








ಉದಯಕುಮಾರ್ ಶೆಟ್ಟಿಯವರ ದ್ವೇಷ ಹಾಗೂ ಅಸೂಯೆಯ ರಾಜಕಾರಣಕ್ಕೆ ಬಲಿಯಾಗಿ ಹೋಯ್ತು –ಶಾಸಕ ವಿ.ಸುನೀಲ್ ಕುಮಾರ್ : ಕಳ್ಳತನ, ದುಸ್ಥಿತಿಗೆ ಶಾಸಕ ಸುನೀಲ್ ಕುಮಾರ್ ನೇರ ಹೊಣೆ – ಮುನಿಯಾಲು ಉದಯಕುಮಾರ್ ಶೆಟ್ಟಿ

ವೇದಿಕೆಯಲ್ಲಿ ಆತ್ಮೀಯತೆ (ತೋರಿದ) ರಾಜಕೀಯ(ದಲ್ಲಿ) ಎದುರಾಳಿಗಳು….ಶಾಸಕ ವಿ.ಸುನೀಲ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ
ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಕಳ್ಳತನ ನಡೆದಿದೆ..!
ಥೀಂ ಪಾರ್ಕ್ ನ ಬಾಗಿಲನ್ನು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮೇಲ್ಛಾವಣಿಗೆ ಹಾಕಿದ್ದ ತಾಮ್ರದ ಹೊದಿಕೆಗಳನ್ನು ಕಿತ್ತು ಕಳ್ಳತನ ಮಾಡಿದ್ದಾರೆ.
ಕಾರ್ಕಳದ ಇತಿಹಾಸದಲ್ಲಿ ಇದೊಂದು ದುರ್ದಿನ. ನಮ್ಮ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ ಕನಸಿನೊಂದಿಗೆ ಪ್ರಾರಂಭಿಸಿದ ಈ ಮಹತ್ವಾಕಾಂಕ್ಷಿ ಯೋಜನೆ ಸ್ಥಳೀಯ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿಯವರ ದ್ವೇಷ ಹಾಗೂ ಅಸೂಯೆಯ ರಾಜಕಾರಣಕ್ಕೆ ಬಲಿಯಾಗಿ ಹೋಯ್ತು. ಕಳೆದ ಎರಡು ವರ್ಷದಿಂದ ಈ ಯೋಜನೆಯ ಅಭಿವೃದ್ಧಿಗೆ ಬಿಡಿಕಾಸು ಬಿಡುಗಡೆಯಾಗದಂತೆ ಮಾಡಿ ಪರಶುರಾಮ ಥೀಂ ಪಾರ್ಕ್ ಅಕ್ಷರಶಃ ಪಾಳು ಬಿದ್ದು ಹೋಗುವಂತೆ ಮಾಡಿದರು. ಪ್ರವಾಸಿಗರು, ವಿದ್ಯಾರ್ಥಿಗಳು ಭೇಟಿಕೊಟ್ಟು ನಳನಳಿಸಬೇಕಿದ್ದ ಈ ಪ್ರವಾಸಿ ತಾಣ ಕಾಂಗ್ರೆಸ್ ನಾಯಕರ ರಾಜಕೀಯದಾಟದಿಂದಾಗಿ ಇಂದು ಕಳ್ಳರು ನುಗ್ಗಿ ಮೇಲ್ಛಾವಣಿಯನ್ನೇ ಕದ್ದೊಯ್ಯುವ ಸ್ಥಿತಿ ನಿರ್ಮಾಣವಾಗಿದೆ.
ಬಹುಶಃ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಉದಯ್ ಕುಮಾರ್ ಶೆಟ್ಟಿಯವರ ಹೊಟ್ಟೆ ಇಂದು ತಣ್ಣಗಾಗಿರಬಹುದು. ಮುಂದಿನ ಚುನಾವಣೆಯವರೆಗೂ ಪರಶುರಾಮ ಥೀಂ ಪಾರ್ಕ್ ಯೋಜನೆಯನ್ನು ಜೀವಂತವಾಗಿ ಇಡಬೇಕೆಂದು ಕಾರ್ಕಳಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಕಾರ್ಕಳ ಕಾಂಗ್ರೆಸ್ ಪಟಾಲಂಗೆ ಫತ್ವಾ ಕೊಟ್ಟಿದ್ದರು. ಅದರ ಫಲವಾಗಿ ಘಜ್ನಿ, ಘೋರಿಗಳು ಹಿಂದು ಶ್ರದ್ಧಾ ಕೇಂದ್ರಗಳನ್ನು ಧ್ವಂಸ ಮಾಡಿದ ರೀತಿ ಥೀಂ ಪಾರ್ಕ್ ನಲ್ಲಿ ಕಳ್ಳತನವನ್ನೂ ನಡೆಸಿ ಪಾಳುಬೀಳಿಸಿದರು.
