ಆಂತರಿಕ ಮೌಲ್ಯದ ಗುಣಮಟ್ಟ ಕಾಪಾಡುವಲ್ಲಿ ಕ್ರೀಡಾಪಟುಗಳು ಎಂದಿಗೂ ಸೋಲುವುದಿಲ್ಲ
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು, ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕಿಯರ ವಿಭಾಗದ ಖೋಖೊ ಪಂದ್ಯಾಟದ ಉದ್ಘಾಟನಾ ಸಮಾರಂಭವು ಸ್ವರಾಜ್ ಮೈದಾನದಲ್ಲಿ ಜರುಗಿತು.
ಕಾರ್ಕಳದ ವಕೀಲರಾಗಿರುವ ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜಿನ ಪೂರ್ವವಿಧ್ಯಾರ್ಥಿ ಕೆ. ವಿನೀತ್ ಕುಮಾರ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಆಂತರಿಕ ಮೌಲ್ಯದ ಗುಣಮಟ್ಟ ಕಾಪಾಡುವಲ್ಲಿ ಕ್ರೀಡಾಪಟುಗಳು ಎಂದಿಗೂ ಸೋಲುವುದಿಲ್ಲ. ಜೀವನದಲ್ಲಿ ಎದುರಾಗುವ ಸಂಧಿಗ್ದತೆಗಳನ್ನು ಸರಿತೂಗಿಸಿಕೊಂಡು ಹೋಗುವ ಸಾಮರ್ಥ್ಯದ ಮಟ್ಟ ಕ್ರೀಡಾಪಟುಗಳಲ್ಲಿ ಹೆಚ್ಚಿರುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀ ಭುವನೇಂದ್ರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ನಿರ್ಣಾಯಕ ಹಂತದವರೆಗೆ ನಾನೇ ಗೆಲ್ಲುತ್ತೇನೆ ಎಂಬ ಕ್ರೀಡಾಕಿಚ್ಚು ಪ್ರತಿಯೊಬ್ಬ ಕ್ರೀಡಾಪಟುವನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ ಎಂದರು.
ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಶುಪಾಲ ರಮೇಶ್ ಎಸ್. ಸಿ. ಇವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ, ಸೋಲು ಗೆಲುವನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಭವಿಷ್ಯವನ್ನು ದೃಢಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕಿ ಮಾಲತಿ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಚಂದ್ರ ಧನ್ಯವಾದ ನೀಡಿದರು.

































