
ಇಸ್ಮಾಯಿಲ್ ಹತ್ಯೆಗೆ ಉಪಯೋಗಿಸಿದ್ದ ಜೀಪು ಪತ್ತೆ
ಭಾಗ-9
ಕಲ್ಲಡ್ಕ ಇಸ್ಮಾಯಿಲ್ ಹತ್ಯಾ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಜೀಪು. ಇದರ ಮಾಲೀಕ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ನೆರಿಯಾದ ರಾಜಗೋಪಾಲ್ ಹೆಬ್ಬಾರ್. ನೆರಿಯಾ ಎಸ್ಟೇಟ್ ಅಂದರೆ ಸುಮಾರು 20 ಸಾವಿರ ಎಕ್ರೆ ಭೂಪ್ರದೇಶ ಒಳಗೊಂಡಿದೆ. ರಾಜಗೋಪಾಲ್ ಹೆಬ್ಬಾರ್ ಅವರ ಹಿರಿಯರ ಕಾಲದಿಂದಲೂ ಅಷ್ಟು ವಿಶಾಲವಾದ ಭೂ ಪ್ರದೇಶ ಹೆಬ್ಬಾರ್ ಕುಟುಂಬದ ಸ್ವಾಧೀನದಲ್ಲಿದೆ. ಪಶ್ಚಿಮ ಘಟ್ಟದ ಬಹುತೇಕ ಭೂಪ್ರದೇಶಗಳು ಈ ಎಸ್ಟೇಟ್ನೊಳಗೆ ಇದೆ. ಅಡಿಕೆ, ರಬ್ಬರ್, ತೆಂಗು ಮತ್ತು ಭತ್ತದ ಬೆಳೆ ಪ್ರಮುಖವಾದದ್ದು. ಈ ಎಸ್ಟೇಟ್ನಲ್ಲಿ ನೂರಾರು ಕುಟುಂಬಗಳು ಹಿಂದೆ ಗೇಣಿಯಾಧಾರದಲ್ಲಿ ಕೃಷಿ ಕಾರ್ಯ ಮಾಡುತ್ತಿದ್ದರೆ, ಪ್ರಸ್ತುತ ಭೂ ಸುಧಾರಣಾ ಕಾಯ್ದೆಯಡಿ ಸ್ವಂತ ಜಮೀನು ಹೊಂದಿದ್ದಾರೆ. ಆದರೂ ಹೆಬ್ಬಾರ್ ಕುಟುಂಬದ ಸುಪರ್ದಿಯಲ್ಲಿ 20 ಸಾವಿರಕ್ಕಿಂತಲೂ ಹೆಚ್ಚು ಎಕ್ರೆ ಭೂಪ್ರದೇಶ ಇದೆ. ಇಂತಹ ಜಮೀನ್ದಾರಿ ಹಿನ್ನೆಲೆಯ ರಾಜಗೋಪಾಲ್ ಅವರು ಈ ಹತ್ಯಾ ಪ್ರಕರಣದ 13ನೇ ಸಾಕ್ಷಿ. ಯಾಕೆಂದರೆ ಇವರ ಜೀಪಿನಲ್ಲಿಯೇ ಇಸ್ಮಾಯಿಲ್ ಅವರನ್ನು ಕಲ್ಲಡ್ಕದ ಅವರ ಅಂಗಡಿಯಿAದಲೇ ಕರೆದೊಯ್ಯಲಾಗಿತ್ತು. ಈ ಜೀಪನ್ನು ಹೆಬ್ಬಾರ್ ಅವರ ಮನೆಯಂಗಳದಿoದಲೇ ಸಿಓಡಿ ಪೊಲೀಸರು ಸಾಕ್ಷಿಗಳ ಸಮ್ಮುಖದಲ್ಲಿ ಸ್ವಾಧೀನಪಡಿಸಿಕೊಂಡಿದ್ದರು. ಹೆಬ್ಬಾರ್ ಅವರಿಗೆ ತನ್ನ ಜೀಪಿನಲ್ಲಿ ಇಸ್ಮಾಯಿಲ್ ಅವರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂದು ಕಿಂಚಿತ್ತೂ ಸುಳಿವು ಇರಲಿಲ್ಲ. ಅವರನ್ನು ನಂಬಿಕೆಯ ಆಧಾರದಲ್ಲಿ ಕತ್ತಲಲ್ಲಿ ಇಟ್ಟು ಜೀಪನ್ನು ಕೊಂಡೊಯ್ದು ಇಸ್ಮಾಯಿಲ್ ಹತ್ಯೆಗೆ ಉಪಯೋಗಿಸಲಾಗಿತ್ತು.
