ಅಳಿಯ, ಮೊಮ್ಮಗನಿಂದ ಕೊಲೆಗೀಡಾದ ನಿವೃತ್ತ ಶಿಕ್ಷಕ!
ಮಂಗಳೂರು : ಬೆಳ್ತಂಗಡಿ ತಾಲೂಕಿನ ಬೆಳಾಲುವಿನ ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕಿಲ್ಲಾಯ (83) ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಗಳಿಗೆ ಆಸ್ತಿಯನ್ನು ನೀಡಲಿಲ್ಲ ಎಂಬ ಕಾರಣ ಮುಂದಿಟ್ಟು ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕಿಲ್ಲಾಯ ಅವರನ್ನು ತನ್ನ ಸ್ವಂತ ಮಗಳ ಗಂಡ ಹಾಗೂ ಮೊಮ್ಮಗ ಹತ್ಯೆಗೈದಿದ್ದಾರೆ. ಒಟ್ಟಾರೆಯಾಗಿ ಹಣ ಹಾಗೂ ಆಸ್ತಿಗಾಗಿ ನಡೆದಿರುವ ಕೊಲೆ ಎಂಬುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಧರ್ಮಸ್ಥಳ ಪೊಲೀಸರು ಮೊಬೈಲ್, ಸಿಸಿ ಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆಯಾದ ಬಾಲಕೃಷ್ಣ ಬಡೆಕಿಲ್ಲಾಯ(83) ಅವರ ಮಗಳ ಗಂಡ(ಆಳಿಯ) ಕಾಸರಗೋಡು ಮುಳ್ಳೇರಿಯದ ನಿವಾಸಿ ವೃತ್ತಿಯಲ್ಲಿ ಜ್ಯೋತಿಷ್ಯನಾಗಿದ್ದ ರಾಘವೇಂದ್ರ ಕೆಧಿಲಾಯ(53) ಮತ್ತು ಮಗಳ ಮಗ (ಮೊಮ್ಮಗ) ಮುರುಳಿಕೃಷ್ಣ(20) ಎಂಬವರನ್ನು ಆ.24 ರಂದು ಅವರ ಮನೆಯಲ್ಲಿ ಬಂಧಿಸಿದ್ದಾರೆ.
ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕಿಲ್ಲಾಯ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ಯು.ಲೀಲಾ(75) ಅವರ ಚಿನ್ನವನ್ನು ಮಗಳಾದ ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದರು. ಇದೇ ಕಾರಣದಿಂದ ಬೇಸರಗೊಂಡಿದ್ದ ಬಾಲಕೃಷ್ಣಬಡೆಕಿಲ್ಲಾಯರ ಮಗಳು ವಿಜಯಲಕ್ಷ್ಮಿಯ ಗಂಡ ಕೃಷಿಕ ಹಾಗೂ ಜ್ಯೋತಿಷ್ಯಿಯಾಗಿರುವ ರಾಘವೇಂದ್ರ ಕೆದಿಲಾಯ(53) ಮತ್ತು ಮಗ ಮುರಳಿ ಕೃಷ್ಣ (20) ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾರೆ.
ಅಪ್ಪ-ಮಗ ಸೇರಿಕೊಂಡು ಕಾಸರಗೋಡು ಮನೆಯಿಂದ ಮಾರಕಾಸ್ತ್ರದೊಂದಿಗ ವಿಜಯಲಕ್ಷ್ಮಿಯ ಸ್ಕೂಟರ್ನಲ್ಲಿ ರಾಘವೇಂದ್ರ ಕೆದಿಲಾಯ ಮತ್ತು ಸ್ನೇಹಿತನ ಬೈಕ್ ನಲ್ಲಿ ಮುರುಳಿಕೃಷ್ಣ ಬಂದು ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದು ಸ್ಕೂಟರಿನಲ್ಲಿಯೇ ಅಪ್ಪ-ಮಗ ಬೆಳಾಲಿಗೆ ಬಂದು ಬಾಲಕೃಷ್ಣ ಬಡೆಕಿಲ್ಲಾಯಮನೆ ಸೇರಿದ್ದಾರೆ.
