ಉಳ್ಳವರ ಹಿತ ಕಾಪಾಡುತ್ತಿರುವ ದೇಶ ಆಳುವ ವರ್ಗ
ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಂವಿಧಾನದ ರಕ್ಷಣೆಗಾಗಿ ಸಾಮೂಹಿಕ ಧರಣಿ ಸತ್ಯಾಗ್ರಹ
ಮಂಗಳೂರು : ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ,ಸಂವಿಧಾನದ ಸಂರಕ್ಷಣೆಗಾಗಿ,ಕಾರ್ಮಿಕ ವರ್ಗದ ಹಕ್ಕುಗಳ ಉಳಿವಿಗಾಗಿ ಹಾಗೂ ಕಾರ್ಪೊರೇಟ್ ಪರ ನೀತಿಗಳನ್ನು ಹಿಮ್ಮೆಟ್ಟಿಸಲು ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ ಘೋಷಣೆ ಯೊಂದಿಗೆ ಕಾರ್ಮಿಕ ವರ್ಗದ ನೇತೃತ್ವದಲ್ಲಿ ಅಖಿಲ ಭಾರತ ಕರೆಯ ಮೇರೆಗೆ ನಗರದಲ್ಲಿಂದು ಅಹೋರಾತ್ರಿ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಯುತ್ತಿದೆ.



ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು 77 ವರ್ಷಗಳು ಕಳೆದರೂ ಕೂಡ ದೇಶದ ಕಾರ್ಮಿಕ ವರ್ಗ ಹಾಗೂ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟದದಲ್ಲಿದೆ. ದೇಶದ ಆಳುವ ವರ್ಗ ಪ್ರಜ್ಞಾಪೂರ್ವಕವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ಉಳ್ಳವರ ಹಿತ ಕಾಪಾಡಲು ತುದಿಗಾಲಲ್ಲಿ ನಿಂತಿದೆ* ಎಂದು ಹೇಳಿದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಕಾರ್ಮಿಕ ವರ್ಗದ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಸಮರಧೀರ ಹೋರಾಟದ ಪರಂಪರೆಯನ್ನು ಹೊಂದಿದೆ. ಅಂದು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ದ ಪ್ರಬಲ ಪ್ರತಿರೋಧವೊಡ್ಡಿದ್ದ ದೇಶದ ಕಾರ್ಮಿಕ ವರ್ಗ ಇಂದು ಅಮೇರಿಕನ್ ಸಾಮ್ರಾಜ್ಯಶಾಹಿಗಳ ವಿರುದ್ದ ಸಮರಶೀಲ ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದು ಹೇಳಿದರು.
ಸತ್ಯಾಗ್ರಹವನ್ನುದ್ದೇಶಿಸಿ ರೈತ ಸಂಘಟನೆಯ ಮುಖಂಡರಾದ ಕೆ.ಯಾದವ ಶೆಟ್ಟಿ, ಕಾರ್ಮಿಕ ನಾಯಕರಾದ ಬಿ ಎಂ.ಭಟ್, ಸುಕುಮಾರ್ ತೊಕ್ಕೊಟ್ಟು, ಯುವಜನ ನಾಯಕ ಮುನೀರ್ ಕಾಟಿಪಳ್ಳ, ಮಹಿಳಾ ಮುಖಂಡರಾದ ಜಯಂತಿ ಶೆಟ್ಟಿ ಬ್ಯಾಂಕ್ ನೌಕರರ ಮುಖಂಡರಾದ ಬಿ ಎಂ.ಮಾಧವ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ನಾಯಕರಾದ ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರೋಹಿದಾಸ್,ರವಿಚಂದ್ರ ಕೊಂಚಾಡಿ, ವಸಂತಿ ,ಈಶ್ವರಿ, ರೈತ ನಾಯಕರಾದ ಸದಾಶಿವದಾಸ್, ಕೃಷ್ಣಪ್ಪ ಸಾಲ್ಯಾನ್,ಯುವಜನ ನಾಯಕರಾದ ಸಂತೋಷ್ ಬಜಾಲ್,ನವೀನ್ ಕೊಂಚಾಡಿ,ರಿಜ್ವಾನ್ ಹರೇಕಳ, ವಿದ್ಯಾರ್ಥಿ ನಾಯಕ ವಿನುಷ ರಮಣ ಸಾಮಾಜಿಕ ಚಿಂತಕರಾದ ಪ್ಲೇವಿಕ್ರಾಸ್ತಾ ಅತ್ತಾವರ,ಮೀನಾ ಟೆಲ್ಲಿಸ್,ಬಿ ಎನ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.