ಇಸ್ಮಾಯಿಲ್ ಹತ್ಯಾ ಪ್ರಕರಣದ ಆರೋಪಿಗಳು ಸಿಓಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ನಂತರ ಜೀಪಿನ ಹಿನ್ನೆಲೆ ಬಯಲಾಗಿತ್ತು. ಆದ್ದರಿಂದ ಈ ಪ್ರಕರಣದಲ್ಲಿ ಹೆಬ್ಬಾರ್ ಅವರ ಸಾಕ್ಷಿ ಪ್ರಾಸಿಕ್ಯೂಷನ್ಗೆ ಪ್ರಮುಖವಾಗಿತ್ತು. ನ್ಯಾಯಾಲಯದಲ್ಲಿ ಹೆಬ್ಬಾರ್ ಅವರು ನೀಡಿದಂತಹ ಹೇಳಿಕೆ ಈ ರೀತಿ ಇತ್ತು.
ನಾನು ಮತ್ತು 2ನೇ ಆರೋಪಿ ಪುರಂದರ ಭಟ್ಟರು 5ನೇ ಮತ್ತು 6ನೇ ಫಾರ್ಮುಗಳಲ್ಲಿ ಜೊತೆಯಾಗಿ ಮಂಗಳೂರಿನ ಅಲೋಶಿಯಸ್ ಕಾಲೇಜು ಹೈಸ್ಕೂಲಿನಲ್ಲಿ ಕಲಿತಿದ್ದೆವು. ನಾನು ಮತ್ತು 2ನೇ ಆರೋಪಿ ಪುರಂದರ ಭಟ್ಟರು ಸ್ನೇಹಿತರು. ಪುರಂದರ ಭಟ್ಟರು ಆಗಾಗ್ಗೆ ನನ್ನ ಮನೆಗೆ ಬರುತ್ತಿದ್ದರು. ನಾನು ಮಂಗಳೂರಿಗೆ ಹೋಗುವಾಗ ಕೆಲವು ಬಾರಿ ಅವರಿಗೆ ಕಾಣ ಸಿಗುತ್ತಿದ್ದೆ’ ಅಂದರು. ತಾ. 4-9-76ರಂದು ಸಂಜೆ ಸುಮಾರು 5.30 ಗಂಟೆಗೆ ಪುರಂದರ ಭಟ್ಟರು ನೆÀರಿಯಾದಲ್ಲಿರುವ ನಮ್ಮ ಮನೆಗೆ ಅವರ ಮೋಟಾರು ಸೈಕಲಿನಲ್ಲಿ ಬಂದರು. ಸುಮಾರು ಸಂಜೆ 7 ಗಂಟೆ ತನಕ ಮಾತನಾಡಿ ಕುಳಿತರು. ಮತ್ತೆ ಅವರು ತನ್ನ ಮನೆಗೆ ಹೋಗಲು ಮೋಟಾರು ಸೈಕಲ್ ಸ್ಟಾರ್ಟ್ ಮಾಡಿ ಲೈಟಿನ ಸ್ವಿಚ್ ಹಾಕಿದಾಗ ಲೈಟ್ ಆಗುವುದಿಲ್ಲ ಎಂದು ಹೇಳಿ ಲೈಟಿನ ಬಲ್ಬನ್ನು ಹೊರತೆಗೆದು ನೋಡಿದರು. ಲೈಟಿನ ಬಲ್ಬಿನ ಫ್ಯೂಸ್ ಹೋಗಿತ್ತು. ತನಗೆ ಅರ್ಜೆಂಟಾಗಿ ಮನೆಗೆ ಹೋಗಬೇಕೆಂದೂ, ತನ್ನ ಮಗುವಿಗೆ ಸೌಖ್ಯವಿಲ್ಲವೆಂದೂ ತನ್ನ ಹೆಂಡತಿ ಒಬ್ಬಳೆ ಮನೆಯಲ್ಲಿದ್ದಾಳೆ. ಆದುದರಿಂದ ತಾನು ಜೀಪಿನಲ್ಲಿ ಬೆಳ್ತಂಗಡಿಗೆ ಹೋಗಿ ಬಲ್ಬನ್ನು ತಂದು ಆಮೇಲೆ ಮನೆಗೆ ಹೋಗುವುದಾಗಿಯೂ ಪುರಂದರ ಭಟ್ಟರು ಹೇಳಿದರು’ ಎಂದು ಹೆಬ್ಬಾರ್ ವಿವರಿಸಿದರು.