ಉಡುಪಿ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಅವರನ್ನು ಹುದ್ದೆಯಿಂದ ತೆರವು

Picture of RB NEWS

RB NEWS

Bureau Report

ಉಡುಪಿ: ಉಡುಪಿ ಜಿಲ್ಲಾ ಸರ್ಜನ್ ಆಗಿದ್ದ ಡಾ. ಎಚ್. ಅಶೋಕ್ ಅವರನ್ನು ತಕ್ಷಣದಿಂದ ಜ್ಯಾರಿಗೆ ಬರುವಂತೆ ಜಿಲ್ಲಾ ಸರ್ಜನ್ ಹುದ್ದೆಯಿಂದ ತೆರವುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮುಂದಿನ ಆದೇಶದವರೆಗೆ ಡಾ. ಎಚ್. ಅಶೋಕ್ ಅವರಿಗೆ ಯಾವುದೇ ಸ್ಥಾನ, ಹುದ್ಧೆ ತೋರಿಸದೆ ಕೇಂದ್ರ ಕಚೇರಿಗೆ ಬಂದು ವರದಿ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ನೂತನ ಪ್ರಭಾರ ಜಿಲ್ಲಾ ಸರ್ಜನ್ ರನ್ನಾಗಿ ನೇತ್ರ ತಜ್ಞರಾದ ಡಾ. ನಿತ್ಯಾನಂದ ನಾಯಕ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಡಾ. ಅಶೋಕ್, ದ. ಕ. ಜಿಲ್ಲೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾಗ 2018ರಲ್ಲಿ ಅವರ ವಿರುದ್ಧ  ಇಲಾಖೆಯ ಹಲವು ಮಂದಿ ಮಹಿಳಾ ನೌಕರರಿಗೆ ಲೈಂಗಿಕ‌ ಕಿರುಕುಳ, ಮಾನಸಿಕ ಹಿಂಸೆ ನೀಡಿದ ಹಲವು ದೂರುಗಳು ಇಲಾಖಾಧಿಕಾರಿಗಳಿಗೆ ಸಲ್ಲಿಸಲ್ಪಟ್ಟಿತ್ತು ಮತ್ತು ಡಾ. ಅಶೋಕ್ ಅವರನ್ನು ಅಮಾನತುಮಾಡಲಾಗಿತ್ತು.

ಮಹಿಳಾ ನೌಕರರ ದೂರಿನ ಮೇಲೆ ಆರಂಭದಲ್ಲಿ ಜಿಲ್ಲಾ ಮಟ್ಟದ ಆಂತರಿಕ ದೂರು ಸಮಿತಿಯು ತನಿಖೆ ನಡೆಸಿ ವರದಿ ಸಲ್ಲಿಸಿತ್ತು ಮತ್ತು ಮುಂದುವರಿದು ಜಿಲ್ಲಾ ದಂಡಾಧಿಕಾರಿಗಳು ಸಹ ವಿಚಾರಣಾ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಈ ತನಿಖೆಯಲ್ಲಿ ಡಾ. ಅಶೋಕ್ ಮೇಲಿನ ದೂರುಗಳು ನಿಜವೆಂದು ಸಾಬೀತಾಗಿತ್ತು. ನಂತರ ವಿಚಾರಣಾ ವರದಿಯ ಆಧಾರದಲ್ಲಿ ಡಾ. ಅಶೋಕ್ ಅವರಿಗೆ ದಂಡನೆಯಾಗಿ ಅವರ ವೇತನ ಶ್ರೇಣಿಯನ್ನು ಐದು ವರ್ಷಗಳ ಹಿಂದಿನ ಹಂತಕ್ಕೆ ಇಳಿಸಿ (ವೇತನ ಹಿಂಭಡ್ತಿ) ಸರಕಾರ ಆದೇಶಿಸಿತ್ತು.

ಅಮಾನತುಗೊಂಡ ಕೆಲ ತಿಂಗಳ ನಂತರ ಅಮಾನತು ತೆರವುಗೊಂಡು ಮರು ನಿಯುಕ್ತಿಗೊಂಡ ಡಾ. ಅಶೋಕ್ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಶೇಷ ಆಸಕ್ತಿ ವಹಿಸಿ ನಿಯಮ ವಿರುದ್ಧವಾಗಿ ಅರ್ಹತೆ ಇಲ್ಲದಿದ್ದರೂ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿ ನೇಮಕ ಮಾಡಿದ್ದರು.

