ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿ ಎಲ್ಲರಿಗೂ ತಿಳಿದಿದೆ. ಆರೋಗ್ಯವಿದ್ದರಷ್ಟೇ ಬದುಕು ಎಂಬುದು ತಿಳಿದಿರುವ ವಿಚಾರ. ಆದರೂ ಹಲವರು ಆರೋಗ್ಯದ ಬಗ್ಗೆ ಕಾಳಜಿ ಮಾಡುವುದಿಲ್ಲ. ಇತ್ತೀಚಿನ ಒತ್ತಡದ ಬದುಕಿನಲ್ಲಿ ಇಲ್ಲಸಲ್ಲದ ಸಮಸ್ಯೆಗಳು ಮನುಷ್ಯರನ್ನು ಕಾಡುತ್ತಿರುವುದು ಸುಳ್ಳಲ್ಲ. ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅವಶ್ಯ. ಈ ಎರಡೂ ಸಮತೋಲನದಲ್ಲಿದ್ದರೆ ಮಾತ್ರ ಮನುಷ್ಯ ಸಂಪೂರ್ಣ ಆರೋಗ್ಯವಂತನಾಗಿದ್ದಾನೆ ಎಂದರ್ಥ.
ಮಾನಸಿಕ ಸಮಸ್ಯೆ ಎಂದರೆ ಗಮನಶಕ್ತಿ ಯ ಕೊರತೆ, ನೆನಪಿನ ಶಕ್ತಿಯ ಕೊರತೆ ಇದು ಕೂಡ ಸೇರಿರುತ್ತದೆ. ಮಾನಸಿಕ ಯೋಗಕ್ಷೇಮ ವೃದ್ಧಿಗೆ ಯೋಗ ಮಾಡುವುದು ಉತ್ತಮ ಪರಿಹಾರ. ಅದರಲ್ಲೂ ಮರೆವಿನ ಸಮಸ್ಯೆ ನಿವಾರಣೆಗಾಗಿ ಒಂದಿಷ್ಟು ಯೋಗಾಸನಗಳಿವೆ. ಇವು ದೇಹ, ಮನಸ್ಸಿನಲ್ಲಿ ಚೈತನ್ಯ ಹೆಚ್ಚುವಂತೆ ಮಾಡುವುದು ಮಾತ್ರವಲ್ಲ, ಮನಸನ್ನೂ ಶಾಂತವಾಗಿರಿಸಲು ಸಹಾಯ ಮಾಡುತ್ತದೆ.
ಪದ್ಮಾಸನ
ಪದ್ಮಾಸನ ಅಥವಾ ತಾವರೆಯ ಭಂಗಿಯು ನೆನಪಿನ ಶಕ್ತಿ ಹೆಚ್ಚಲು ಉತ್ತಮ ಆಸನ. ಈ ಆಸನದ ಪ್ರಯೋಜನ ಪಡೆಯಲು ಚಕ್ಕಳಮಕ್ಕಳ ಹಾಕಿ ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳಿ. ಈ ಆಸನವು ಮನಸ್ಸನ್ನು ಶಾಂತಗೊಳಿಸುತ್ತದೆ. ಮೆದುಳಿನ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ಸ್ನಾಯವಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಪದ್ಮಾಸನ ಅಭ್ಯಾಸ ಮಾಡುವಾಗ ನೇರವಾಗಿ ಕುಳಿತುಕೊಳ್ಳುವುದು ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಸ್ವಾಭಾವಿಕವಾಗಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಉತ್ತಮ ಭಂಗಿಯು ಬೆನ್ನು ನೋವು ಮತ್ತು ತಲೆನೋವನ್ನು ಕೂಡ ಕಡಿಮೆ ಮಾಡುತ್ತದೆ. ಇದು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಪಾದ ಹಸ್ತ ಮಾಡುವ ವಿಧಾನ

1) ಮೊದಲು ಭೂಮಿಗೆ ಲಂಭವಾಗಿ, ನೇರವಾಗಿ ನಿಲ್ಲಬೇಕು.
2) ಅನಂತರ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಬೇಕು.
3) ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡುತ್ತಾ ಮುಂದಕ್ಕೆ ಬಗ್ಗಿ ನೆಲವನ್ನು ಮುಟ್ಟಬೇಕು. ಆದರೆ ಮುಂದಕ್ಕೆ ಬಗ್ಗುವಾಗ ಸೊಂಟವನ್ನಾಗಲಿ ಅಥವಾ ಮೊಣಕಾಲುಗಳನ್ನಾಗಲಿ ಬಗ್ಗಿಸದಿರುವತ್ತ ಗಮನ ವಹಿಸಬೇಕು. ಮೊದಲು ಭೂಮಿಯನ್ನು ಮುಟ್ಟುವುದು, ಅನಂತರ ಭೂಮಿಯ ಮೇಲೆ ಅಂಗೈಯನ್ನು ಊರುವುದು, ನಂತರ ಕಾಲಿನ ಗಂಟುಗಳನ್ನು ಹಿಡಿದುಕೊಂಡು ಮೊಣಕಾಲಿಗೆ ತಲೆಯನ್ನು ತಾಗಿಸುವುದು, ಅನಂತರ ಎದೆಯನ್ನು ಮಂಡಿಗೆ ತಾಗಿಸಲು ಪ್ರಯತ್ನಿಸಬಹುದು. ಆದರೆ ಯಾವುದೇ ಭಂಗಿಯಲ್ಲೂ ಶರೀರವನ್ನು ಭೂಮಿಗೆ ಲಂಬವಾಗಿರಿಸುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಲಾಭಗಳು
ಪಾದಹಸ್ತಾಸನ ಅಭ್ಯಾಸದಿಂದ ಹೊಟ್ಟೆ, ಪಿತ್ತಜನಕಾಂಗ, ಮೀನಖಂಡ, ಸೊಂಟ ಹಾಗೂ ತೊಡೆಗಳಲ್ಲಿನ ಅನೇಕ ದೋಷಗಳು ನಿವಾರಣೆಯಾಗುವವು. ಮಲಬದ್ಧತೆಯೂ ಸಾಕಷ್ಟು ನಿವಾರಣೆಯಾಗುವುದಲ್ಲದೆ ಬೊಜ್ಜು ಕರಗುವುದು. ಬೆನ್ನಿಗೆ ಸರಿಯಾದ ವ್ಯಾಯಾಮ ದೊರೆಯುವುದು. ವಿಶೇಷವಾಗಿ ಪಾದಹಸ್ತಾಸನದ ಅಭ್ಯಾಸದಿಂದ ಜೀರ್ಣರಸದ ಉತ್ಪತ್ತಿಯು ಹೆಚ್ಚುವುದು







































