ಉಡುಪಿ ಅಂಬಲಪಾಡಿ ಮನೆ ಕಳವು ಪ್ರಕರಣ: ಉತ್ತರ ಪ್ರದೇಶದ ಕುಖ್ಯಾತ ‘ಬೆಡಿಯಾ ಗ್ಯಾಂಗ್’ನ ಇಬ್ಬರು ಕಳ್ಳರು ಅರೆಸ್ಟ್

Picture of RB NEWS

RB NEWS

Bureau Report

ಜುಲೈ 1 ರಿಂದ ಜುಲೈ 9 ರ ಮಧ್ಯಾವಧಿಯಲ್ಲಿ ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆಯ ಸಹಾರಾ ಅಪಾರ್ಟ್‌ಮೆಂಟ್ ಬಳಿಯ ಎ.ಎಸ್. ರಾಮಮೂರ್ತಿ ಎಂಬವರ ಮನೆಗೆ ನುಗ್ಗಿದ್ದ ಕಳ್ಳರು, ಕಪಾಟಿನಲ್ಲಿದ್ದ ₹6 ಲಕ್ಷ ನಗದು ಹಾಗೂ ₹10,000 ಮೌಲ್ಯದ 3 ವಾಚ್‌ಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಉಡುಪಿ ನಗರ ಪೊಲೀಸರು ಸೆಪ್ಟೆಂಬರ್ 2 ರಂದು ಕಳ್ಳತನದ ಪ್ರಮುಖ ಆರೋಪಿ ಮೊಹಮ್ಮದ್ ಜಾಫರ್‌ನನ್ನು ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದರು. ವಿಚಾರಣೆ ವೇಳೆ, ತಾನು ಮತ್ತು ಸ್ನೇಹಿತ ಕದೀರ್ ಸೇರಿ ಕಳವು ನಡೆಸಿರುವುದಾಗಿ ಮತ್ತು ಕದ್ದ ಹಣವನ್ನು ಇಬ್ಬರೂ ಸಮನಾಗಿ ಹಂಚಿಕೊಂಡಿರುವುದಾಗಿ ಒಪ್ಪಿಕೊಂಡಿದ್ದನು.

ಆತನಿಂದ ತಕ್ಷಣವೇ ₹1.5 ಲಕ್ಷ ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡ ಪೊಲೀಸರು, ಬಳಿಕ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಉತ್ತರ ಪ್ರದೇಶಕ್ಕೆ ಕರೆದೊಯ್ದು ಅಲ್ಲಿಂದ ಹೆಚ್ಚುವರಿಯಾಗಿ ₹1.06 ಲಕ್ಷ ನಗದು ವಶಪಡಿಸಿಕೊಂಡಿದ್ದರು. ತನಿಖೆ ಮುಂದುವರಿಸಿದ ಪೊಲೀಸರು ಸೆಪ್ಟೆಂಬರ್ 25 ರಂದು ಪ್ರಕರಣದ ಮತ್ತೊಬ್ಬ ಆರೋಪಿ ಕದೀರ್‌ನನ್ನು ಮೂಡಬಿದ್ರೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಬಳಿಯಿದ್ದ ₹1,65,000 ನಗದು, 2 ಬೆಳ್ಳಿ ನಾಣ್ಯಗಳು, 5 ವಾಚ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಸ್ಕ್ರೂಡ್ರೈವರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಉತ್ತರ ಪ್ರದೇಶದ ಕುಖ್ಯಾತ ‘ಬೆಡಿಯಾ ಗ್ಯಾಂಗ್’ ನಾಯಕರಾಗಿದ್ದು, ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯ ಎಸಗಿದ್ದಾರೆ:

ಮೊಹಮ್ಮದ್ ಜಾಫರ್: ಈತನ ವಿರುದ್ಧ ಉತ್ತರಾಖಂಡದ ನೈನಿತಾಲ್ ಪೊಲೀಸ್ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ ದಾಖಲಾಗಿದೆ.

ಕದೀರ್: ಈತನ ವಿರುದ್ಧ ಉತ್ತರ ಪ್ರದೇಶದ ಬನಿಯಾಟೇರ್ ಮತ್ತು ಮುರದಾಬಾದ್ ಸಿವಿಲ್ ಲೈನ್ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಮನೆ ಕಳ್ಳತನ ಸೇರಿದಂತೆ ಒಟ್ಟು 6 ಗಂಭೀರ ಪ್ರಕರಣಗಳು ದಾಖಲಾಗಿವೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ, ಹೆಚ್ಚುವರಿ ಎಎಸ್ಪಿ ಸುಧಾಕರ್ ನಾಯ್ಕ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ (PI) ಮಹೇಶ ಪ್ರಸಾದ್ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ತನಿಖಾ ತಂಡದಲ್ಲಿ ಪಿಎಸ್ಐ ರತ್ನಾಕರ್ ಕೆ., ಎಎಸ್ಐ ಹರೀಶ್ ಹಾಗೂ ಸಿಬ್ಬಂದಿ ಪ್ರಸನ್ನ ಸಿ., ಜೀವನ್ ಕುಮಾರ್, ಆನಂದ ಗಾಣಿಗ, ಆನಂದ, ಓಬಳೇಶ್, ಆನಂದಯ್ಯ ಹಾಗೂ ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top