ಮುಂದುವರಿದು ಎರಡನೇ ಹಂತವಾಗಿ ರಾಜ್ಯ ಮಟ್ಟದ ಜಾಗೃತ ಕೋಶದ ಅಧಿಕಾರಿಗಳು ಖುದ್ದು ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ಆಗಮಿಸಿ ಸಂತ್ರಸ್ತರ ಹೇಳಿಕೆಗಳನ್ನು ಪಡೆದು ತನಿಖೆ ನಡೆಸಿದ್ದು, ಈ ತನಿಖೆಯಲ್ಲೂ ಡಾ. ಅಶೋಕ್ ಮೇಲಿನ ದೂರುಗಳು ನಿಜವೆಂದು ಸಾಬೀತಾಗಿತ್ತು.

ಆರೋಪಗಳೆಲ್ಲವೂ ಸಾಬೀತಾದ ಹಿನ್ನೆಲೆಯಲ್ಲಿ ಸರಕಾರ ಇಂದು (17/01/2025) ಅನಿವಾರ್ಯವಾಗಿ ಅಶೋಕ್ ಅವರನ್ನು ಜಿಲ್ಲಾ ಸರ್ಜನ್ ಹುದ್ದೆಯಿಂದ ತೆರವುಗೊಳಿಸಿದೆ. ಮುಂದಿನ ಹುದ್ದೆ ತೋರಿಸದೆ ಕೇಂದ್ರ ಕಚೇರಿಗೆ ಬಂದು ವರದಿ‌ಮಾಡುವಂತೆ ಸೂಚಿಸಿದೆ. ಪ್ರಭಾರ ನೂತನ ಜಿಲ್ಲಾ ಸರ್ಜನ್ ರನ್ನಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯ ನೇತ್ರತಜ್ಞರಾದ ಡಾ. ನಿತ್ಯಾನಂದ ನಾಯಕ್ ಅವರನ್ನು ನಿಯುಕ್ತಿಗೊಳಿಸಿ ಆದೇಶಿಸಿದೆ.

ಡಾ.ನಿತ್ಯಾನಂದ ನಾಯಕ್

ಉಡುಪಿ: ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ   ಆರೋಪ ಸಾಬೀತಾಗಿ ದಂಡನೆಗೆ ಗುರಿಯಾದ ಅಧಿಕಾರಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಉನ್ನತ ಹುದ್ದೆಗೆ ಭಡ್ತಿ ನೀಡಿ ಗೌರವಿಸಿದ ನಕಾರಾತ್ಮಕ ಬೆಳವಣಿಗೆ ನಡೆದಿದೆ.

ಪ್ರಸ್ತುತ, ಉಡುಪಿ ಜಿಲ್ಲಾ  ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿರುವ ಡಾ. ಅಶೋಕ ಹೆಚ್. ಇವರೇ, ಮಹಿಳಾ ಸಿಬ್ಬಂದಿಗಳಿಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಿದ ಮತ್ತು ಈ ಸಂಬಂಧ ದಂಡನೆಗೆ ಗುರಿಯಾದ ಅಧಿಕಾರಿಯಾಗಿದ್ದಾರೆ.

2018ರಲ್ಲಿ ಮಂಗಳೂರಿನಲ್ಲಿ ಆರ್ ಸಿ ಹೆಚ್ ಅಧಿಕಾರಿಯಾಗಿದ್ದಾಗ ಡಾ. ಅಶೋಕ ಹೆಚ್. ಇವರು ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ಸಲ್ಲಿಸಲ್ಪಟ್ಟಿತ್ತು.

ದೂರಿನ ಬಗ್ಗೆ, ಕೆಲಸದ ಸ್ಥಳದಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013″ರಡಿಯಲ್ಲಿ ರಚನೆಯಾದ ದ. ಕ. ಜಿಲ್ಲಾ ಮಟ್ಟದ ಆಂತರಿಕ ದೂರು ಸಮಿತಿಯು ಸಂತ್ರಸ್ತ ಮಹಿಳಾ ಉದ್ಯೋಗಿಗಳ ವಿಚಾರಣೆ ನಡೆಸಿತ್ತು. ಡಾ. ಅಶೋಕ ಹೆಚ್. ಇವರ ಮೇಲೆ ಮಹಿಳಾ ಉದ್ಯೋಗಿಗಳು ಮಾಡಿದ ಆರೋಪಗಳು ನೈಜವಾದುದೆಂದು ಆಂತರಿಕ ದೂರು ಸಮಿತುಯ ಅಧ್ಯಕ್ಷರು ಮತ್ತು ಸದಸ್ಯರು ನಡೆಸಿದ ವಿಚಾರಣೆಯಲ್ಲಿ ಸಾಬೀತಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು ಕೂಡಾ, ಈ ವಿಚಾರಣಾ ವರದಿಯನ್ನು ಮಾನ್ಯ ಮಾಡಿ ವರದಿಯೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಆಂತರಿಕ ದೂರು ಸಮಿತಿ ಮತ್ತು ಜಿಲ್ಲಾ ದಂಡಾಧಿಕಾರಿಗಳ ವಿಚಾರಣಾ ವರದಿಯ ಮೇಲೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957ರ ನಿಯಮ 14 (ಬಿ) ಪ್ರಕಾರ ಆರೋಪಿ ಅಧಿಕಾರಿ ಡಾ. ಅಶೋಕ ಹೆಚ್. ಇವರ ಮೇಲಿನ ಆರೋಪಗಳು ಸಾಬೀತಾಗಿರುವುದರಿಂದ ಸರಕಾರ 2023ರ ಫೆಬ್ರವರಿ ಮೂರರಂದು ಅಧಿಕಾರಿಗೆ ದಂಡನೆ ವಿಧಿಸಿದೆ.

