ಅಮ್ಮನ ಶತಮಾನೋತ್ಸವಕ್ಕೆ ಅರ್ಥಪೂರ್ಣ ಕಾಣಿಕೆ
ಅಮ್ಮನ ಶತಮಾನೋತ್ಸವಕ್ಕೆ ಅರ್ಥಪೂರ್ಣ ಕಾಣಿಕೆ: ಅಜೆಕಾರಿನಲ್ಲಿ ಉಚಿತ ಶಿಕ್ಷಣದ ಕನಸಿನ ಶಾಲೆ


ಕಾರ್ಕಳ: ತಾಯಿಯ ಮೇಲಿನ ಅಪಾರ ಪ್ರೀತಿ ಮತ್ತು ಸಮಾಜದ ಮೇಲಿನ ಬದ್ಧತೆ ಒಂದೇ ವೇಳೆ ವ್ಯಕ್ತವಾಗುವ ಅಪರೂಪದ ಉದಾಹರಣೆ ಅಜೆಕಾರಿನಲ್ಲಿ ಸಾಕಾರಗೊಂಡಿದೆ. ತಮ್ಮ ತಾಯಿಯ 100ನೇ ಹುಟ್ಟುಹಬ್ಬದ ಅಂಗವಾಗಿ ಶಿಕ್ಷಕರೊಬ್ಬರು ಹುಟ್ಟೂರಲ್ಲೇ ಆಧುನಿಕ ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣ ನೀಡುವ ಶಾಲೆಯನ್ನು ನಿರ್ಮಿಸಿದ್ದಾರೆ.

ಡಾ. ಸುಧಾಕರ್ ಶೆಟ್ಟಿ

ಜನ್ಮಧಾತೆಯ ಸವಿನೆನಪಿಗಾಗಿ ಈ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಕೈ ಹಾಕಿದ್ದಾರೆ. “ಗ್ರಾಮೀಣ ಪ್ರದೇಶದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು” ಎಂಬ ಧ್ಯೇಯದೊಂದಿಗೆ, ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವ ಉದ್ದೇಶದಿಂದ ಅಜೆಕಾರ್ ಪದ್ಮನಗರದಲ್ಲಿ ಸುಸಜ್ಜಿತ ವಿದ್ಯಾಮಂದಿರ ನಿರ್ಮಾಣಗೊಳ್ಳುತ್ತಿದೆ.
ಅಜೆಕಾರ್ ಪದ್ಮ ಗೋಪಾಲ್ ಶಿಕ್ಷಣ ಟ್ರಸ್ಟ್ ವತಿಯಿಂದ ನಿರ್ಮಾಣವಾಗುತ್ತಿರುವ ಈ ನೂತನ ಕ್ಯಾಂಪಸ್, ಸಂಸ್ಥೆಯ ನಾಲ್ಕನೇ ವಿದ್ಯಾಕೇಂದ್ರವಾಗಿದ್ದು, ಕಳೆದ 15 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿರುವ ಈ ಸಂಸ್ಥೆ ಅನೇಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿವೇತನಗಳನ್ನು ನೀಡುತ್ತಿದೆ.
ಕಾರ್ಕಳದ ಗಣಿತನಗರದಲ್ಲಿ ಜ್ಞಾನಸುಧಾ ಸಂಸ್ಥೆಯನ್ನು ಸ್ಥಾಪಿಸಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ. ಸುಧಾಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪುಗೊಂಡಿದೆ. ಅಜೆಕಾರಿನ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದಲೇ ಉಚಿತ ಶಿಕ್ಷಣ ನೀಡುವ ಮಹತ್ವಾಕಾಂಕ್ಷೆ ಯೋಜನೆ ಮೂಲಕ ತಾಯಿಯ ಶತಮಾನೋತ್ಸವವನ್ನು ಸಾರ್ಥಕಗೊಳಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಭವ್ಯ ಶ್ರೀ ಮಹಾಗಣಪತಿ ದೇವಸ್ಥಾನವೂ ನಿರ್ಮಾಣಗೊಳ್ಳುತ್ತಿದ್ದು, ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಪ್ರಯತ್ನವೂ ನಡೆದಿದೆ. ಏಪ್ರಿಲ್ 10ರಿಂದ 14ರವರೆಗೆ ನಡೆಯಲಿರುವ ಪ್ರತಿಷ್ಠಾಪನೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳೊಂದಿಗೆ ಏಪ್ರಿಲ್ 14ರಂದು ಶಾಲೆಯ ಲೋಕಾರ್ಪಣೆ ನಡೆಯಲಿದೆ.
ಜ್ಞಾನಸುಧಾ: ಶಿಕ್ಷಣದ ಜೊತೆ ಮೌಲ್ಯಗಳ ಬೆಳೆಸುವ ಸಂಸ್ಥೆ
2011-12ರಲ್ಲಿ ಸ್ಥಾಪಿತವಾದ ಜ್ಞಾನಸುಧಾ ಪಿಯು ಕಾಲೇಜು, “ಜ್ಞಾನ – ಸಂಶೋಧನೆ – ಮೌಲ್ಯ” ಎಂಬ ತತ್ವದಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಸಂಸ್ಥಾಪಕರಾದ ಡಾ. ಸುಧಾಕರ್ ಶೆಟ್ಟಿ ಅವರು ಎನ್ಐಟಿ ಸುರತ್ಕಲ್ನಿಂದ ಪಿಎಚ್ಡಿ ಪಡೆದಿದ್ದು, ಅನೇಕ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.




