ಅಷ್ಟಕ್ಕೂ ಈ ಪ್ರಕರಣದಲ್ಲಿ ಜಿಲ್ಲಾಡಳಿತದ #ವೈಫಲ್ಯ ಎದ್ದು ಕಾಣುತ್ತಿದೆ. ಥೀಂ ಪಾರ್ಕ್ ಗೆ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಿ ( ಸೆ.2023 ) ಸ್ಥಳೀಯ ಆಡಳಿತ ಆದೇಶ ಹೊರಡಿಸಿದ್ದರೂ ಕೆಲವರು ಕಾನೂನು ಬಾಹಿರವಾಗಿ ಇಲ್ಲಿಗೆ ಒಳನುಗ್ಗಿ ವಿಡಿಯೋ ಚಿತ್ರೀಕರಣ ನಡೆಸಿದ್ದರು.ಇದೆಲ್ಲದರ ಮಧ್ಯೆಯೇ ಕಳ್ಳತನ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿದವರನ್ನೂ ವಿಚಾರಣೆಗೆ ಒಳಪಡಿಸುವ ಜತೆಗೆ ಕಳ್ಳತನ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತೇನೆ.ಕಾರ್ಕಳದ ಪ್ರವಾಸೋದ್ಯಮಕ್ಕೆ ಕೊಳ್ಳಿ ಇಟ್ಟ ಕಾಂಗ್ರೆಸ್ ನಾಯಕರನ್ನು ಇತಿಹಾಸ ಕ್ಷಮಿಸದು.
–ವಿ ಸುನೀಲ್ ಕುಮಾರ್
ಶಾಸಕರು, ಕಾರ್ಕಳ

ಪರಶುರಾಮ ಪ್ರತಿಮೆಯ ಸೊಂಟದ ಮೇಲ್ಬಾಗದ ಕಳ್ಳತನವೇ ಉಳಿದ ಬಿಡಿಭಾಗಗಳ ಕಳ್ಳತನಕ್ಕೆ ಪ್ರೇರಣೆ: ಈ ದುಸ್ಥಿತಿಗೆ ಶಾಸಕ ಸುನೀಲ್ ಕುಮಾರ್ ನೇರ ಹೊಣೆ
ಕಾರ್ಕಳದ ಪರಶುರಾಮ ಥೀಮ್ ಪಾರ್ಕಿನಲ್ಲಿ ಎರಡನೆಯ ಬಾರಿ ಕಳ್ಳತನ ನಡೆದಿದೆ.
ಮೊದಲನೇ ಬಾರಿ ಕಳ್ಳತನ ನಡೆದಿದ್ದು: ಕಂಚಿನ ಬದಲು ಪರಶುರಾಮರ ಪೈಬರ್ ಮಿಶ್ರಿತ ನಕಲಿ ಪ್ರತಿಮೆ ನಿರ್ಮಿಸಿ ಅದರಲ್ಲಿಯೂ ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಸುನೀಲ್ ಕುಮಾರ್ ನಿರ್ದೇಶನದಂತೆ ಕಳ್ಳತನ ನಡೆಸಲಾಗಿತ್ತು.
ಎರಡನೇ ಬಾರಿ ಕಳ್ಳತನ: ಥೀಮ್ ಪಾರ್ಕಿನಲ್ಲಿ ಉಳಿದ ಬಿಡಿ ಭಾಗಗಳನ್ನು ಈಗ ಕಳ್ಳರು ಕಳ್ಳತನ ನಡೆಸಿದ್ದಾರೆ.
ಮೊದಲನೇ ಬಾರಿ ಪರಶುರಾಮ ಪ್ರತಿಮೆಯ ಸೊಂಟದ ಮೇಲಿನ ಭಾಗ ಕಳ್ಳತನವಾದಾಗ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಿದ್ದು ಯಾಕೆ..? ಆ ಕಳ್ಳತನ ಸುನೀಲ್ ಕುಮಾರ್ ನಿರ್ದೇಶನದಂತೆ ನಡೆದ ಕಾರಣ ಆಗ ಮೌನವಾಗಿದ್ದರು ಎಂದುಕೊಳ್ಳಬೇಕಾಗುತ್ತದೆ.