2018ರಿಂದಲೇ ಜ್ಯಾರಿಗೆ ಬರುವಂತೆ ಅಧಿಕಾರಿಯ ಕಾಲಿಕ ವೇತನ ಶ್ರೇಣಿಯನ್ನು (ಇಂಕ್ರಿಮೆಂಟ್) ಸಂಚಿತ ಪರಿಣಾಮವಿಲ್ಲದೆಯೇ ಐದು ವರ್ಷಗಳ ಕೆಳಗಿನ ಹಂತಕ್ಕೆ ಇಳಿಸಿ ಆದೇಶಿಸಿದೆ.

ಕೆಲಸದ ಸ್ಥಳದಲ್ಲಿ ಅಧಿಕಾರಿಯೊಬ್ಬರು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿರುವುದು ಒಂದು ಗಂಭೀರ ಲೈಂಗಿಕ ದೌರ್ಜನ್ಯದ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ಆಂತರಿಕ ದೂರು ಸಮಿತಿಯು ನಡೆಸಿದ ವಿಚಾರಣೆಯಲ್ಲಿ ಆರೋಪ ದೃಢಗೊಂಡು, ಜಿಲ್ಲಾ ದಂಡಾಧಿಕಾರಿಗಳು ಕೂಡಾ ವಿಚಾರಣಾ ವರದಿಯನ್ನು ಮಾನ್ಯ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸರಕಾರ ಅಧಿಕಾರಿಗೆ ದಂಡನೆ ವಿಧಿಸಿದ ಒಂದೇ ತಿಂಗಳ ಅಂತರದಲ್ಲಿ ಸರಕಾರವೇ ದಂಡನೆಗೆ ಒಳಗಾದ ಅಧಿಕಾರಿಗೆ ಉನ್ನತ ಹುದ್ದೆಗೆ ನೇಮಕ‌ ಮಾಡಿ ಆದೇಶಿರುವುದು ನಡೆದಿದೆ.

ದಂಡನೆಗೆ ಒಳಗಾದ ಅಧಿಕಾರಿ ಡಾ. ಅಶೋಕ ಹೆಚ್. ಇವರು ಎನ್ ಎಂ ಸಿ ಇಲ್ಲವೇ ಎಂ ಸಿ ಐ ಯಿಂದ ಮಾನ್ಯತೆ ಪಡೆದ ಕ್ಲಿನಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಪಿಜಿ) ಮಾಡಿದವರಲ್ಲ. ಈ ಕಾರಣಕ್ಕೆ ಉನ್ನತ ಹುದ್ದೆಗೇರುವ ಯಾವ ಅವಕಾಶವೂ ನಿಯಮಾವಳಿಗಳ ಪ್ರಕಾರ ಇವರಿಗೆ ಇಲ್ಲ. ಆದರೂ ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿಶೇಷ ಆಸಕ್ತಿ ವಹಿಸಿ ನೇರವಾಗಿ ಮುಖ್ಯಮಂತ್ರಿಗಳ ಸಿದ್ಧರಾಮಯ್ಯನವರೇ  ಡಾ. ಅಶೋಕ ಅವರನ್ನು ಜಿಲ್ಲಾ ಸರ್ಜನ್ ಆಗಿ ಭಡ್ತಿ ನೀಡುವ ಆದೇಶ ಹೊರಡಿಸುವಂತೆ ಮಾಡಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗಾಗಲಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕಾಗಲೀ ತಾರದೆ ಡಾ. ಅಶೋಕ್ ಅವರಿಗೆ ಜಿಲ್ಲಾ ಸರ್ಜನ್ ಆಗಿ ಭಡ್ತಿ ನೀಡಿರುವುದು ಕೆಲವೊಂದು ಸಂಶಯಗಳಿಗೂ ಕಾರಣವಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top