ಆರೋಪಿಗಳು ಬಾಲಕೃಷ್ಣ ಬಡೆಕಿಲ್ಲಾಯ ಹಾಗೂ ಅವರ ಕಿರಿಯ ಮಗ ಸುರೇಶ್ ಭಟ್ ನನ್ನು ಹತ್ಯೆ ಮಾಡಲು ಕೂಡ ಯೋಜನೆ ರೂಪಿಸಿದ್ದು, ಬಾಲಕೃಷ್ಣ ಅವರನ್ನು ಕೊಲೆ ಮಾಡಿದ ಬಳಿಕ ಸುರೇಶ್ ಭಟ್ ಬರುತ್ತಾರೆ ಎಂದು ಕೆಲ ಕಾಲ ಮನೆಯಲ್ಲೇ ಕಾದು ಕುಳಿತಿದ್ದರು. ಆದರೆ ಆತ ಬಾರದೆ ಇದ್ದಾಗ ಹಂತಕರು ತಲಾ 50 ಸಾವಿರ ರೂ.ಮೌಲ್ಯದ ಎರಡು ಬಾಂಡ್ ಪೇಪರ್ಗಳು ಹಾಗೂ ಕಬೋರ್ಡ್ನಲ್ಲಿದ್ದ ಕೆಲವು ದಾಖಲೆಗಳನ್ನು ತೆಗೆದುಕೊಂಡು ಸ್ಕೂಟರ್ನಲ್ಲಿ ಬಂದ ದಾರಿಯಲ್ಲೇ ಮನೆಗೆ ಪರಾರಿಯಾಗಿದ್ದಾರೆ ಎಂದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ.
ಹತ್ಯೆ ಆರೋಪಿಗಳು ಇವರೇ ಅಂತ ತಿಳಿಯಲಿಲ್ಲ
ತಂದೆಯ ಕೊಲೆಯಲ್ಲಿ ಪತಿ ಮತ್ತು ಮಗನ ಕೈವಾಡ ಇರುವುದು ವಿಜಯಲಕ್ಷ್ಮಿಗೆ ತಿಳಿದಿರಲಿಲ್ಲ. ಧರ್ಮಸ್ಥಳ ಪೊಲೀಸರು ಆಕೆಯ ಮನೆಗೆ ಆಗಮಿಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಾಗ ಅವರ ಕೃತ್ಯಗಳ ಬಗ್ಗೆ ಆಕೆಗೆ ತಿಳಿಯಿತು.
ಉಂಡ ಬಾಳೆ ಎಲೆ ತನಿಖೆ ಪೂರಕ….
ಹತ್ಯೆ ನಡೆದ ಕೂಡಲೇ ಮಂಗಳೂರಿನಿಂದ ಶ್ವಾನದಳದ ತಂಡವು ಸ್ಥಳಕ್ಕೆ ಆಗಮಿಸಿದೆ. ನಾಯಿಯು ತಮ್ಮ ಊಟದ ನಂತರ ಬಳಸಿದ ಬಾಳೆ ಎಲೆಯನ್ನು ಬಿಸಾಡಿದ ಬಾವಿಯ ಹಾದಿಯನ್ನು ಪತ್ತೆಹಚ್ಚಿತು ಮತ್ತು ನಂತರ ರಸ್ತೆಯ ಕಡೆಗೆ ಚಲಿಸಿತು. ಇದರಿಂದ ಪೊಲೀಸರಿಗೆ ಮೊದಲ ಸುಳಿವು ಸಿಕ್ಕಿದೆ. ಅವರು ಎಲ್ಲಾ ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಮೃತರ ಅಳಿಯ ಮತ್ತು ಮೊಮ್ಮಗನನ್ನು ಬಂಧಿಸಿದ್ದಾರೆ.
ಕೊಲೆಗಡುಕನ ಕಂಬನಿ…

ವಿಜಯಲಕ್ಷ್ಮಿ ಹಾಗೂ ಅವರ ಪತಿ ಆರೋಪಿ ರಾಘವೇಂದ್ರ ಕೆದಿಲಾಯ ಅವರು ಆ.21ರಂದು ಮಧ್ಯಾಹ್ನ ಬಾಲಕೃಷ್ಣ ಬಡೆಕಿಲ್ಲಾಯ ಅವರ ಪಾರ್ಥಿವ ಶರೀರವನ್ನು ವೀಕ್ಷಿಸಲು ಬೆಳಾಲುವಿಗೆ ಬಂದಿದ್ದನು. ಆದರೆ ಅವರ ಪುತ್ರ ಮೃತರ ಮೊಮ್ಮಗ ಮುರಳಿಕೃಷ್ಣ ತಾತನ ಮನೆಗೆ ಬಂದಿರಲಿಲ್ಲ.
ಜಿಲ್ಲಾ ಎಸ್ಪಿ ಯತೀಶ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ. ತಂಡದಲ್ಲಿ ಡಿವೈಎಸ್ಪಿ ವಿಜಯಪ್ರಸಾದ್, ಬೆಳ್ತಂಗಡಿ ಸಿಐ ನಾಗೇಶ್ ಕದ್ರಿ, ಧರ್ಮಸ್ಥಳ ಎಸ್ಐಗಳಾದ ಕಿಶೋರ್ ಮತ್ತು ಸಮರ್ಥ ಗಾಣಿಗೇರ ಇದ್ದರು.

































