





ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯಿಂದ
30 ಲಕ್ಷ ರೂ. ದರೋಡೆ ; ಸ್ಥಳಕ್ಕೆ ಎಸ್ ಪಿ ಭೇಟಿ
ವಿಟ್ಲ: ಆದಾಯ ತೆರಿಗೆ ಇಲಾಖೆ ( ಇಡಿ) ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿ 30 ಲಕ್ಷ ರೂ. ಲೂಟಿ ಮಾಡಿದ ಘಟನೆ ಬೋಳಂತೂರು ಸಮೀಪದ ನಾರ್ಶ ದಲ್ಲಿ ನಡೆದಿದೆ.





ಬಂಟ್ವಾಳ ತಾಲ್ಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶದಲ್ಲಿ ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಶುಕ್ರವಾರ ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ತಂಡವೊಂದು ಕಾರಿನಲ್ಲಿ ಆಗಮಿಸಿದೆ ದಿಡೀರ್ ದಾಳಿ ನಡೆಸಿದ ತಂಡ ನಾವು ಇಡಿ ಅಧಿಕಾರಿಗಳು ‘ ಎಂದು ನಂಬಿಸಿ ಸುಮಾರು ಎರಡು ಗಂಟೆಗಳ ವರೆಗೆ ತನಿಖೆ ನಡೆಸಿದೆ. ಬಳಿಕ
ಮನೆಯಲ್ಲಿದ್ದ ಸುಮರು 30 ಲಕ್ಷ ರೂ. ಗಳನ್ನು ದೋಚಿ ಪರಾರಿಯಾಗಿದೆ..
.ಘಟನೆಗೆ ಸಂಬಂಧಿಸಿದಂತೆ ಸುಲೇಮಾನ್ ಅವರ ಪುತ್ರ ಕೊಳ್ನಾಡು ನಿವಾಸಿ ಮಹಮ್ಮದ್ ಇಕ್ಬಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ತಾನು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು,ತಂದೆ ಬೀಡಿ ಉದ್ಯಮವನ್ನು ನಡೆಸುತ್ತಿದ್ದಾರೆ ಶುಕ್ರವಾರ ರಾತ್ರಿ 8.10 ರ ಸುಮಾರಿಗೆ, ತಮಿಳುನಾಡಿನ ನೋಂದಣಿ ಹೊಂದಿರುವ ಕಾರಿನಲ್ಲಿ 6 ಜನ ಅಪರಿಚಿತ ವ್ಯಕ್ತಿಗಳು ಬಂದು, ತಮ್ಮನ್ನು ಇ.ಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡರು.ಮನೆಯನ್ನು ಪರಿಶೀಲನೆ ನಡೆಸಲು ಅದೇಶವಾಗಿದೆ ಎಂದು ತಿಳಿಸಿ ಮನೆಗೆ ಪ್ರವೇಶಿಸಿ, ಮನೆ ಮಂದಿಯ 5 ಮೊಬೈಲ್ ಪೊನ್ ಗಳನ್ನು ಪಡೆದುಕೊಂಡು ಬಳಿಕ ಮನೆಯನ್ನು ಹುಡುಕಾಡಿದ್ದಾರೆ. ಈ ವೇಳೆ ತಂದೆಯವರ ಕೊಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25 ರಿಂದ 30 ಲಕ್ಷ ರೂ.ಹಣವನ್ನು ಪಡೆದುಕೊಂಡು, “ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಮತ್ತು ಕಸ್ಟಡಿ ತೆಗೆದುಕೊಳ್ಳುತ್ತೇನೆʼʼ ಎಂದು ಹೇಳಿದರು. ರಾತ್ರಿ ಸುಮಾರು 10.30 ಗಂಟೆಗೆ ಇಡಿ ಅಧಿಕಾರಿ ಗಳೆಂದು ಹೇಳಿ ಬಂದಿದ್ದವರು ಮನೆಯಿಂದ ಹೊರಬಂದು ತಾವು ಪಡೆದುಕೊಂಡಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ, ಸದ್ರಿ ಹಣವನ್ನು ಬೆಂಗಳೂರಿನಲ್ಲಿರುವ ಆಫೀಸಿನಿಂದ ಪಡೆದುಕೊಳ್ಳುವಂತೆ ತಿಳಿಸಿ ಹೋದರು. ಈ ಬಗ್ಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದಾಗ ಅಪರಿಚಿತ ವ್ಯಕ್ತಿಗಳು ಇ.ಡಿ ಅಧಿಕಾರಿಗಳಂತೆ ನಟಿಸಿ ಮನೆಯಿಂದ ಸುಮಾರು 25 ರಿಂದ 30 ಲಕ್ಷ ರೂ ಹಣ ಮತ್ತು 5 ಮೊಬೈಲ್ ಪೊನ್ ಗಳನ್ನು ಪಡೆದುಕೊಂಡು ವಂಚನೆ ಮಾಡಿರುವುದು ತಿಳಿದು ಬಂತು ಎಂದುಇಕ್ಬಾಲ್ ತಿಳಿಸಿದ್ದಾರೆ.
ಘಟನೆ ಕುರಿತು ಇಕ್ಬಾಲ್ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್, ಐ.ಪಿ.ಎಸ್ ರವರು ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳ ಪತ್ತೆಗಾಗಿ ಸೂಕ್ತ ಸಲಹೆಸೂಚನೆ ನೀಡಿದರು.
ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು




































