ಆರ್. ಬಿ. ನ್ಯೂಸ್ ಕನ್ನಡಕ್ಕೆ ಇನ್ನೀಗ ಮೂರನೆಯ ವರ್ಷ

Picture of RB NEWS

RB NEWS

Bureau Report

ಪತ್ರಿಕೋದ್ಯಮವೇ ಏಳುಬೀಳಿನ ಕ್ಷೇತ್ರ. ಅದರಲ್ಲಿ ದುಡಿಯುವವನ ಕ್ಷಮತೆಗೆ ನೂರೆಂಟು ಗಂಟುಗಳು, ತಂತಿ ಮೇಲಿನ ನಡಿಗೆ. ಪತ್ರಕರ್ತನನ್ನು ಸಮಾಜ ಯಾಕೆ ಪ್ರೀತಿಸುತ್ತದೆ ಎನ್ನುವುದನ್ನು ಬರೆದರೆ ಅಥವಾ ಹುಡುಕಿದರೆ ಅದು ನೈಜ ಪ್ರೀತಿಯೇ ಅಲ್ಲ ಅಪ್ಪಟ ಸ್ವಾರ್ಥವಾಗಿರುತ್ತದೆ.

ಇತ್ತೀಚಿನ ದಶಕಗಳವರೆಗೆ ಪತ್ರಕರ್ತರಿಗೊಂದು ಗ್ಲಾಮರ್ ಇತ್ತು. ಈಗ ಪತ್ರಕರ್ತನೇ ಒಂದು ರೂಮರ್ ಆಗಿ ಕಾಣಿಸಲ್ಪಡುತ್ತಾನೆ. ಅವನಲ್ಲಿರುವ ಒದ್ದಾಟಗಳಲ್ಲಿ ಒಳ್ಳೆಯದು ,ಕೆಟ್ಟದ್ದನ್ನು ಆಯ್ದುಕೊಳ್ಳುವುದಕ್ಕೂ ಸಮಾಜ ಇಷ್ಟಪಡುವುದಿಲ್ಲ. ಇಂದಿನ ಸಾಮಾಜಿಕ ಮತ್ತು ರಾಜಕೀಯ ಹವಾಮಾನಕ್ಕೆ ಪತ್ರಕರ್ತರ ದಿನಚರಿಯೂ ಉಬ್ಬಸದಲ್ಲಿ ಉಸಿರಾಡುವಾಗಿನ ಏರು ತಗ್ಗಿನಂತೆ ಆಗಿರುತ್ತದೆ.


ದಿನಪತ್ರಿಕೆ,ದೃಶ್ಯ ಮಾಧ್ಯಮದಲ್ಲಿ ವರದಿಗಾರನಾಗಿ ದುಡಿಯುತ್ತಿರುವಾಗಲೇ ಆತನದೇ ಆದ ಎಡವಟ್ಟುಗಳಿದ್ದಿರಬಹುದು, ಸಮಾಜಘಾತುಕರ ಕೆಟ್ಟ ದೃಷ್ಠಿಯೇ ಆಗಿರಬಹುದು, ಇನ್ನು ವೃತ್ತಿ ಮತ್ಸರಗಳಿದ್ದಿರಬಹುದು ಒಟ್ನಲ್ಲಿ ಆರ್. ಬಿ. ಜಗದೀಶ ಕಾರ್ಕಳದಲ್ಲಿ ಗ್ರಹಣ ಬಾಧಿತ ಸೂರ್ಯ ಚಂದ್ರನಾಗಿರದೆ ವೃತ್ತಿಯಲ್ಲಿ ಮುಂದುವರಿಯುತ್ತಿರುವುದೇ ಸಂತೋಷ. ಬದುಕಿನಲ್ಲಿ, ವ್ಯವಹಾರದಲ್ಲಿ, ಕಸುಬಿನಲ್ಲಿ ಅಮಾವಾಸ್ಯೆ ,ಹುಣ್ಣಿಮೆಗಳು ಪ್ರತಿಯೊಬ್ಬನಿಗೂ ಇದ್ದೇ ಇರುತ್ತದೆ.