ಆಗ ತಾನು ತನ್ನ ಚಾಲಕ ನಾರಾಯಣನನ್ನು ಕರೆದೆ. ನಾರಾಯಣ ಇರಲಿಲ್ಲ. ಆಗ ಪುರಂದರ ಭಟ್ಟರು ತಾನೇ ಚಾಲನೆ ಮಾಡಿಕೊಂಡು ಹೋಗುವುದಾಗಿ ಹೇಳಿ ಮೋಟಾರು ಸೈಕಲ್, ಹೆಲ್ಮೆಟ್ ಮತ್ತು ಕೆರ್ಕಿನ್ ನನ್ನ ಮನೆಯಲ್ಲಿ ಬಿಟ್ಟು ಅವರು ಜೀಪು ಡ್ರೆöÊವ್ ಮಾಡಿಕೊಂಡು ಹೋದರು. ರಾತ್ರಿ 10-30ರವರೆಗೆ ಅವರು ಮರಳಿ ಬರಲಿಲ್ಲ. ನಾನು ಟಿಫಿನ್ ತೆಗೆದುಕೊಂಡು ಒಳಗಡೆ ಮಲಗಿಕೊಂಡೆ. ಹೊರಗೆ ಚಾವಡಿಯಲ್ಲಿ ಚಂದ್ರಶೇಖರ ಭಟ್, ಜಯರಾಜ ಭಟ್ ಮತ್ತು ಶಂಕರ ನಾರಾಯಣ ಎಂಬವರು ಮಲಗಿಕೊಂಡಿದ್ದರು’ ಎಂದು ಹೆಬ್ಬಾರ್ ವಿವರಿಸಿದರು. ಮರುದಿನ ಬೆಳಿಗ್ಗೆ 7 ಗಂಟೆ ಸಮಯ ನಾನು ಹೊರಗೆ ಬಂದಾಗ ಜೀಪು ಪೊರ್ಟಿಕೋದ ಹತ್ತಿರ ನಿಂತಿದ್ದನ್ನು ನೋಡಿದೆ. ಜೀಪನ್ನು ರಾತ್ರಿ 1.30 ಅಥವಾ 2 ಗಂಟೆ ಸಮಯಕ್ಕೆ ಪುರಂದರ ಭಟ್ಟರು ತಂದರೆAದೂ ಅವರೊಂದಿಗೆ ಒಂದನೆ ಆರೋಪಿ ಶ್ರೀಧರ ಭಟ್ಟರು ಇದ್ದರೆಂದೂ ಆಮೇಲೆ ಮೋಟಾರ್ ಸೈಕಲಿನಲ್ಲಿ ಅವರಿಬ್ಬರೂ ಹೆಲ್ಮೆಟ್ ಹಾಗೂ ಕೆರ್ಕಿನ್ ತೆಗೆದುಕೊಂಡು ಹೋದರೆಂದೂ ಚಂದ್ರಶೇಖರ ಭಟ್ ತನಗೆ ಹೇಳಿದರು. ಆಮೇಲೆ ಮಾರನೆ ದಿನ ನಾನು ಪುತ್ತೂರಿಗೆ ಹೋದೆ. ಬಳಿಕ ಮರಳಿ ನೆರಿಯಕ್ಕೆ ಹೋಗಿ 6ನೇ ತಾರೀಕಿನ ದಿನ ಉಪಾ ಕರ್ಮ ಮುಗಿಸಿ ಮಂಗಳೂರಿಗೆ ಬಂದು ಸಾಯಂಕಾಲದ ಹೊತ್ತಿಗೆ ಪುತ್ತೂರಿಗೆ ಹೋಗುತ್ತಿದ್ದಾಗ ಕಲ್ಲಡ್ಕದಲ್ಲಿ ಜನರು ಹಾಗೂ ಪೊಲೀಸ್ ಜೀಪುಗಳು ನಿಂತಿದ್ದನ್ನು ಕಂಡೆ’ ಎಂದರು.
