ಇನ್ಸ್ಪೆರ್ ಅವಾರ್ಡ್; ರಾಜ್ಯಮಟ್ಟಕ್ಕೆ ಜಿಲ್ಲೆಯ 13 ವಿದ್ಯಾರ್ಥಿಗಳು ಆಯ್ಕೆ ಕುಕ್ಕುಜೆ ಶಾಲೆಯ ನಾಲ್ವರು ರಾಜ್ಯಮಟ್ಟಕ್ಕೆ
ಕಾರ್ಕಳ : ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ವೈಜ್ಞಾನಿಕ ಪ್ರತಿಭೆಗೆ ವೇದಿಕೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ವಿಜ್ಞಾನ ಮಾದರಿ ತಯಾರಿಕೆಯ ರಾಷ್ಟ್ರಮಟ್ಟದ -ಇನ್ಸ್ಪೆರ್ ಅವಾರ್ಡ್ ಸ್ಪರ್ಧೆಯಲ್ಲಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು ಕುಕ್ಕುಜೆ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಒಂದೇ ಶಾಲೆಯಿಂದ ನಾಲ್ಕು ಮಕ್ಕಳು ರಾಜ್ಯಮಟ್ಟದ ಇನ್ಸ್ಪೆರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿರುವುದು ಗಮನಾರ್ಹ.
ಕುಕ್ಕುಜೆಯ ಶಾಲೆಯ ವಿದ್ಯಾರ್ಥಿಗಳಾದ ಅನಿಶ್ ಪೂಜಾರಿ, ಅಮೂಲ್ಯ ಹೆಗ್ಡೆ, ಶ್ರೇಯಾ ಹಾಗೂ ನಿಕಿತಾ ಸಾಧನೆ ಮಾಡಿರುವ ವಿದ್ಯಾರ್ಥಿಗಳು.
ಏನಿದು ಇನ್ಸ್ಪೆರ್ ಅವಾರ್ಡ್:
ಶಾಲಾ ಮಕ್ಕಳಲ್ಲಿರುವ ವೈಜ್ಞಾನಿಕ ಪ್ರತಿಭೆ, ಸಂಶೋಧನಾ ಮನೋಭಾವ, ನಾವೀನ್ಯ ಚಿಂತನೆಗಳನ್ನು ನಾಗರಿಕ ಸಮಾಜಕ್ಕೆ ಉಪಯುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರತಿವರ್ಷ ದೇಶದಾದ್ಯಂತ ರಾಷ್ಟ್ರಮಟ್ಟದ ಮಾದರಿ ತಯಾರಿಕೆ ಸ್ಪರ್ಧೆ ನಡೆಸುತ್ತದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಶಾಲಾ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನಾವೀನ್ಯಪೂರ್ಣ ವೈಜ್ಞಾನಿಕ ಯೋಚನೆಗಳಿಗೆ ಶಿಕ್ಷಕರ ಮಾರ್ಗದರ್ಶನ ಪಡೆದು, ಸೂಕ್ತ ಯೋಜನೆ ಸಿದ್ದಗೊಳಿಸಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಒಂದು ಶಾಲೆಯಿಂದ ಗರಿಷ್ಠ 5
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಪ್ರತಿ ವಿದ್ಯಾರ್ಥಿಗೆ ಕೇಂದ್ರ ಸಚಿವಾಲಯ ಪ್ರಾಜೆಕ್ಟ್ ತಯಾರಿಕೆಗೆ ತಲಾ ₹10,000 ಆರ್ಥಿಕ ನೆರವು ನೀಡುತ್ತದೆ. ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಅಯ್ಕೆಯಾದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಾರೆ.
ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯ ಅಂತಿಮ ಹಂತದಲ್ಲಿ ದೇಶದಿಂದ 60 ವಿದ್ಯಾರ್ಥಿಗಳ ಮಾದರಿಗಳನ್ನು ಆಯ್ಕೆಮಾಡಲಾಗುತ್ತ ದೆ. 60 ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಆಯ್ದ ವಿದ್ಯಾರ್ಥಿಗಳು ಜಪಾನಿನಲ್ಲಿ ನಡೆಯುವ ಅಂತರರಾಷ್ಟ್ರೀಯ ವಿಜ್ಞಾನ ವಿನಿಮಯ ಮೇಳ ‘ಸುಕುರಾ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುವರ್ಣಾವಕಾಶ ಪಡೆಯುತ್ತಾರೆ.
ಐತಿಹಾಸಿಕ ಸಾಧನೆ: ಇನ್ಸ್ಪೆರ್ ಅವಾರ್ಡ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದು ಕಷ್ಟಕರ. ಆದರೆ ಈ ಬಾರಿ ಉಡುಪಿ ಜಿಲ್ಲಾ ಮಟ್ಟಕ್ಕೆ 133 ವಿದ್ಯಾರ್ಥಿಗಳ ಮಾಡೆಲ್ಗಳು ಆಯ್ಕೆಯಾಗಿದ್ದು, ಅದರಲ್ಲಿ ಜಿಲ್ಲೆಯ 5 ತಾಲ್ಲೂಕುಗಳಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು 13 ವಿದ್ಯಾರ್ಥಿಗಳು ಮಾತ್ರ. ಆಯ್ಕೆಯಾದ 13 ವಿದ್ಯಾರ್ಥಿಗಳಲ್ಲಿ ಕುಕ್ಕುಜೆ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗಿರುವುದು ಸಾಧನೆ ಎನ್ನುತ್ತಾರೆ ಶಿಕ್ಷಕರು.
