ಉಡುಪಿ ಜಿಲ್ಲಾಧ್ಯಕ್ಷನಿಗೆ ಸಡ್ಡುಹೊಡೆದ ಉಚ್ಚಾಟಿತ ನಾಯಕ: 6ಮಂದಿ ಗ್ರಾ.ಪಂ.ಸದಸ್ಯರು ರಾಜೀನಾಮೆ !

Picture of RB NEWS

RB NEWS

Bureau Report

ಕಾರ್ಕಳ : ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ನಡೆಸಿದ ಬೆಳವಣಿಗೆಯಿಂದ ಅಕ್ರೋಶಗೊಂಡ ಇರ್ವತ್ತೂರು ಗ್ರಾಮ ಪಂಚಾಯತ್ ನ 6 ಮಂದಿ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಉಚ್ಚಾಟನೆ….

ಕೆಎಂಎಫ್ ನಿರ್ದೇಶಕರ ಚುನಾವಣೆಯಲ್ಲಿ ಸಹಕಾರಿ ಧುರೀಣ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರ ಬಣದಿಂದ ಚುನಾವಣಾ ಕಣಕ್ಕೆ ಸ್ವರ್ಧಿಸಿದ ಹಿನ್ನಲ್ಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಅವರನ್ನು ಉಡುಪಿ ಜಿಲ್ಲಾ ಬಿಜೆಪಿ ಘಟಕವು ಆರು ವರ್ಷಗಳ ಕಾಲ ಉಚ್ಚಾಟಿತಕ್ಕೊಳಗಾಗಿದ್ದರು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧವಾಗಿ ಪ್ರತಿಸ್ಪರ್ಧಿ ಯಾಗಿರುವ ಡಾ. ಎಂ.ಎನ್.ರಾಜೇಂದ್ರ ಕುಮಾರ್ ತಂಡದೊಂದಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಗುರುತಿಸಿಕೊಂಡಿದ್ದರು.
ಕಳೆದ ಸಾಲಿನಲ್ಲಿ ಬಿಜೆಪಿ ಬೆಂಬಲಿತ

ಸದಸ್ಯರುಗಳು ಸಹಕಾರಿ ಧುರೀಣ ಡಾ. ಎನ್.ಎಂ.ರಾಜೇಂದ್ರ ಕುಮಾರ್ ಬಣದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಕೆ ಎಂ ಎಫ್ ನಿರ್ದೇಶಕರ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆ ಸಂದರ್ಭದಲ್ಲಿ ಬಿಜೆಪಿಯ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಅವರು ಚುನಾವಣಾ ಸ್ವರ್ಥಿ ಅಕಾಂಕ್ಷಿಯಾಗಿದ್ದರೂ, ಪಕ್ಷದ ನಿರ್ದೇಶನದಂತೆ ಸ್ವರ್ಧಾ ಕಣಕ್ಕೆ ಇಳಿಯದೇ ಇತರರಿಗೆ ಅವಕಾಶ ನೀಡಿದ್ದರು.
ಅದಕ್ಕೂ ಒಂದು ಕಾರಣ ಇತ್ತು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲದೊಂದಿಗೆ ಸ್ವರ್ಧಿಸಲು ಅವಕಾಶ ನೀಡುವುದಾಗಿ ಅಲಿಖಿತ ಒಡಂಬಡಿಕೆ ನಡೆದಿತ್ತಂತೆ. ಅದರನ್ವಯ ಇರ್ವತ್ತೂರು ಉದಯ ಎಸ್.ಕೋಟ್ಯಾನ್ ಸಮ್ಮತಿ ಸೂಚಿಸಿದರೆನ್ನಲಾಗಿದೆ.

ಸಹಕಾರಿ ಕ್ಷೇತ್ರದತ್ತ ಒಲವು..

