ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಅತ್ಯಂತ ಅಗತ್ಯ

Picture of RB NEWS

RB NEWS

Bureau Report

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಅತ್ಯಂತ ಅಗತ್ಯ


ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಅವರು, ಜ್ಞಾನವು ಕೆಲವೇ ವರ್ಗಗಳಿಗೆ ಸೀಮಿತವಲ್ಲ, ಅದು ಎಲ್ಲಾ ವರ್ಗಗಳಿಗೂ ಸೇರಿದೆ ಎಂಬ ತತ್ವವನ್ನು ಅಂಬೇಡ್ಕರ್ ಅವರು ಸಾರಿದರು ಎಂದರು. ವಿಶ್ವದ ವಿವಿಧ ದೇಶಗಳ ಸಂವಿಧಾನಗಳ ಆಶಯಗಳನ್ನು ಒಗ್ಗೂಡಿಸಿ ಭಾರತದ ಸಂವಿಧಾನವನ್ನು ರಚಿಸಿದ ಅವರು, ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದಾರೆ ಎಂದು ಹೇಳಿದರು. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಪ್ರಸಿದ್ಧ ವಕೀಲರಾದ ಶೇಖರ ಮಡಿವಾಳ ಅವರು ಮಾತನಾಡಿ, ಹಿಂದಿನ ಆಡಳಿತಗಳಲ್ಲಿ ರಾಷ್ಟ್ರ ನಾಯಕರಿಗೆ ಗೌರವ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಯವರ ಬಗ್ಗೆ ಅವಮಾನಕಾರಿ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಸಂವಿಧಾನ ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ನಾವು ಎಲ್ಲರೂ ಅದರ ರಕ್ಷಣೆಗೆ ಬದ್ಧರಾಗಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಅವರು ಮಾತನಾಡಿ, ಅಂಬೇಡ್ಕರ್ ಅವರು ಸಂಕಷ್ಟಗಳಲ್ಲಿ ಬೆಳೆದ ಮಹಾನ್ ವ್ಯಕ್ತಿ. ತಮ್ಮ ಜೀವನದ ನೋವುಗಳನ್ನು ಶಿಕ್ಷಣದ ಶಕ್ತಿಯಿಂದ ಜಯಿಸಿ, ದೇಶಕ್ಕೆ ಸಮಾನತೆಯ ಸಂವಿಧಾನವನ್ನು ನೀಡಿದ ಮಹಾನ್ ನಾಯಕರು ಎಂದರು. ಅವರ ಕೊಡುಗೆಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಾರ್ಕಳ ಬ್ಲಾಕ್ ಪರಿಶಿಷ್ಟ ಪಂಗಡಗಳ ಅಧ್ಯಕ್ಷ ದೇವದಾಸ್ ಆರ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಜಯಂತಿಯ ಶುಭಾಶಯಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಜಿಲ್ಲಾ ಎಸ್.ಟಿ ಘಟಕದ ಉಪಾಧ್ಯಕ್ಷ ಸೋಮನಾಥ ನಾಯಕ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಪ್ರಿತ್ ಶೆಟ್ಟಿ ಕೆದಿಂಜೆ, ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲಿನೊ, ವಿವೇಕಾನಂದ ಶೆಣೈ, ಹೇಮಂತ ಆಚಾರ್ಯ, ಸಂತೋಷ್ ದೇವಾಡಿಗ, ರಾಘವ ನಾಯಕ್, ಮಲ್ಲಿಕ್ ಅತ್ತೂರು, ರಮೇಶ್ ಬಜಕಳ, ಸಿರಿಯಣ್ಣ ಶೆಟ್ಟಿ, ಶಶಿಧರ, ರೆಹಮತ್, ದಿನೇಶ್ ಹೆಬ್ರಿ, ಸುನೀಲ್ ಭಂಡಾರಿ, ಯೋಗೀಶ್ ಮೂಲ್ಯ, ಪ್ರತಿಮಾ ರಾಣೆ, ಕಾಂತಿ ಶೆಟ್ಟಿ, ಅನ್ನಪ್ಪ ನಕ್ರೆ, ನ್ಯಾಯವಾದಿ ರಾಘವ ಕಡ್ತಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿದರು. ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶೇಖ್ ಶಭೀರ್ ಮಿಯ್ಯಾರು ಅವರು ಧನ್ಯವಾದವಿತ್ತರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top