ಬೆಂಗಳೂರು: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ಸಾಧನೆ ಮಾಡಿ ಬೆಳ್ಳಿ ಪದಕ ಗೆದ್ದ ಕಾರ್ಕಳದ ಯುವ ಕ್ರೀಡಾಪಟು ಅಯುಷ್ ಶೆಟ್ಟಿಯನ್ನು ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಅಯುಷ್ ಶೆಟ್ಟಿಗೆ ಶಾಲು ಹೊದಿಸಿ ಸನ್ಮಾನಿಸಿ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಯುಷ್ ಶೆಟ್ಟಿಯವರು ಚೀನಾದ ನಿಂಗ್ಬೋ ನಗರದಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ವಿಶ್ವದ ನಂ. 1 ಆಟಗಾರ ಕುನ್ಲಾವುತ್ ವಿಟಿಡ್ಸರ್ನ್ ಅವರನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿ, 61 ವರ್ಷಗಳ ಬಳಿಕ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿಜಯಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು, ವಿಧಾನಪರಿಷತ್ ಸದಸ್ಯ ಗೋವಿಂದರಾಜು ಸೇರಿದಂತೆ ಅಯುಷ್ ಶೆಟ್ಟಿಯವರ ತಂದೆ ರಾಮ ಪ್ರಕಾಶ್ ಶೆಟ್ಟಿ ಹಾಗೂ ತಾಯಿ ಶ್ರೀಮತಿ ಶಾಲ್ಮಲಿ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಯುಷ್ ಶೆಟ್ಟಿಯವರ ಮುಂದಿನ ಕ್ರೀಡಾ ಭವಿಷ್ಯಕ್ಕೆ ಶುಭ ಹಾರೈಸಿದರು ಹಾಗೂ ಇಂತಹ ಸಾಧನೆಗಳು ರಾಜ್ಯದ ಯುವಕರಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.