ಭಾಸ್ಕರ್ ಎಸ್.ಕೋಟ್ಯಾನ್

ಇರ್ವತ್ತೂರು ಉದಯ ಎಸ್ ಕೋಟ್ಯಾನ್ ಇವರು ಭಾಸ್ಕರ್ ಎಸ್. ಕೋಟ್ಯಾನ್ ಇವರ ಖಾಸ ಸಹೋದರ.
ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕರಾಗಿರುವ ಭಾಸ್ಕರ್ ಎಸ್ ಕೋಟ್ಯಾನ್ ‌ಇವರು ರಾಜಕೀಯವಾಗಿ ಬಿಜೆಪಿಯಲ್ಲಿ ಗುರುತಿಸಿದರೂ, ಸಹಕಾರಿ ಕ್ಷೇತ್ರ‌ದಲ್ಲಿ ಸಹಕಾರಿ ಧುರೀಣ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರೊಂದಿಗೆ ಗುರುತಿಸಿಕೊಂಡವರು.

2004ರ ವಿಧಾನಸಭಾ ಚುನಾವಣೆಯಲ್ಲಿ ಭಾಸ್ಕರ್. ಎಸ್. ಕೋಟ್ಯಾನ್ ಮತ್ತು ಅವರ ಸಹೋದರರಾದ ಅಶೋಕ್. ಎಸ್ ಕೋಟ್ಯಾನ್ ಹಾಗೂ ಉದಯ ಎಸ್.ಕೋಟ್ಯಾನ್ ಅವರು ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಪರ ಚುನಾವಣಾ ಪ್ರಚಾರ ನಡೆಸಿ, ಕಾರ್ಕಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿಯೇ ಸಿದ್ಧ ಎಂದು ಬಹಿರಂಗ ಸಭೆಗಳಲ್ಲಿ ಪಣತೊಟ್ಟಿದ್ದರು. ಅಹೋರಾತ್ರಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದರು.

ಸಡ್ಡು ಹೊಡೆದ ಸಹೋದರರು

ಕೆಎಂಎಫ್ ನಿರ್ದೇಶಕರ ಚುನಾವಣೆಯಲ್ಲಿ ಡಾ. ಎನ್.ಎಂ.ರಾಜೇಂದ್ರ ಕುಮಾರ್ ಬಣದೊಂದಿಗೆ ಸ್ವರ್ಧಾ ಕಣಕ್ಕೆ ಇಳಿದಿದ್ದ ಬಿಜೆಪಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಇರ್ವತ್ತೂರು ಉದಯ ಎಸ್.ಕೋಟ್ಯಾನ್ ಅವರನ್ನು ಬಿಜೆಪಿ ಉಡುಪಿ ಘಟಕವು 6 ವರ್ಷಗಳ ಕಾಲ ಉಚ್ಚಾಟಿಸಿತು.
ಇದು ಸಹಕಾರಿ ಧುರೀಣರಾಗಿರುವ ಭಾಸ್ಕರ್ ಎಸ್.ಕೋಟ್ಯಾನ್ ಅವರ ಕೆಂಗಣ್ಣಿಗೂ ಗುರಿಯಾಗಿತ್ತು.
ಚುನಾವಣೆಯಲ್ಲಿ ಉದಯ ಎಸ್.ಕೋಟ್ಯಾನ್ ಗೆಲುವು ಸಾಧಿಸಿದ್ದರು. ಮಾತ್ರವಲ್ಲದೇ ಬಿಜೆಪಿಯ ಕೋಟೆಯಾಗಿದ್ದ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೂನ್ಯ ಖಾತೆ ತೆರೆದಿತ್ತು. ಆ ಮೂಲಕ ಬಿಜೆಪಿ ಘಟಾನುಘಟಿ ಮುಖಂಡರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ಜಿಲ್ಲಾ ಬಿಜೆಪಿ ಕ್ರಮಕ್ಕೆ ಸಡ್ಡು ಹೊಡೆದಿರುವ ಸಹೋದರರು ಇದೀಗ ತಮ್ಮ ಗ್ರಾಮದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಪರಿಣಾಮವಾಗಿ ಈಗಾಗಲೇ ಬಿಜೆಪಿ ಬೆಂಬಲಿತ 6 ಮಂದಿ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯ ಮೇಲೂ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top