ಪುತ್ತೂರಿನಲ್ಲಿ ಮಾಜಿ ತಾಲೂಕು ಬೋರ್ಡ್ ಅಧ್ಯಕ್ಷ ಸಂಕಪ್ಪ ರೈಯವರನ್ನು ಕಂಡಾಗ ಅವರು ಕಲ್ಲಡ್ಕದ ಒಬ್ಬ ಕಾಂಗ್ರೆಸ್ ಕಾರ್ಯಕರ್ತನನ್ನು ಅಪಹರಣ ನಡೆಸಿರುವ ವಿಚಾರ ತಿಳಿಸಿದರು. ಆಮೇಲೆ ತಾನು ಮರಳಿ ಮಂಗಳೂರಿಗೆ ಹೋದೆ.’ ತಾ 14-2-77ರಂದು ಸಿಓಡಿ ಪೊಲೀಸರು, ಒಂದನೆ ಆರೋಪಿ ಶ್ರೀಧರ ಭಟ್ಟರು ಮತ್ತಿತರರು ನನ್ನ ಮನೆಗೆ ಬಂದರು. ಒಂದನೆ ಆರೋಪಿ ಶ್ರೀಧರ ಭಟ್ಟರು ನನ್ನ ಜೀಪನ್ನು ತೋರಿಸಿಕೊಟ್ಟರು. ಪೊಲೀಸರು ನನ್ನ ಜೀಪನ್ನು ಅವರ ಸ್ವಾಧೀನಕ್ಕೆ ತೆಗೆದುಕೊಂಡರು’ ಎಂದು ಹೆಬ್ಬಾರ್ ವಿವರಿಸಿಸದರು.
ನಂತರ ಹೆಬ್ಬಾರ್ ಆರೋಪಿ ಪರ ವಕೀಲರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾಂಗ್ರೆಸಿಗರು ಮತ್ತು ಪೊಲೀಸರು ನಿಮ್ಮ ಸ್ನೇಹಿತರಾಗಿರುವುದರಿಂದ ನೀವು ಹೇಳಿದುದೆಲ್ಲವು ಸುಳ್ಳು’ ಎಂದು ವಕೀಲರು ಹೇಳಿದುದನ್ನು ಹೆಬ್ಬಾರರು ನಿರಾಕರಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಮಧ್ಯ ಪ್ರವೇಶ ಮಾಡಿದರು. ಇಸ್ಮಾಯಿಲ್ ಅವರನ್ನು ಜೀಪಿನಲ್ಲಿ ಕರೆದುಕೊಂಡು ಹೋದ ರಾತ್ರಿ ಅಂದರೆ 1976 ಸೆ. 4ರಂದು ರಾತ್ರಿ ಪುರಂದರ ಭಟ್ ಮತ್ತು ಶ್ರೀಧರ ಭಟ್ ಅವರು ಜೀಪನ್ನು ತಂದು ತನ್ನ ಮನೆಯ ಪೊರ್ಟಿಕೊದಲ್ಲಿ ಇಟ್ಟರು ಎಂಬುದನ್ನು ಸಿಓಡಿ ಪೊಲೀಸರಲ್ಲಿ ಹೇಳಿಲ್ಲ. ಇದೀಗ ನ್ಯಾಯಾಲಯದಲ್ಲಿ ಈ ವಿಚಾರವನ್ನು ತಿಳಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ಹೆಬ್ಬಾರ್ ಅವರು ಆ ಸಂದರ್ಭದಲ್ಲಿ ಮರೆತುಹೋಗಿತ್ತು. ಈಗ ನೆನಪಾಯಿತು ಎಂದು ಉತ್ತರಿಸಿದರು. ಅದಕ್ಕೆ ನ್ಯಾಯಾಧೀಶರು ಕಾರಣವೇನು ಎಂದು ಕೇಳಿದರು. ಆಗ ಹೆಬ್ಬಾರ್ ಅವರು ಜೀಪನ್ನು ಸಿಓಡಿ ಪೊಲೀಸರು ವಶಪಡಿಸಿಕೊಂಡ ನಂತರ ಚಂದ್ರಶೇಖರ ಭಟ್ ಅವರು ಈ ವಿಚಾರ ಹೇಳಿದರು ಎಂದು ವಿವರಿಸಿದರು. ಆಗ ನ್ಯಾಯಾಧೀಶರು ಹೆಬ್ಬಾರ್ ಅವರಲ್ಲಿ ನಿಮಗೆ ಕಾಂಗ್ರೆಸ್ ಮುಖಂಡ ಸಂಕಪ್ಪ ರೈಯವರು ಸ್ನೇಹಿತರಲ್ಲವೇ ಎಂದು ಪ್ರಶ್ನಿಸಿದಾಗ ಹೆಬ್ಬಾರ್ ಅವರು ಹೌದು ಎಂದು ಹೇಳಿದರು. ಹೆಬ್ಬಾರ್ ಅವರ ಸಾಕ್ಷö್ಯದ ನಂತರ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದವರು ಚಂದ್ರಶೇಖರ ಭಟ್. ಅವರು ಈ ಪ್ರಕರಣದ 14ನೇ ಸಾಕ್ಷಿ. ಚಂದ್ರಶೇಖರ ಭಟ್ ಅವರು ರಾಜಗೋಪಾಲ್ ಹೆಬ್ಬಾರ್ ಅವರ ಮನೆಯಲ್ಲಿ ರಾತ್ರಿ ಸಮಯ ವಾಸಿಸುತ್ತಿದ್ದವರು. ಇಸ್ಮಾಯಿಲ್ ಅವರ ಹತ್ಯೆಗೆ ಉಪಯೋಗಿಸಿದ್ದ ಜೀಪನ್ನು ಪುರಂದರ ಭಟ್ ಮತ್ತು ಶ್ರೀಧರ ಭಟ್ ಅವರು ವಾಪಸ್ ತಂದು ಇಟ್ಟ ಸಂದರ್ಭದಲ್ಲಿ ಮನೆಯಲ್ಲಿ ಇದ್ದವರು. ಅವರಿಗೆ ಪುರಂದರ ಭಟ್ ಅವರು ತನ್ನ ಬೈಕನ್ನು ಇಟ್ಟು ಜೀಪನ್ನು ಕೊಂಡು ಹೋದ ವಿಚಾರ ಗೊತ್ತಿರಲಿಲ್ಲ. ಮಧ್ಯರಾತ್ರಿ ಕಳೆದ ಬಳಿಕ ಜೀಪು ಬಂದ ಶಬ್ದ ಕೇಳಿ ಅವರಿಗೆ ಎಚ್ಚರವಾಗಿತ್ತು. ಅವರಲ್ಲಿ ಜೀಪಿನ ಕೀ ಕೊಟ್ಟು ಪುರಂದರ ಭಟ್ ಅವರು ತನ್ನ ಬೈಕನ್ನು ತೆಗೆದುಕೊಂಡು ಹೋಗಿದ್ದರು. ಆದ್ದರಿಂದ ಆ ಸಾಕ್ಷö್ಯವು ಪ್ರಾಸಿಕ್ಯೂಷನ್ಗೆ ಪ್ರಮುಖವಾಗಿತ್ತು. ಚಂದ್ರಶೇಖರ ಭಟ್ ಅವರು ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ಈ ರೀತಿಯಾಗಿ ದಾಖಲಿಸಿದರು.
ನಾನು 4-9-76ರಂದು ರಾತ್ರಿ 8.30ರ ಹೊತ್ತಿಗೆ ಸೊಸೈಟಿಯಿಂದ ರಾಜಗೋಪಾಲ ಹೆಬ್ಬಾರ್ ಮನೆಗೆ ಬಂದೆ. ನನ್ನ ಜೊತೆ ಜಯರಾಮ ಭಟ್ಟರೂ ಇದ್ದರು. ಮನೆಗೆ ಬರುವಾಗ ಹೆಬ್ಬಾರರ ಜೀಪು ಪೊರ್ಟಿಕೋದಲ್ಲಿ ಇರಲಿಲ್ಲ. ಅಲ್ಲಿ ಮೋಟಾರ್ ಸೈಕಲ್ ಇತ್ತು. ಊಟ ಮಾಡಿ ಚಾವಡಿಯಲ್ಲಿ ಮಲಗಿಕೊಂಡೆ. ರಾತ್ರಿ ಸುಮಾರು 1.30ರ ಹೊತ್ತಿಗೆ ಜೀಪು ಬಂದ ಶಬ್ದ ಕೇಳಿತು. ಎಚ್ಚೆತ್ತು