ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಕಮರ್ಷಿಯಲ್ ಪೈಲಟ್ ಆಗಿ ಕೌಡೂರಿನ ಶೈನಿ ಅಸ್ಮಾಸಲ್ಡಾನ
RB NEWS
Bureau Report
ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಕಮರ್ಷಿಯಲ್ ಪೈಲಟ್ ಆಗಿ ಕೌಡೂರಿನ ಶೈನಿ ಅಸ್ಮಾಸಲ್ಡಾನ
ಕಾರ್ಕಳ: ವಿಮಾನಯಾನ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸುವ ಸಾಧನೆಯನ್ನು ಕಾರ್ಕಳ ತಾಲೂಕಿನ ಕೌಡೂರಿನ ಯುವತಿ ಶೈನಿ ಅಸ್ಮಾಸಲ್ಡಾನ ಅವರು ಮಾಡಿದ್ದಾರೆ. ಕಠಿಣ ಹಾಗೂ ಸವಾಲಿನ ವೃತ್ತಿಪರ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರು ಕಮರ್ಷಿಯಲ್ ಪೈಲಟ್ ಲೈಸೆನ್ಸ್ (CPL) ಪಡೆದುಕೊಂಡಿದ್ದು, ಈ ಸಾಧನೆ ಮಾಡಿದ ಉಡುಪಿ ಜಿಲ್ಲೆಯ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ದಾನ ಮತ್ತು ಮರಿಯಾ ಗ್ರೆಟ್ನಾ ಸಲ್ದಾನ ದಂಪತಿಯ ಪುತ್ರಿಯಾಗಿರುವ ಶೈನಿ ಅಸ್ಮಾಸಲ್ಡಾನ ಅವರು ಬಾಲ್ಯದಿಂದಲೇ ವಿಮಾನಯಾನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಬೇಕೆಂಬ ಕನಸು ಕಂಡಿದ್ದರು. ತಮ್ಮ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ನಿರಂತರ ಪರಿಶ್ರಮ ಹಾಗೂ ಶಿಸ್ತಿನ ತರಬೇತಿಗೆ ಒತ್ತು ನೀಡಿದರು. ಶೈನಿ ಅವರು ತಮ್ಮ ಪ್ರಾಥಮಿಕ ಶಿಕ್ಷಣ ಹಾಗೂ ಪಿಯುಸಿ ವಿದ್ಯಾಭ್ಯಾಸವನ್ನು ಕಾರ್ಕಳದ ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪೂರ್ಣಗೊಳಿಸಿದರು. ಬಳಿಕ ಪೈಲಟ್ ತರಬೇತಿಗೆ ಪ್ರವೇಶ ಪಡೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ನಡೆದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಿ, ದೇಶದ ಪ್ರತಿಷ್ಠಿತ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ (IGRUA)ಗೆ ಪ್ರವೇಶ ಪಡೆಯುವ ಅರ್ಹತೆ ಗಳಿಸಿದರು. 2023ರ ಆಗಸ್ಟ್‌ನಿಂದ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ IGRUAಯಲ್ಲಿ ವೃತ್ತಿಪರ ಪೈಲಟ್ ತರಬೇತಿಯನ್ನು ಆರಂಭಿಸಿದರು. ವಿಮಾನಯಾನ ಕ್ಷೇತ್ರದಲ್ಲಿ ಅಗತ್ಯವಿರುವ ಸೈದ್ಧಾಂತಿಕ ಜ್ಞಾನ, ಹಾರಾಟ ತರಬೇತಿ ಸೇರಿದಂತೆ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅವರು ಇದೀಗ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಮಹಿಳೆಯರು ವಿಮಾನಯಾನ ಸೇರಿದಂತೆ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರುತ್ತಿರುವ ಸಂದರ್ಭದಲ್ಲಿ ಶೈನಿ ಅಸ್ಮಾಸಲ್ಡಾನ ಅವರ ಸಾಧನೆ ವಿಶೇಷ ಮಹತ್ವ ಪಡೆದಿದೆ. ಕರಾವಳಿ ಭಾಗದ ಯುವತಿಯೊಬ್ಬರು ಕಠಿಣ ತರಬೇತಿ ಹಾಗೂ ಪರಿಶ್ರಮದ ಮೂಲಕ ಕಮರ್ಷಿಯಲ್ ಪೈಲಟ್ ಆಗಿ ಹೊರಹೊಮ್ಮಿರುವುದು ಜಿಲ್ಲೆಯ ಯುವಜನತೆಗೆ, ವಿಶೇಷವಾಗಿ ವಿಮಾನಯಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿದೆ. ಶೈನಿ ಅವರ ಸಾಧನೆಗೆ ಕುಟುಂಬದವರು, ಸ್ನೇಹಿತರು, ವಿದ್ಯಾಸಂಸ್ಥೆಯ ಹಿತೈಷಿಗಳು ಹಾಗೂ ಕಾರ್ಕಳದ ನಾಗರಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಮುಂದಿನ ವೃತ್ತಿಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.