ಉಪ್ಪೂರಿನಲ್ಲಿ ‘ವಯೋವಂದನ ಆತಿಥ್ಯ ಗೃಹ’ ಶಂಕುಸ್ಥಾಪನೆ, ಭೂಮಿಪೂಜೆ

Picture of RB NEWS

RB NEWS

Bureau Report


ಉಪ್ಪೂರು (ಬ್ರಹ್ಮಾವರ): ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ‘ವಯೋವಂದನ ಆತಿಥ್ಯ ಗೃಹ’ ಕಟ್ಟಡದ ಶಂಕುಸ್ಥಾಪನೆ ಹಾಗೂ ಭೂಮಿಪೂಜೆ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಕಾಶೀ ಮಠಾಧೀಶರಾದ ಶ್ರೀ ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ನಕ್ಷತ್ರವಾದ ಸ್ವಾತಿ ನಕ್ಷತ್ರದಂದು ಫೆಬ್ರವರಿ 8ರಂದು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಅಪರಾಹ್ನ 12.45ರ ಅಭಿಜಿನ್ ಸುಮಹೂರ್ತದಲ್ಲಿ ಜರುಗಿತು.
ವೇದಮೂರ್ತಿ ಶ್ರೀ ಚೇಂಪಿ ರಾಮಚಂದ್ರ ಅನಂತ ಭಟ್ ಅವರು ಭೂಮಿಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿ ವಯೋವಂದನ ಆತಿಥ್ಯ ಗೃಹದ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ವಾನ್ ಹರಿಪ್ರಸಾದ್ ಶರ್ಮ ಹಾಗೂ ಶ್ರೀ ಸತ್ಯನಾರಾಯಣ ಭಟ್ ಅವರು ಸಹಕರಿಸಿದರು.
ಬೆಳಿಗ್ಗೆ 9 ಗಂಟೆಗೆ ಸಮೀಪದ ಅಮ್ಮುಂಜೆ ಶ್ರೀ ದಾಮೋದರ ದೇವಸ್ಥಾನದಿಂದ ವಾಸ್ತು ಶಿಲೆಗಳನ್ನು ಶೋಭಾಯಾತ್ರೆಯೊಂದಿಗೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಆಗಮಿಸಿದ ಸಹಸ್ರಾರು ಸಮಾಜ ಬಂಧುಗಳು ಬೃಹತ್ ಮೆರವಣಿಗೆಯ ಮೂಲಕ ಸಾಲಂಕೃತ ವಾಹನದಲ್ಲಿ ಉಪ್ಪೂರಿನಲ್ಲಿರುವ ನಿವೇಶನದ ಬಳಿಗೆ ಕರೆತಂದರು.
ಬೆಳಿಗ್ಗೆ 10ರಿಂದ 11.45ರವರೆಗೆ ಸಭಾ ಕಾರ್ಯಕ್ರಮ ಜರುಗಿದ್ದು, ಮಧ್ಯಾಹ್ನ 12 ಗಂಟೆಯಿಂದ ಬೆಂಗಳೂರಿನ ಖ್ಯಾತ ಗಾಯಕ ಶ್ರೀ ಶಂಕರ ಶಾನ್ಭಾಗ್ ಮತ್ತು ತಂಡದಿಂದ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಶ್ರೀ ಆರ್. ವಿವೇಕಾನಂದ ಶೆಣೈ, ಕಳೆದ 14 ವರ್ಷಗಳಿಂದ ಸಮಾಜ ಸಂಘಟನೆ ಹಾಗೂ ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಉಡುಪಿ, ದ.ಕ., ಉ.ಕ. ಹಾಗೂ ಶಿವಮೊಗ್ಗ ಜಿಲ್ಲೆಗಳ ಆರ್ಥಿಕವಾಗಿ ಸಂಕಷ್ಟದಲ್ಲಿರುವ 192 ಕುಟುಂಬಗಳಿಗೆ ‘ಕುಟುಂಬ ಚೈತನ್ಯ ನಿಧಿ’ಯಡಿ ಪ್ರತಿ ತಿಂಗಳು ರೂ.1,000 ರಿಂದ ರೂ.2,500ರವರೆಗೆ ನೆರವು ನೀಡಲಾಗುತ್ತಿದೆ. ಯೋಜನೆಯ ದಶಮಾನೋತ್ಸವ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿದಾಗ ಹಲವು ಹಿರಿಯರು ವಾಸಸ್ಥಾನದ ಕೊರತೆಯಿಂದ ದುಸ್ಥಿತಿಯಲ್ಲಿರುವುದು ಕಂಡುಬಂದಿದ್ದು, ಅದೇ ‘ವಯೋವಂದನ ಆತಿಥ್ಯ ಗೃಹ’ ಯೋಜನೆಗೆ ಕಾರಣವಾಯಿತು ಎಂದರು.