ಹೊರಗೆ ಬಂದು ನೋಡಿದಾಗ ಜೀಪು ಬಂದು ಪೊರ್ಟಿಕೋದಲ್ಲಿ ನಿಂತುದನ್ನು ನೋಡಿದೆ. ಪುರಂದರ ಭಟ್ಟರು ಜೀಪಿನ ಕೀ ಕೊಟ್ಟು ಮೋಟಾರ್ ಸೈಕಲ್ನ ಕೀ, ರೈನ್ ಕೋಟು, ಹೆಲ್ಮೆಟ್ ಎಲ್ಲಿದೆ ಎಂದು ಕೇಳಿದರು. ಆಗ ನಾನು ಶಂಕರ ನಾರಾಯಣ ಭಟ್ಟರನ್ನು ಎಬ್ಬಿಸಿ ಅವೆಲ್ಲ ಎಲ್ಲಿವೆ ಎಂದು ಕೇಳಿದಾಗ ಅವರು ಆಫೀಸ್ ರೂಮಿನಲ್ಲಿದೆ ಎಂದರು. ನಾನು ಆಫೀಸ್ ರೂಮಿನಿಂದ ಅವುಗಳನ್ನು ತೆಗೆದು ಪುರಂದರ ಭಟ್ಟರಿಗೆ ಕೊಟ್ಟೆ. ಪುರಂದರ ಭಟ್ಟರು ಮೋಟಾರ್ ಸೈಕಲಿಗೆ ಸ್ವಿಚ್ ಹಾಕಿ ಸ್ಟಾರ್ಟ್ ಮಾಡಿ ಜತೆಯಲ್ಲಿಯೇ ಇದ್ದ ಅವರ ತಮ್ಮ ಶ್ರೀಧರ ಭಟ್ಟರೊಂದಿಗೆ ಹೊರಟುಹೋದರು. ನಾನು ಈ ವಿಷಯವನ್ನು ಮರುದಿನ ಬೆಳಿಗ್ಗೆ 7 ಗಂಟೆಗೆ ಹೆಬ್ಬಾರ್ ಅವರಿಗೆ ತಿಳಿಸಿದೆ. ಆಗ ಆರೋಪಿ ಪರ ವಕೀಲ ಮರುದಿನ ರಾಜಗೋಪಾಲ ಹೆಬ್ಬಾರ್ಗೆ ಹೇಳಿದ ವಿಚಾರವನ್ನು ನೀವು ಪೊಲೀಸರಿಗೆ ಕೊಟ್ಟ ಹೇಳಿಕೆಯಲ್ಲಿ ಹೇಳಿಲ್ಲ. ಈಗ ಹೇಳುತ್ತಿದ್ದೀರಿ’ ಆಗ ಸಾಕ್ಷಿಆಗ ಮರೆತು ಹೋಗಿತ್ತು’ ಎಂದರು.
ಇದಾದ ಬಳಿಕ 15ನೇ ಸಾಕ್ಷಿ ಎಸ್. ಕೊರ್ನಯ ಎಂಬವರು. ಪ್ರಾಸಿಕ್ಯೂಷನ್ ಪ್ರಕಾರ ಇವರೂ ಸಹ ಪ್ರಮುಖ ಸಾಕ್ಷಿ. ಯಾಕೆಂದರೆ ಪುರಂದರ ಭಟ್ ಅವರು ರಾಜ್ಗೋಪಾಲ ಹೆಬ್ಬಾರ್ ಅವರ ಮನೆಗೆ ಹೋಗಿದ್ದು ಮೋಟಾರ್ ಸೈಕಲಿನಲ್ಲಿ. ಹೆಬ್ಬಾರ್ರೊಂದಿಗೆ ಮಾತನಾಡುತ್ತಾ ಇದ್ದಾಗ ಕತ್ತಲು ಆವರಿಸಿತ್ತು. ಹೊರಡಲು ಅಣಿಯಾಗಿ ಬೈಕ್ ಚಲಾಯಿಸಲು ನೋಡಿದಾಗ ಬೈಕಿನ ಹೆಡ್ಲೈಟ್ ಉರಿಯುತ್ತಿರಲಿಲ್ಲ. ಆದ್ದರಿಂದ ಪುರಂದರ ಭಟ್ ಅವರು ಹೆಬ್ಬಾರ್ ಅವರಲ್ಲಿ ಜೀಪನ್ನು ಕೇಳಿದ್ದರು. ಮನೆಯಲ್ಲಿಯೇ ಉಳಕೊಳ್ಳುವಂತೆ ಹೆಬ್ಬಾರ್ ಅವರು ವಿನಂತಿಸಿದರೂ ಮನೆಯಲ್ಲಿ ಪತ್ನಿ, ಮಕ್ಕಳು ಮಾತ್ರ ಇರುವುದು. ಅಗತ್ಯವಾಗಿ ಮನೆಗೆ ಹೋಗಲೇಬೇಕು ಎಂದು ಹೇಳಿ ಜೀಪನ್ನು