“ಆರ್.ಬಿ.ನ್ಯೂಸ್” ವರದಿಯ ಫಲಶ್ರುತಿ
ರಾ.ಹೆ. 169 ತೊಂದರೆ ಪೀಡಿತ ಪ್ರದೇಶಗಳ ಪರಿಶೀಲನೆ: ತುರ್ತು ಕಾಮಗಾರಿ ಕೈಗೊಳ್ಳಲು ಸಮ್ಮತಿ

ಆರ್.ಬಿ.ನ್ಯೂಸ್ ಪ್ರಕಟಿಸಿದ ವರದಿ….
ಕಾರ್ಕಳ : ಸಾಣೂರು ಪದ್ಮನಾಭನಗರ ಕಾಲೋನಿಯ ಗುಡ್ಡದ ಕೆಳ ಭಾಗದ ಸರ್ವಿಸ್ ರಸ್ತೆಯಲ್ಲಿ ಚರಂಡಿ ಇಲ್ಲದೆ ಮುಂದಿನ ಮಳೆಗಾಲದಲ್ಲಿ ಸಂಭವನೀಯ ನೆರೆ ನೀರು ನುಗ್ಗುವ ಆತಂಕವಿರುವ ಅಂಗಡಿ ಮನೆಗಳಿಗೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಆರ್. ಬಿ.ನ್ಯೂಸ್ ಸಮಗ್ರ ವರದಿ ಪ್ರಕಟಿಸಿತು.
ಇದೇ ವಿಚಾರವು ಸಾಣೂರು ಗ್ರಾಮಸಭೆಯಲ್ಲಿ ಪ್ರಸ್ತಾಪವಾಗಿದ್ದು, ಸಾಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ಎಂ. ಸಿ.ಯವರು ದಿಲೀಪ್ ಬಿಲ್ಡ್ ಕನ್ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿ ಅವರನ್ನು ಸಂಪರ್ಕಿಸಿ ಸ್ಥಳ ಪರಿಶೀಲನೆ ನಡೆಸಿದರು.




ಮಳೆಗಾಲ ಪ್ರಾರಂಭವಾಗುವ ಮೊದಲೇ ಅಗತ್ಯವಿರುವಡೆ ಸೂಕ್ತವಾದ ಚರಂಡಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ಮಳೆ ನೀರು ರಸ್ತೆಯಿಂದ ಅಂಗಡಿ ಮತ್ತು ಮನೆಗಳಿಗೆ ನುಗ್ಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶಿಸಿದರು.
ಲಭ್ಯವಿರುವ ಸೀಮಿತ ಅವಕಾಶದಲ್ಲಿ ಸಮೀಪದ ಮನೆ ಮತ್ತು ಅಂಗಡಿಗಳಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹಾಗೂ ಸಮೀಪದ ಅಡ್ಡರಸ್ತೆಗೆ ಸರಾಗವಾಗಿ ನಡೆದಾಡಲು, ವಾಹನ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ತಿಳಿಸಿದರು.
ಗ್ರಾಮ ಸಭೆಯಲ್ಲಿ ಬಂದ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ದೂರುಗಳನ್ನು ಸ್ಥಳ ಭೇಟಿ ಮಾಡಿ ಬಾಲಾಜಿ ಇವರಿಗೆ ಮಾಹಿತಿ ನೀಡಿ ಸರಿಪಡಿಸಲು ತಿಳಿಸಲಾಗಿದೆ.