ಕೋಟ್ಯಾಂತರ ರೂಪಾಯಿ ಸರ್ಕಾರದ ಅನುದಾನದವನ್ನು ಬಳಿಸಿ ಕಂಚಿನ ಪ್ರತಿಮೆಯ ಬದಲು ನಕಲಿ ಪರಶುರಾಮ ಪ್ರತಿಮೆ ನಿರ್ಮಿಸಿ ಜನತೆಗೆ ಮೋಸ ಮಾಡಿದಾಗಲೇ ಪರಶುರಾಮ ಥೀಮ್ ಪಾರ್ಕಿನ ಮೂಲಕ ತೆರೆದುಕೊಳ್ಳಬೇಕಾಗಿದ್ದ ಸುಂದರ ಪ್ರವಾಸೋದ್ಯಮದ ಯೋಜನೆ ನುಚ್ಚುನೂರಾಗಿತ್ತು.
ಯೋಜನೆಯ ಆರಂಭದಲ್ಲೇ ಪರಶುರಾಮ ಪ್ರತಿಮೆ ನಿರ್ಮಾಣದ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರೆ ಇಂದು ಇಂತಾ ದುರ್ಗತಿ ಬರುತ್ತಿರಲಿಲ್ಲ. ಕಂಚಿನ ಪ್ರತಿಮೆಂದು ಜನರನ್ನು, ಸರ್ಕಾರವನ್ನು, ಧಾರ್ಮಿಕ ನಂಬಿಕೆಯನ್ನು, ಆಸ್ತಿಕ ಬಂದುಗಳನ್ನು ನಂಬಿಸಿ ಮೋಸ ಮಾಡಿದ ಸುನಿಲ್ ಕುಮಾರ್ ಅವರಿಂದಾಗಿ ಇಂದು ಪರಶುರಾಮ ಥೀಮ್ ಪಾರ್ಕ್, ಗೆ ಕಳ್ಳಕಾಕರು ನುಗ್ಗುವಂತಾಗಿದೆ. ಶಾಸಕ ಸುನೀಲ್ ಕುಮಾರ್ ಮಾಡಿದ ಮೋಸದಿಂದಾಗಿ ಈ ಕಳ್ಳತನ ನಡೆದಿದ್ದು ಕಾರ್ಕಳದ ಜನತೆಯ ಕನಸಿನ ಪ್ರವಾಸಿ ತಾಣವಾಗಬೇಕಿದ್ದ ಪರಶುರಾಮ ಥೀಮ್ ಪಾರ್ಕ್,ಗೆ ಇಂತಾ ದುರ್ಗತಿ ಬರಲು ಕಾರಣವಾದ ಶಾಸಕ ಸುನೀಲ್ ಕುಮಾರ್ ತಕ್ಷಣ ಜನತೆಯ ಕ್ಷಮೆ ಯಾಚಿಸಬೇಕು.
ಒಬ್ಬ ಸಮಯ ಸಾಧಕ, ಸ್ವಾರ್ಥಿ, ಚುನಾವಣೆಗಾಗಿ ಹಿಂದು ಧರ್ಮಕ್ಕೂ, ಜನರಿಗೂ ಮೋಸ ಮಾಡುವ ನೀಚ ಮನಸ್ಥಿತಿಯ ಸುನೀಲ್ ಕುಮಾರ್,ನಂತವರಿಂದಾಗಿ ಇಂದು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೀಯ ಬಿಂದುವಾಗಬೇಕಿದ್ದ ಕಾರ್ಕಳ ವಿವಾದದ ತಾಣವಾಗಿರುವುದು ಅತ್ಯಂತ ಬೇಸರದ ಸಂಗತಿ, ಈ ಕೂಡಲೇ ಸರ್ಕಾರದ ಸ್ವತ್ತನ್ನು ಕಳವುಗೈದ ದುಷ್ಕರ್ಮಿಗಳನ್ನು ಬಂಧಿಸಬೇಕು, ಸರ್ಕಾರದ ಸ್ವತ್ತನ್ನು ರಕ್ಷಿಸಲು ಸೂಕ್ತ ಭದ್ರತೆ ಒದಗಿಸಬೇಕೆಂದು ಪೋಲಿಸ್ ಇಲಾಖೆಗೆ ಆಗ್ರಹಿಸುತ್ತಿದ್ದೇನೆ.
ಉದಯ ಶೆಟ್ಟಿ ಮುನಿಯಾಲು
ಕಾಂಗ್ರೆಸ್ ನಾಯಕರು ಕಾರ್ಕಳ ವಿಧಾನಸಭಾ ಕ್ಷೇತ್ರ































