ಅಸಹಜ ಸಾವಿನ ಹಿಂದೆ ಅನುಮಾನ ಹುತ್ತ!
ಅಜೆಕಾರು: ಎಳ್ಳಾರೆ ಎಂಬಲ್ಲಿ ಯುವಕನೊಬ್ಬನ ಆತ್ಮಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎಳ್ಳಾರೆಯ ತೇಜಸ್ (17) ಎಂಬಾತ ಮಾಚ್೯ 17ರಂದು ಮನೆಯ ಅನತಿ ದೂರದ ಬಾವಿಗೆ ಹಾರಿ ಆತ್ಮಹತ್ಯೆಗೈದಿದ್ದನು. ಈ ಕುರಿತು ಆತನ ತಂದೆ
ರಮೇಶ ಮಂಜರಬೆಟ್ಟು ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದರು. ಅದರನ್ವಯ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವೆಂದು ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ತಿಳಿಸಿರುವಂತೆ 10 ನೇ ತರಗತಿಯಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದು, ನಂತರ ಅಜೆಕಾರಿನಲ್ಲಿ ಟ್ಯೂಷನ್ ಪಡೆದು ಎಸ್.ಎಸ್ಎಲ್.ಸಿ ಸಪ್ಲಿಮೆಂಟರಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಕೂಡ ಅನುತ್ತೀರ್ಣಗೊಂಡ ನಂತರ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಿಂದ ಸ್ವಲ್ಪ ದೂರದಲ್ಲಿರುವ ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ವಿವರಿಸಿದ್ದಾರೆ.
ತನಿಖೆ ಮುಂದುವರಿಕೆ
ಮೃತ ವ್ಯಕ್ತಿ ತೇಜಸ್ ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿಲ್ಲ.
ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಬರೆದು ತಿಂಗಳು ಹಲವು ಕಳೆದಿದೆ. ಹೀಗಿರುವಾಗ ಏಕಾಏಕಿಯಾಗಿ ಆತ್ಮಹತ್ಯೆ ನಿರ್ಧಾರಕ್ಕೆ ಮುಂದಾಗಿರುವುದು ಅನುಮಾನವೂ ಆಗಿದೆ.
ಆತ್ಮಹತ್ಯೆಗೂ ಮುನ್ನ ತೇಜಸ್ ಮೊಬೈಲ್ ಸಂಭಾಷಣೆ ನಡೆಸಿದ್ದಾನೆಯೇ ? ಆ ಕುರಿತು ಮಾಹಿತಿ ಕಲೆ ಹಾಕುವುದಕ್ಕೆ ಪೊಲೀಸರು ಮುಂದಾಗಿದ್ದಾರೆ. ಆ ಬಳಿಕವಷ್ಟೇ ಆತ್ಮಹತ್ಯೆಗೆ ನಿಖರ ಮಾಹಿತಿ ಬೆಳಕಿಗೆ ಬರಬಹುದು.

































