ಕಾರ್ಕಳ : ಸಾಣೂರು ಗ್ರಾಮಸ್ಥರ ಸಂಘಟಿತ ಹೋರಾಟಕ್ಕೆ ಮಣಿದ ಹೆದ್ದಾರಿ ಪ್ರಾಧಿಕಾರವು ಸಾಣೂರಿನ ಜಡಿದ ಗುಡ್ಡೆಗೆ ಸುಮಾರು 60 ಮೀಟರ್ ತಡೆಗೋಡೆಯನ್ನು ನಿರ್ಮಿಸಲು ಡಿ.ಬಿ.ಎಲ್ ಕಂಪನಿಗೆ ನಿರ್ದೇಶನ ನೀಡಿದೆ.

ರಾ.ಹೆ _169 ಸಾಣೂರು ಬಿಕರ್ನ ಕಟ್ಟೆ ಚತುಷ್ಪಥ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಕಳೆದ ವರ್ಷ ಸಾಣೂರು ಯುವಕ ಮಂಡಲ ಕಟ್ಟಡದ ಮೈದಾನದ ಬಳಿ ಗುಡ್ಡ ಕಡಿದಿರುವ ಭಾಗದಲ್ಲಿ ಮಣ್ಣು ಜರಿಯದಂತೆ ತಡೆಗೋಡೆ ನಿರ್ಮಾಣ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರನ್ನು ಸಾಣೂರು ಗ್ರಾಮ ಪಂಚಾಯತ್ ಆಡಳಿತ ಮತ್ತು ಪರಿಸರದ ನಾಗರಿಕರು ಒತ್ತಾಯಿಸಿದ್ದರು. ಯಕ
ಗ್ರಾಮಸ್ಥರ ಬೇಡಿಕೆಯನ್ನು ಕಡೆಗಣಿಸಿ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಿದ್ದರೂ ತಡೆಗೋಡೆ ನಿರ್ಮಾಣ ಕಾರ್ಯದ ಬಗ್ಗೆ ದಿವ್ಯ ನಿರ್ಲಕ್ಷವನ್ನು ವಹಿಸಿದ್ದರು.
ಈ ಬಾರಿ ಮಳೆಗಾಲದ ಸಂದರ್ಭದಲ್ಲಿ ಗುಡ್ಡದ ಒಂದು ಪಾರ್ಶ್ವದ ಮಣ್ಣು ಕುಸಿಯತೊಡಗಿ, ಗುಡ್ಡದ ಮೇಲಿದ್ದ ಹೈಟೆನ್ಷನ್ ವಿದ್ಯುತ್ ಗೋಪುರ ಹಾಗೂ ಪಕ್ಕದಲ್ಲಿದ್ದ ಎರಡು ತಲಾ 50,000 ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕುಗಳು ಧರಶಾಯಿಯಾಗುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾಣೂರು ಗ್ರಾಮಸ್ಥರು ಪಟ್ಟು ಬಿಡದೆ ನಿರಂತರ ಸಂಘಟಿತ ಹೋರಾಟದ ಮೂಲಕ ಮಾನ್ಯ ಶಾಸಕರು ಸಂಸದರು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಅಪಾಯಕಾರಿ ಸ್ಥಳ ಪರಿಶೀಲನೆ ನಡೆಸಿ, ಸಾಮಾಜಿಕ ಜಾಲತಾಣ ,ಪತ್ರಿಕಾ ಮತ್ತು ದೃಶ್ಯಮಾಧ್ಯಮದ ಮೂಲಕ ನಿರಂತರ ಗುಡ್ಡ ಜರಿದು ಭಾರಿ ದುರಂತ ಸಂಭವಿಸುವ ಬಗ್ಗೆ ಜನ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ ರುವ ಫಲಸ್ವರೂಪವಾಗಿ ಕೊನೆಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ 60 ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಾಣ ಕಾರ್ಯವನ್ನು ನಡೆಸಲು ಕಾರ್ಯದೇಶವನ್ನು ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ರವರಿಗೆ ನೀಡಿದ್ದು, ಇದೀಗ ಜುಲೈ 25 ಗುರುವಾರದಂದು ಬೆಳಿಗ್ಗೆಯಿಂದಲೇ ತಡೆಗೋಡೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ.

ಮಳೆ ಸ್ವಲ್ಪ ಕಡಿಮೆಯಾದ ಕೂಡಲೇ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಒಂದು ತಿಂಗಳ ಒಳಗಾಗಿ ಸುಭದ್ರವಾದ ಸುಸಜ್ಜಿತ ತಡೆಗೋಡೆ ನಿರ್ಮಾಣ ಕಾರ್ಯವನ್ನು ಮುಗಿಸಿಕೊಡುತ್ತೇವೆ ಎಂದು ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರು ಗ್ರಾಮಸ್ಥರಿಗೆ ತಿಳಿಸಿರುತ್ತಾರೆ.
ಸಾಣೂರು ಪಂಚಾಯತ್ ಆಡಳಿತ ಹಾಗೂ ಸಾಣೂರು ಗ್ರಾಮಸ್ಥರ ಒಂದು ವರ್ಷಗಳ ಸುದೀರ್ಘಾವಧಿಯ ಸಂಘಟಿತ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಭೂಮಾಲಕರ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ
ಕಾಮತ್ ಹರ್ಷ ವ್ಯಕ್ತಪಡಿಸಿರುತ್ತಾರೆ.




