ವಿಜಯವಾಣಿ ದಿನಪತ್ರಿಕೆಯಿಂದ ಹೊರಬಂದವನು ವೆಬ್ ನ್ಯೂಸ್ ಸೈಟ್ ಮಾಡಿರುವುದು ಶ್ಲಾಘನೀಯ ಮತ್ತು ಪತ್ರಕ್ರತನೊಬ್ಬನ ಜೀವಿತಾವಧಿಯ ತುಡಿತಕ್ಕೆ ತಾನೇ ತಂದುಕೊಳ್ಳುವ ಸಮಾಧಾನ. ಸ್ವತಂತ್ರವಾಗಿ ಸುದ್ದಿ ಬಿತ್ತರಿಸುವುದಕ್ಕೋ, ಸಚಿತ್ರ ಲೇಖನ ವರದಿ ಕೊಡುವುದಕ್ಕೊ ವಿಶಾಲ ಆದ್ಯತೆ.
ಆರ್ ಬಿ ನ್ಯೂಸ್ ಶೀರ್ಷಿಕೆಯ ಅಡಿಬರೆಹದ ಬಗ್ಯೆ ನಾನು ತಲೆಗೆಡಿಸಿಕೊಂಡಿಲ್ಲ .ಯಾಕೆಂದರೆ, ಜಗದೀಶನೊಡನೆ ಯಾರೇ ಪ್ರಶ್ನೆ ಎತ್ತಿದರೆ ಅದು ವಾದ ವಿವಾದವಾಗಿ ಬೇಸರದ ಮುಕ್ತಾಯವಾಗುವುದೇ ಹೊರತು ತಾರ್ಕಿಕ ಅಂತ್ಯವಂತೂ ನಾನು ಕೂಡಾ ಕಂಡವನಲ್ಲ. ಅದರಲ್ಲಿ ಏನೋ ಒಂದು ಗುರಾಣಿಯನ್ನು ಪ್ರದರ್ಶಿಸುವ ಪ್ರಯತ್ನವಿದೆಯಷ್ಟೆ ಹೊರತು ಬೇರೇನೂ ಅದರ ಅಗತ್ಯ ಕಾಣುವುದಿಲ್ಲ.


ಎರಡು ವರ್ಷಗಳು ಸಲೀಸಾಗಿ ಮುಗಿಯಿತು.ಇದೀಗ ಮೂರನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು. ಇತ್ತೀಚೆಗಿನಿಂದ ರಾಜ್ಯದ ಬಹುತೇಕ ಕಡೆಗಳ ಸುದ್ದಿ ಆರ್. ಬಿ. ನ್ಯೂಸ ಲ್ಲಿ ಕ್ಷಿಪ್ರವಾಗಿ ಪ್ರಕಟವಾಗುತ್ತಿರುವುದನ್ನು ಗಮನಿಸಿದಾಗ ಕಾರ್ಕಳದ ಇತರ ವೆಬ್ ಸೈಟ್ ನ್ಯೂಸ್ ಗಳಿಗಿಂತ ಸ್ವಲ್ಪ ಜಾಸ್ತಿ ವರದಿಗಾರಿಕೆ ಬರುತ್ತಿದೆ. ಅದೊಂದು ಒಳ್ಳೆಯ ಪ್ರಯತ್ನವೆನ್ನಬಹುದು.

ಆದಾಯದ ಮೂಲಗಳನ್ನು ಬಳಸಿಕೊಂಡರೆನೆ ಪತ್ರಿಕೆ ಮತ್ತು ಪತ್ರಕರ್ತ ಬದುಕಬಲ್ಲ ಎಂದು ಆತನಿಗೆ ಸಲಹೆ ಕೊಟ್ಟಿದ್ದೇನೆ. ಮನುಷ್ಯನಿಗೆ ಪ್ರಚಾರದ ಗೀಳು ಎಲ್ಲಿವರೆಗೆ ಮುಟ್ಟಿದೆಯೆಂದರೆ ಅದನ್ನು ಗಮನಿಸುತ್ತ ಮುಂದೆ ಹೋದರೆ ಎಷ್ಟೇ ಸಂಪಾದನೆ ಮಾಡಬಹುದು. ಪ್ರಭಾವಿ ದಿನಪತ್ರಿಕೆಗಳ ಪುಟಗಳನ್ನೇ ಗಮನಿಸಿದಾಗ ತಿಳಿಯಬಹುದೇನೆಂದರೆ ಆ್ಯಕ್ಸಿಡೆಂಟ್ ಸುದ್ದಿ ಮಾತ್ರ ಉಚಿತ ಪ್ರಕಟಣೆಯಾಗಿದೆ ಎಂದು. ಜಾಹೀರಾತು ಕೊಟ್ಟಿರದ ಕಾರ್ಯಕ್ರಮ ಅಥವಾ ಸಾಮಾಜಿಕ ಅಭಿವೃದ್ಧಿ ಸಭೆಯ ತುಣುಕು ಸುದ್ದಿ ಕೂಡಾ ಪ್ರಕಟವಾಗುವುದಿಲ್ಲ.


ಅದೇ ಪ್ರಕಾರ ವೆಬ್ ನ್ಯೂಸ್ ಗಳಿಗೆ ಯೋಗ್ಯ ದಾರಿಯಲ್ಲಿ ಸಂಪಾದನೆ ಮಾಡುವುದಕ್ಕೆ ವಿಪುಲ ಅವಕಾಶ ಕೂಡಾ ಇದೆ.
ಪತ್ರಕರ್ತನಾಗಿ ಸಮಾಜ ಸುಧಾರಣೆ ಮಾಡುತ್ತೇನೆ ಎಂದು ಪತ್ರಿಕಾ ಕೆಲಸ ಮಾಡುವುದು ವ್ಯರ್ಥ. ಇತ್ತೀಚಿನ ವರ್ಷಗಳಿಂದ ಪತ್ರಕರ್ತರು ಕುರುಡರಾಗಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ದರೆನೆ ಆತನಿಂದ ಮನೆ ಸಂಸಾರ ಕಣ್ಣರಳಿಸಿ ಬದುಕಬಹುದು!


ಏಕೋಪಾಧ್ಯಾಯನಂತೆ ಕೆಲಸ ಮಾಡಿಕೊಂಡು ಎರಡು ವರ್ಷ ಬೆಳೆಸಿ ಇನ್ನೀಗ ಮೂರನೆಯ ವರ್ಷದಲ್ಲಿ ಮುನ್ನಡೆಯುತ್ತಿರುವ ಈ ವೆಬ್ ನ್ಯೂಸ್ ಸೈಟ್ ಮತ್ತಷ್ಟು ಕಾರ್ಯಪ್ರವೃತ್ತಿಯಾಗಲಿ.ಅವಕಾಶ ಅಥವಾ ಯಾರದ್ದೇ ನೆರವು ದೊರಕಿದ್ದಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವುದಕ್ಕೆ ಪ್ರಯತ್ನಿಸಬೇಕು. ವರ್ತಮಾನಕ್ಕೆ ಅಪ್ರಸ್ತುತವೆನಿಸಿದ ಗೊಡ್ಡು ಸಿದ್ಧಾಂತದಿಂದ ಜಗದೀಶ ಆಚೆ ಬಂದರು ಕೂಡಾ ಒಳ್ಳೆಯ ಪತ್ರಿಕಾ ಸುದ್ಧಿ ಕೊಡುವುದಕ್ಕೆ ಸಾಧ್ಯವಾಗುತ್ತದೆ. ಅಂಥ ಅವಕಾಶಗಳು ಕೈಬೀಸಿಕೊಂಡು ಬಂದು ಆರ್. ಬಿ. ನ್ಯೂಸ್ ಮತ್ತಷ್ಟು ಉದ್ದಗಲಕ್ಕೆ ವಿಸ್ತರಣೆಯಾಗಲಿ ಎಂದು ನನ್ನ ಮನದಾಳದ ಹಾರೈಕೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top