ಸಭೆಯನ್ನು ಉದ್ಘಾಟಿಸಿದ ವೇದಿಕೆಯ ಮಾರ್ಗದರ್ಶಕ ಶ್ರೀ ಚೇಂಪಿ ರಾಮಚಂದ್ರ ಅನಂತ ಭಟ್, ವೇದಿಕೆಯ ಸಮಾಜಮುಖಿ ಚಿಂತನೆ ಹಾಗೂ ಯೋಜನೆಗಳಿಗೆ ಸಮಾಜದಿಂದ ಅಭೂತಪೂರ್ವ ಬೆಂಬಲ ದೊರೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ತ್ರಿಷಾ ವಿದ್ಯಾ ಕಾಲೇಜಿನ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಮಾತನಾಡಿ, ಹಿರಿಯರ ಆರೈಕೆ ಸವಾಲಿನ ಕೆಲಸವಾಗಿದ್ದು, ವೇದಿಕೆಯ ನಿರಂತರ ಶ್ರಮ, ಸಮಾಜದ ಸಹಕಾರ ಹಾಗೂ ದಾನಿಗಳ ನೆರವಿನಿಂದ ಈ ಮಹತ್ವಾಕಾಂಕ್ಷಿ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬರಲಿ ಎಂದು ಶುಭ ಹಾರೈಸಿದರು.
ಯೋಜನೆಯ ಮಾರ್ಗದರ್ಶಕ ಡಾ. ಕಲ್ಯ ಸುರೇಶ್ ಶೆಣೈ, ಕುಟುಂಬದ ಹಿರಿಯರನ್ನು ಗೌರವಯುತವಾಗಿ ನೋಡಿಕೊಳ್ಳುವುದು ಸಮುದಾಯದ ಜವಾಬ್ದಾರಿಯಾಗಿದ್ದು, ಮಕ್ಕಳಿಲ್ಲದ ದಂಪತಿಗಳು ವೃದ್ಧಾಪ್ಯದಲ್ಲಿ ಅನುಭವಿಸುವ ಸಂಕಷ್ಟಗಳಿಗೆ ಈ ಯೋಜನೆ ಶಾಶ್ವತ ಪರಿಹಾರವಾಗಲಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿಎಎಸ್‌ಎಸ್ ನಾಯಕ್, ಸಮಾಜದ ದಾನಿಗಳ ನೆರವಿನಿಂದ ಸಂಕಷ್ಟದಲ್ಲಿರುವ ಹಿರಿಯರಿಗೆ ಉಚಿತ ಆಶ್ರಯ ಕಲ್ಪಿಸುವ ಯೋಜನೆ ಸಮುದಾಯದ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಮ್ಮುಂಜೆ ಶ್ರೀ ದಾಮೋದರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ವಿನೋದ್ ನಾಯಕ್, ಮುಂಬೈನ ಉದ್ಯಮಿ ಶ್ರೀ ಮಧು ಬಂಡಾರ್ಕರ್, ಬೆಂಗಳೂರಿನ ಶ್ರೀಮತಿ ಸತ್ಯಭಾಮ ಕಾಮತ್, ಶ್ರೀಮತಿ ಕುಂಬ್ಳೆ ನಾಯಕ್, ಶ್ರೀ ವಿಜಯಕುಮಾರ್ ಶೆಣೈ, ಲೇಖಕಿ ಶ್ರೀಮತಿ ಪ್ರಜ್ವಲಾ ಶೆಣೈ, ಶ್ರೀಮತಿ ರಮ್ಯಾ ನಾಯಕ್, ನಂದ್ಯಾಲ ರಘುವೀರ ಶೆಣೈ ದಂಪತಿ, ದಾನಿಗಳಾದ ಶ್ರೀ ವೀರ ಸಿಂಹ ನಾಯಕ್ ದಂಪತಿ, ಮಂಗಳೂರಿನ ಸುಬ್ರಹ್ಮಣ್ಯ ಪ್ರಭು, ಉಡುಪಿಯ ಶ್ರೀ ಎಚ್. ನಾಗೇಶ್ ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವೇದಿಕೆಯ ಅಧ್ಯಕ್ಷ ಶ್ರೀ ಜಿ. ಸತೀಶ್ ಹೆಗ್ಡೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top