ವಿಧ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಕುಕ್ಕುಜೆ ಶಾಲೆಯ ಅನಿಶ್ ಪೂಜಾರಿ ‘ಮುಫತ್’ ಎಂಬ ಸರಳ ಕೃಷಿ ಯಂತ್ರದ ಮಾದರಿ ತಯಾರಿಸಿದ್ದು ರೈತನ ಕೆಲಸ ಹಗುರಗೊಳಿಸುತ್ತದೆ. ಅಮೂಲ್ಯ ಹೆಗ್ಡೆ ತಯಾರಿಸಿರುವ ‘ಪ್ಲಡ್ ಡಿಟೆಕ್ಟರ್’ ಜೀವರಕ್ಷಕ ಯಂತ್ರ ನೆರೆ. ಪ್ರವಾಹಗಳಂತ ನೈಸರ್ಗಿಕ ವಿಕೋಪದ ಸಂದರ್ಭ ಎಚ್ಚರಿಕೆ ನೀಡಿ ಪ್ರಾಣ ಹಾನಿ ತಡೆಯುತ್ತದೆ.
ವಿದ್ಯಾರ್ಥಿನಿ ಶ್ರೇಯಾ ಕ್ರಾಪ್ ಸೇವರ್ ಯಂತ್ರ ತಯಾರಿಸಿದ್ದು ಕಾಡು ಪ್ರಾಣಿ, ಕಳ್ಳಕಾಕರಿಂದ ರೈತರ ಬೆಳೆ ರಕ್ಷಣೆಗೆ ಸಹಾಯವಾಗಲಿದೆ. ನಿಕಿತಾ ತಯಾರಿಸಿರುವ ರೊಪೋ ಮೀಟರ್.ಯಂತ್ರ ಹಗ್ಗ, ತಂತಿ, ವೈರ್ ಹಾಗೂ ತೆಳ್ಳಗಿನ ವಸ್ತುಗಳನ್ನು ಅಳೆಯುವುದಕ್ಕೆ ಸಹಕಾರಿಯಾಗಿದೆ.
ವಿದ್ಯಾರ್ಥಿಗಳ ಸಾಧನೆಗೆ ಡಯಟ್ ಪ್ರಾಂಶುಪಾಲ ಗೋವಿಂದ ಮಡಿವಾಳ, ಡಯಟ್ ಉಪಪ್ರಾಂಶುಪಾಲ ಡಾ.ಅಶೋಕ ಕಾಮತ್, ಇನ್ಸ್ಪೆರ್ ಅವಾಡ್ರ್ನ ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಭಟ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಲೋಕೇಶ್ ಅಭಿನಂದಿಸಿದ್ದಾರೆ.
ಗ್ರಾಮೀಣ ಪ್ರದೇಶದ ಕುಕ್ಕುಜೆ ಸರ್ಕಾರಿ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಇದು ಪ್ರೇರಣೆ
-ಕೆ.ಗಣಪತಿ, ಡಿಡಿಪಿಐ.
ಪ್ರತಿಭೆಗೆ ನೀರೆರೆದ ಶಿಕ್ಷಕರು’
ನಾಲ್ವರು ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳಿಗೆ ರೂಪ ನೀಡಲು ಸಂಸ್ಥೆಯ ಪ್ರಾಂಶುಪಾಲ, ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್ಡಿಎಂಸಿ ಮತ್ತು ಎಸ್ಬಿಸಿ ಪ್ರೋತ್ಸಾಹ ನೀಡಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನ ಶಿಕ್ಷಕ ಸುರೇಶ್ ಮರಕಾಲ ವಿದ್ಯಾರ್ಥಿಗಳಿಗೆ ಮಾಡೆಲ್ ತಯಾರಿಕೆಯಲ್ಲಿ ಸಂಪೂರ್ಣ ಮಾರ್ಗದರ್ಶನ ನೀಡಿ ತರಬೇತುಗೊಳಿಸಿದ್ದಾರೆ. ವಿಜ್ಞಾನ ಶಿಕ್ಷಕಿ ಪ್ರತಿಮಾ, ಗಣಿತ ಶಿಕ್ಷಕ ಬಾಬುರಾಯ ಕಾಮತ್ ಹಾಗೂ ಜಯಪ್ರಕಾಶ್ ಸಹಕಾರ ಇದೆ. ಶಿಕ್ಷಕ ಸುರೇಶ್ ಮರಕಾಲ ಅವರು ಹಿಂದೆ ಕರ್ತವ್ಯ ನಿರ್ವಹಿಸಿದ್ದ ಶಾಲೆಗಳಲ್ಲೂ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ್ದರು.


