ಪಡೆದುಕೊಂಡಿದ್ದರು. ಆದರೆ ಮಧ್ಯರಾತ್ರಿ ಕಳೆದು ಜೀಪನ್ನು ವಾಪಸ್ ತಂದು ಕೊಟ್ಟು ಬೈಕನ್ನು ತೆಗೆದುಕೊಂಡು ಹೋಗಿದ್ದರು. ಆಗ ಬೈಕಿನ ಹೆಡ್ಲೈಟ್ ಸರಿಯಾಗಿತ್ತು. ಪುರಂದರ ಭಟ್ ಮತ್ತು ಶ್ರೀಧರ ಭಟ್ ಅವರು ಜೀಪಿನಲ್ಲಿ ವಾಪಸ್ ಬಂದಾಗ ಬೈಕಿನ ಹೆಡ್ಲೈಟ್ ಬಲ್ಬು ತಂದಿದ್ದರೇ ಎಂಬ ಪ್ರಶ್ನೆ ಮೂಡುತ್ತಿತ್ತು. ಅದಕ್ಕೆ ಬೇಕಾಗಿ ಬೆಳ್ತಂಗಡಿಯ ಅಟೊಮೊಬೈಲ್ ಅಂಗಡಿಗಳಲ್ಲಿ ಈ ಬಗ್ಗೆ ಸಿಓಡಿ ಪೊಲೀಸರು ವಿಚಾರಣೆ ನಡೆಸಿದ್ದರು. ಆ ಪೈಕಿ 15 ನೇ ಸಾಕ್ಷಿ ಎಸ್. ಕೊರ್ನಯ ಎಂಬವರೂ ಒಬ್ಬರು. ಅವರು ನ್ಯಾಯಾಲಯದಲ್ಲಿ ಸಾಕ್ಷö್ಯ ನುಡಿಯುತ್ತಾ ತಾನು ಬೆಳ್ತಂಗಡಿಯಲ್ಲಿ ಅಟೊಮೊಬೈಲ್ ಅಂಗಡಿ ಇಟ್ಟುಕೊಂಡಿರುವುದಾಗಿಯೂ 4-9-76ರಂದು ಯಾರಿಗೂ ತನ್ನ ಅಂಗಡಿಯಲ್ಲಿ ಮೋಟಾರ್ ಸೈಕಲ್ ಬಲ್ಬು ಮಾರಾಟ ಮಾಡಿಲ್ಲ’ ಎಂದು ಹೇಳಿದರು. ಸಿಓಡಿ ಪೊಲೀಸರ ತನಿಖೆಯಲ್ಲಿ ಮುಖ್ಯವಾಗಿ ಸಾಬೀತುಪಡಿಸಬೇಕಿದ್ದದ್ದು ಕೃತ್ಯಕ್ಕೆ ಉಪಯೋಗಿಸಿದ್ದ ಜೀಪು. ಅದು ನೆರಿಯಾ ಹೆಬ್ಬಾರರ ಮನೆಯಲ್ಲಿ ಪತ್ತೆಯಾಗಿತ್ತು. ಇಸ್ಮಾಯಿಲ್ ಅವರು ಶವವಾಗಿ ಪತ್ತೆಯಾದ ನಂತರ ಸಿಓಡಿ ಹಾಗೂ ಸ್ಥಳೀಯ ಪೊಲೀಸರು ಹಲವು ಜೀಪುಗಳನ್ನು ವಶಪಡಿಸಿಕೊಂಡಿದ್ದರು. ಬಂಟ್ವಾಳದ ಗ್ಯಾರೇಜಿನಲ್ಲಿ ನಿಲ್ಲಿಸಿದ್ದ ಜೀಪನ್ನೂ ಪೊಲೀಸರು ಸುಪರ್ದಿಗೆ ತೆಗೆದುಕೊಂಡಿದ್ದರು. ವಿಟ್ಲದ ಜೀಪೂ ಪೊಲೀಸರ ವಶವಾಗಿತ್ತು. ಆ ಸಂದರ್ಭದಲ್ಲಿ ದ.ಕ. ಜಿಲ್ಲೆಯಲ್ಲಿ ಡೀಸೆಲ್ ಇಂಜಿನ್ ಇರುವ ಎಷ್ಟು ಜೀಪುಗಳಿವೆ ಎಂಬುದನ್ನು ಪೊಲೀಸರು ಲೆಕ್ಕ ಹಾಕಿ ಆ ಎಲ್ಲಾ ಜೀಪುಗಳನ್ನು ಪರಿಶೀಲನೆಗೆ ಒಳಪಡಿಸಿದ್ದರು. ಆದರೆ ಅವರ ಲೆಕ್ಕಕ್ಕೆ÷ ಕೃತ್ಯದಲ್ಲಿ ಭಾಗಿಯಾಗಿದ್ದ ನೆರಿಯಾ ಹೆಬ್ಬಾರರ ಜೀಪು ಸಿಕ್ಕಿರಲಿಲ್ಲ. ಆ ಜೀಪಿನ ಬಗ್ಗೆ ಮಾಹಿತಿ ಕೊಟ್ಟದ್ದು ಸ್ವತ: ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಆರೋಪಿಗಳಲ್ಲಿ ಓರ್ವರಾದ ಪುರಂದರ ಭಟ್ ಅವರು. ಆದ್ದರಿಂದ ಅದೇ ಜೀಪು ಇಸ್ಮಾಯಿಲ್ ಹತ್ಯೆಗೆ ಉಪಯೋಗವಾಗಿತ್ತು ಮತ್ತು ಆ ಜೀಪಿನ ನಂಬರ್ ಪ್ಲೇಟನ್ನು ಬದಲಾಯಿಸಲಾಗಿತ್ತು ಎಂಬುದನ್ನು ಸಿಓಡಿ ಪೊಲೀಸರು ನ್ಯಾಯಾಲಯದ ಮುಂದೆ ನಿಸ್ಸಂದೇಹವಾಗಿ ಸಾಬೀತುಪಡಿಸಬೇಕಿತ್ತು. ಅದಕ್ಕಾಗಿ ಅವರು ಸಾಕ್ಷಿಗಳನ್ನು ಸೃಷ್ಟಿ ಮಾಡಬೇಕಿತ್ತು. ಆ ರೀತಿಯಾಗಿ ಸೃಷ್ಟಿಯಾದಂತಹ ಸಾಕ್ಷಿಯೇ 16 ನೇ ಸಾಕ್ಷಿ ನಾರಾಯಣ ಪ್ರಭು. ನಾರಾಯಣ ಪ್ರಭು ಅವರು ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ಈ ರೀತಿಯಾಗಿ ದಾಖಲಿಸಿದ್ದಾರೆ. 19-2-1977ರಂದು ನಾನೂ ಇತರರೂ ಪೊಲೀಸ್ ಅಧಿಕಾರಿಗಳೂ ನಿಡಿಗಲ್ ಸೇತುವೆಯ ಕೆಳಗೆ ಹೊಳೆಯಲ್ಲಿ ನಂಬರ್ ಪ್ಲೇಟು ಹುಡುಕಾಡಿದೆವು. ಆ ದಿನ ಅದು ಸಿಕ್ಕಿಲ್ಲ. ಮರುದಿನ ಮೆಟಲ್ ಡಿಟೆಕ್ಟರ್ ಸಹಾಯದಿಂದ ಹುಡುಕುತ್ತಿದ್ದಾಗ ಮೊದಲು ಸೇತುವೆಯಿಂದ 175 ಅಡಿ ದೂರದಲ್ಲಿ ಮೆಟಲ್ ಡಿಟೆಕ್ಟರ್ ಶಬ್ದ ಮಾಡಿತು. ಹೊಯಿಗೆ ತೆಗೆದು ಅಗೆದಾಗ ಕಬ್ಬಿಣದ ಜಾಲಿಯೊಂದು ಸಿಕ್ಕಿತು. ಮತ್ತೆ ಹುಡುಕಿದಾಗ 25 ಅಡಿ ದೂರದಲ್ಲಿ ಪುನ: ಶಬ್ದ ಮಾಡಿತು. ಅಲ್ಲಿ ಮರಳನ್ನು ಅಗೆದು ನೋಡುವಾಗ ನಂಬರ್ ಪ್ಲೇಟ್ ಸಿಕ್ಕಿತು. ಅದರಲ್ಲಿ ಎರಡು ಬದಿಯಲ್ಲಿ ನಂಬರು ಕಾಣಿಸಿಲ್ಲ. ಒಂದು ಬದಿಗೆ ತುಕ್ಕು ಹಿಡಿದಿತ್ತು ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಆ ಸಂದರ್ಭದಲ್ಲಿ ಆರೋಪಿ ಪರ ವಕೀಲರು ಪಾಟೀ ಸವಾಲು ಹಾಕಿ ನೀವು ಕಾಂಗ್ರೆಸ್ ಕಾರ್ಯಕರ್ತರೇ ಎಂದು ಪ್ರಶ್ನಿಸಿದಾಗ ಸಾಕ್ಷಿ ಹೌದು ಎಂದು ಒಪ್ಪಿಕೊಂಡರು.
ಮುಂದುವರಿಯುವುದು….





































