ಉದಯವಾಣಿ ಮಣಿಪಾಲ ಆವೃತ್ತಿಯ ಸ್ಥಾನೀಯ ಸಂಪಾದಕರಾಗಿ ಅಳದಂಗಡಿಯ ಕೃಷ್ಣ ಭಟ್

Picture of RB NEWS

RB NEWS

Bureau Report

ಬೆಳ್ತಂಗಡಿ: ತಾಲೂಕಿನ ಅಳದಂಗಡಿಯವರಾದ ಎ.ಕೃಷ್ಣ ಭಟ್ ಉದಯವಾಣಿ ದಿನಪತ್ರಿಕೆಯ ಮಣಿಪಾಲ ಕೇಂದ್ರ ಕಚೇರಿಯಲ್ಲಿ ಸ್ಟಾನೀಯ ನೇಮಕಗೊಂಡಿದ್ದಾರೆ.

ಇವರು ಅಳದಂಗಡಿಯ ದಿ.ಎ.ಸೀತಾರಾಮಯ್ಯ ಮತ್ತು ಕಮಲಮ್ಮ ದಂಪತಿಯ ಪುತ್ರರಾಗಿದ್ದಾರೆ. ಅಳದಂಗಡಿ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಇನ್ ಪಾಲಿಮರ್ ಟೆಕ್ನಾಲಜಿಯನ್ನು ಪ್ರಥಮ ಬ್ಯಾಂಕ್‌ ನೊಂದಿಗೆ ಪೂರ್ಣಗೊಳಿಸಿದ್ದು, ಮನೋವಿಜ್ಞಾನದಲ್ಲಿ ಬಿಎ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 28 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು ಕರಾವಳಿ ಅಲೆ- ಜನಾಂತರಂಗ ಪತ್ರಿಕಾ ಬಳಗದಲ್ಲಿ 10 ವರ್ಷ ಸೇವೆ ಸಲ್ಲಿಸಿ, ಕಾರ್ಯ ನಿರ್ವಾಹಕ ಸಂಪಾದಕರಾಗಿದ್ದರು. 16 ವರ್ಷಗಳ ಕಾಲ ವಿಜಯ ಕರ್ನಾಟಕ ಮಂಗಳೂರು ಮತ್ತು ಬೆಂಗಳೂರು ಕಚೇರಿಗಳಲ್ಲಿ ಸಹಾಯಕ ಸುದ್ದಿ ಸಂಪಾದಕನವರೆಗೆ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದರು.

2022ರಿಂದ 2024ರ ಮಾರ್ಚ್ ವರೆಗೆ ವಿಸ್ತಾರ ನ್ಯೂಸ್ ಮಾಧ್ಯಮ ಸಂಸ್ಥೆಯಲ್ಲಿ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿ ಇದೀಗ ಉದಯವಾಣಿ ಬಳಗ ಸೇರಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ಹಾಗೂ ಮುಂಬೈ ಒಳಗೊಂಡ ಉದಯವಾಣಿಯ ಮಣಿಪಾಲ ಆವೃತ್ತಿಯಲ್ಲಿ ಕೃಷ್ಣ ಭಟ್ ಸ್ಥಾನೀಯ ಸಂಪಾದಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಯಕ್ಷಗಾನ, ಕಂಬಳ, ನಾಟಕ ಸೇರಿದಂತೆ ತುಳುನಾಡಿನ ಸಾಂಸ್ಕೃತಿಕ ವೈಭವದ ಬಗ್ಗೆ ಆಸಕ್ತಿಯನ್ನು ಹೊಂದಿರುವ ಇವರು ಪ್ರಮುಖವಾಗಿ ಸ್ಫೂರ್ತಿದಾಯಕ ಬರಹಗಾರರಾಗಿ ಮತ್ತು ಮಾತುಗಾರರಾಗಿ ಗುರುತಿಸಿಕೊಂಡಿದ್ದಾರೆ. ಆರೋಗ್ಯ, ಸಿನಿಮಾ, ಯುವಜನ, ಸಾಂಸ್ಕೃತಿಕ, ಯಕ್ಷಗಾನ, ಸ್ತ್ರೀ ಸಬಲೀಕರಣ, ಪ್ರವಾಸ, ಮನೋತಲ್ಲಣ, ಬದುಕಿನ ಪಾಸಿಟಿವಿಟಿಗೆ ಸಂಬಂಧಿಸಿ, 10,000ಕ್ಕೂ ಅಧಿಕ ಬರಹಗಳನ್ನು ಬರೆದಿದ್ದಾರೆ. ಅವರ ಸ್ಪೂರ್ತಿದಾಯಕ ಕಥೆಗಳ ನಮ್ಮದೇ ಕಥೆಗಳು ಜನಪ್ರಿಯ ಸರಣಿಯಾಗಿದ್ದು, ಈಗ ಪುಸ್ತಕ ರೂಪದಲ್ಲೂ ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top