ಸ್ಥಾಪಕರು ದಿ।ಇಗ್ನೇಷಿಯಸ್ ಪಿರೇರ ಮತ್ತು ಮೊನ್ನೆ ತನಕ ಮುಂದುವರಿಸಿಕೊಂಡು ಬಂದ ಅಲಿವರ್ ಪಿರೇರಾ ಅವರಿಗೆ ಅಭಿಮಾನಪೂರ್ವಕ ದೊಡ್ಡ ನಮಸ್ಕಾರ.
-ವಿ. ಕೆ. ವಾಲ್ಪಾಡಿ
ಚಿತ್ರಗಳು: ಸ್ಥಾಪಕ ಇಗ್ನೇಶಿಯಸ್ ಪಿರೇರಾ ದಂಪತಿಗಳು ಮತ್ತು ಹೊಟೇಲ್ ಕಟ್ಟಡ































