ಉಳಾಯಿಬೆಟ್ಟು ದರೋಡೆ ಪ್ರಕರಣ: ಗ್ರಾಮ ಪಂಚಾಯತ್ ಸದಸ್ಯ ಸಹಿತ 10 ಮಂದಿಯ ಬಂಧನ
ಪ್ರಕರಣದ ಮುಖ್ಯ ಸೂತ್ರಧಾರಿ ವಸಂತ ಪೂಜಾರಿ ಆಗಿದ್ದು, ಈತ ನೀರುಮಾರ್ಗ ಗ್ರಾಪಂ ಸದಸ್ಯನಾಗಿದ್ದು, ಪದ್ಮನಾಭ ಕೋಟ್ಯಾನ್ ಅವರ ಚಾಲಕನಾಗಿದ್ದ ಎಂದು ಕಮಿಷನರ್ ತಿಳಿಸಿದ್ದಾರೆ.

ಮಂಗಳೂರು, ಜು.4: ನಗರ ಹೊರವಲಯ ಉಳಾಯಿಬೆಟ್ಟು ಸಮೀಪದ ಪೆರ್ಮಂಕಿಯ ಉದ್ಯಮಿ, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್ರ ಮನೆಯಲ್ಲಿ ಜೂ.21ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.




ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನೀರುಮಾರ್ಗ ನಿವಾಸಿಗಳಾದ ವಸಂತ ಕುಮಾರ್ (42), ರಮೇಶ ಪೂಜಾರಿ(42), ರೇಮಂಡ್ ಡಿಸೋಜ47), ಪೈವಳಿಕೆ ಕುರುಡಪದವು ನಿವಾಸಿ ಬಾಲಕೃಷ್ಣ ಶೆಟ್ಟಿ(48), ತೃಶೂರು ಜಿಲ್ಲೆಯ ಜಾಕಿರ್ ಯಾನೆ ಶಾಕೀರ್ (56), ವಿನೋಜ್ (38), ಸಜೀಶ್ (32), ಸತೀಶ್ ಬಾಬು(44), ಶಿಜೋ ದೇವಸ್ಸಿ (38), ತಿರುವನಂತಪುರ ಜಿಲ್ಲೆಯ ಬಿಜು (41) ಬಂಧಿಸಲಾಗಿದೆ ಎಂದರು.
ಜೂನ್ 21ರಂದು ಎಂಟರಿಂದ ಒಂಬತ್ತು ಮಂದಿ ಮುಸುಕುಧಾರಿಗಳು ಮನೆಗೆ ನುಗ್ಗಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ರವರನ್ನು ಕಟ್ಟಿ ಹಾಕಿ ಥಳಿಸಿದ್ದು ಹಾಗೂ ಪತ್ನಿ, ಮಕ್ಕಳನ್ನು ಬೆದರಿಸಿ 9 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಮನೆಯ ವಾಹನದಲ್ಲೇ ಅಲ್ಪ ದೂರದ ವರೆಗೆ ಪ್ರಯಾಣಿಸಿ ನಂತರ ಅವರ ವಾಹನವನ್ನು ಮಧ್ಯದಲ್ಲೇ ಬಿಟ್ಟು ಇನ್ನೋವಾದಲ್ಲಿ ಪರಾರಿಯಾಗಿದರು.
ನಾಲ್ವರು ಸ್ಥಳೀಯ ಆರೋಪಿಗಳಾದ ವಸಂತ್, ರಮೇಶ್, ರೇಮಂಡ್ ಮತ್ತು ಬಾಲಕೃಷ್ಣ ದರೋಡೆಗೆ ಯೋಜನೆ ರೂಪಿಸಿದ್ದರು. ಬಾಲಕೃಷ್ಣ ನಂತರ ಜಾನ್ ಬಾಸ್ಕೋ ನೇತೃತ್ವದ ಕೇರಳ ತಂಡದೊಂದಿಗೆ ಸಂಪರ್ಕ ಹೊಂದಿದ್ದರು.
ಎಂಟು ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಕೇರಳದ ತಂಡ ಮಂಗಳೂರಿಗೆ ಭೇಟಿ ನೀಡಿದ್ದು, ದರೋಡೆಗೆ ಪ್ರದೇಶದ ಸ್ಕೆಚ್ ಮತ್ತು ನಕ್ಷೆಯನ್ನು ಸಿದ್ಧಪಡಿಸುವಂತೆ ರಮೇಶ್ ಮತ್ತು ವಸಂತ್ ಅವರನ್ನು ಕೇಳಿದ್ದರು ಅದರಂತೆಯೇ ಗುತ್ತಿಗೆದಾರನ ಬಳಿ 100 ರಿಂದ 300 ಕೋಟಿ ರೂ.ಗೂ ಹೆಚ್ಚು ಹಣವಿದೆ ಎಂದು ಸ್ಥಳೀಯ ಆರೋಪಿಗಳು ಕೇರಳ ತಂಡಕ್ಕೆ ತಿಳಿಸಿದ್ದು ಲೂಟಿಹೊಡೆಯಲು ಎಲ್ಲಾ ರೀತಿಯ ಸ್ಕೆಚ್ ತಯಾರಿಸಿದ್ದರು.
ಈ ಪ್ರಕರಣದಲ್ಲಿ ಇನ್ನೂ 4-5 ಮಂದಿಯನ್ನು ಬಂಧಿಸಬೇಕಿದ್ದು 100ರಿಂದ 300 ಕೋಟಿ ಲೂಟಿ ಮಾಡಬಹುದೆಂದು ನಂಬಿಸಿ ಮಾಸ್ಟರ್ ಬೆಡ್ರೂಮ್ನ ಟೈಲ್ಸ್ ತೆಗೆಯಲು 20ಕ್ಕೂ ಹೆಚ್ಚು ಗೋಣಿ ಚೀಲಗಳು ಮತ್ತು ಸಲಕರಣೆಗಳನ್ನು ತಂದಿದ್ದರು. ಒಂದೇ ಒಂದು ಸುಳಿವೇ ಇಲ್ಲದ ಕುರುಡು ಪ್ರಕರಣವಾಗಿರುವುದರಿಂದ ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಕಳೆದ 15 ದಿನಗಳಿಂದ ಈ ಪ್ರಕರಣವನ್ನು ಭೇದಿಸಲು ಅವಿರತವಾಗಿ ಶ್ರಮಿಸಿದ ಡಿಸಿಪಿ, ಎಸಿಪಿ ಮತ್ತು ಸಿಸಿಬಿ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.





































