ಇರುವೈಲು ೭೫ ನೇ ಭಜನಾ ಮಂಗಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ : ದೇವಸ್ಥಾನದ ಶಾಶ್ವತ ಚಪ್ಪರಕ್ಕೆ ಶಾಸಕ ಕೋಟ್ಯಾನ್ ರೂ. ೨೫ ಲಕ್ಷ ಅನುದಾನದ ಭರವಸೆ
ಮೂಡುಬಿದಿರೆ: ೭೫ ನೇ ವರ್ಷದ ಭಜನಾ ಮಂಗಲೋತ್ಸವದ ಸವಿನೆನಪಿಗಾಗಿ ಭಜನಾ ಮಂಡಳಿಯವರು ದೇವಸ್ಥಾನದ ಸುತ್ತಲೂ ಶಾಶ್ವತ ಚಪ್ಪರ ವ್ಯವಸ್ಥೆಯನ್ನು ಮಾಡಲು ಯೋಚನೆಯನ್ನಿಟ್ಟುಕೊಂಡು ತನ್ನ ಬಳಿ ವಿಷಯ ಪ್ರಸ್ತಾಪಿಸಿದ್ದು, ಇದರ ಸಲುವಾಗಿ ಶಾಶ್ವರ ಚಪ್ಪರಕ್ಕೆ ರೂ. 25 ಲಕ್ಷ ಅನುದಾನವನ್ನು ಸರ್ಕಾರದಿಂದ ಅಥವಾ ತನ್ನ ಸ್ವಂತ ಖರ್ಚಿನಲ್ಲಿಯಾದರೂ ಖಂಡಿತವಾಗಿಯೂ ನೀಡುತ್ತೇನೆಂದು ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಭರವಸೆ ನೀಡಿದರು.
ಅವರು ಮಂಗಳವಾರ ಇರುವೈಲು ದಿ. ಸುಲೋಚನ ಐ.ರಾಮ ಆಸ್ರಣ್ಣ ವೇದಿಕೆಯಲ್ಲಿ ನಡೆದ ಇರುವೈಲು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ೭೫ ನೇ ವರ್ಷದ ಭಜನಾ ಮಂಗಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಜನೆಯನ್ನು ಭಕ್ತಿಯಿಂದ ಹೇಗೆ ಹೇಳಿದರೂ ದೇವರಿಗೆ ಸಲ್ಲುತ್ತದೆ. ಭಜನೆಯು ನೇರವಾಗಿ ಭಕ್ತರಿಗೂ ಭಗವಂತನಿಗೂ ಇರುವ ಸಂಪರ್ಕ ಸೇತುವೆ. ಆದ್ದರಿಂದ ಆದಷ್ಟು ಮಕ್ಕಳು ಭಜನೆಯ ಕಡೆಗೆ ಒಲವು ತೋರಬೇಕು. ಭಜನೆಯಿಂದ ಸಂಸ್ಕ್ರತಿ , ಸಂಸ್ಕಾರದ ಬಗ್ಗೆ ಅರಿವಾಗುತ್ತದೆ ಎಂದರು.
ದಿಕ್ಸೂಚಿ ಭಾಷಣಗೈದ ದಾಮೋದರ ಶರ್ಮಾ ದೇವಿಯ ಭಜನೆಯ ಸೇವೆಯನ್ನು ಶ್ರದ್ಧೆಯಿಂದ ಮಾಡುವುದರ ಮೂಲಕ ಭಜನೆಯನ್ನು ಉಸಿರಾಗಿಸಿಕೊಂಡು ಬಂದ ಇರುವೈಲು ಭಜಕರ ಭಕ್ತಿಯ ಭಜನಾ ಕಾರ್ಯಕ್ರಮ ಅಭಿನಂದನಾರ್ಹವಾದದ್ದು ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಭಜನೆಗೆ ಅವಹೇಳನವಾಗಿ ಮಾತನಾಡುವವರು ಅಲ್ಲಾಲ್ಲಿ ಸಿಗುತ್ತಾರೆ. ಅಂತವರಿಗೆ ಹಿಂತಿರುಗಿ ಬೈಯಲು ಹೋಗಬೇಡಿ. ಭಜನೆ ಬಗ್ಗೆ ಕೀಳಾಗಿ ಮಾತನಾಡುವವರಿದ್ದರೆ ಅವರು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪಕರ್ಮಗಳಿಂದ ಮುಕ್ತರಾಗಿ ಮುಂದಿನ ಜನ್ಮದಲ್ಲಿ ಅವರಿಗೂ ಒಳ್ಳೆಯ ಬುದ್ಧಿಯನ್ನು ನೀಡಿ ಅವರೂ ಭಜನೆ ಸೇವೆಗೆ ಕೈ ಜೋಡಿಸುವಂತೆ ಮಾಡು ಎಂದು ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಅವರನ್ನು ಗೌರವಿಸಲಾಯಿತು.
ಹಾಗೂ ಹಿರಿಯ ಭಜಕರು, ಅನ್ನದಾನ ಸೇವಾದಾರರು, ಹಾಗೂ ಭಜನಾ ಸೇವೆಯಲ್ಲಿ ವಿವಿಧ ರೀತಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಭಜಕರನ್ನು, ಭಕ್ತಾದಿಗಳನ್ನು ಗುರುತಿಸಲಾಯಿತು.
ಹಿರಿಯ ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿ, ಗಣೇಶ್ ತಂತ್ರಿ ಹಾಗೂ ದೇವಾಲಯದ ಪ್ರಧಾನ ಅರ್ಚಕ ಐ ರಾಘವೇಂದ್ರ ಆಸ್ರಣ್ಣ ಶುಭ ನುಡಿಗಳಾನ್ನಾಡಿದರು.
ದೇವಸ್ಥಾನದ ಆಡಳಿತಾಧಿಕಾರಿ ಇಂದು ಎಂ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ ಮುಗೇರ, ದೇವಸ್ಥಾನದ ಆಡಳಿತ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಐ ಕುಮಾರ್ ಶೆಟ್ಟಿ , ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಉದ್ಯಮಿ ರಂಜಿತ್ ಪೂಜಾರಿ ಈ ಸಂದರ್ಭದಲ್ಲಿದ್ದರು. ಭಜನಾ ಮಂಡಳಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು.
ಮಾಜಿ ಮೋಕ್ತೆಸರ ಎನ್ ದಿವಾಕರ ಪ್ರಭು ನಡುಬಾಳಿಕೆ ನಿರೂಪಿಸಿ ಧನ್ಯವಾದಗೈದರು.





































