ಅಪಘಾತವೋ? ಕೊಲೆಯೋ? ಇಬ್ಬರು ಯುವಕರು ಬಲಿ

Picture of RB NEWS

RB NEWS

Bureau Report

ಉಳ್ಳಾಲ, ಅ.19: ಓವರ್‌ಟೇಕ್ ಮಾಡುವ ಧಾವಂತದಲ್ಲಿ ಪಿಕಪ್ ವಾಹನವೊಂದು ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ವಿದ್ಯುತ್ ಕಂಬಕ್ಕೆ ಬಡಿದು ರಸ್ತೆಗೆ ಎಸೆಯಲ್ಪಟ್ಟ ಸ್ಕೂಟರ್‌ನಲ್ಲಿದ್ದ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಬೋಳಿಯಾರ್ ಸಮೀಪದ ಕುರ್ನಾಡು ಬಂಕ್ ಬಳಿ ನಡೆದಿದೆ.

ಉಳ್ಳಾಲ ತಾಲೂಕು ಕಿನ್ಯ ಗ್ರಾಮದ ಅರೆಬಿನಗರ, ಉಕ್ಕುಡ ನಿವಾಸಿಗಳಾದ ಮಹಮ್ಮದ್ ಅರ್ಫಾಝ್ (23) ಮತ್ತು ಮಹಮ್ಮದ್ ಜುನೈದ್ (22) ಮೃತಪಟ್ಟವರು.

ಮುರಿದು ಬಿದ್ದ ವಿದ್ಯುತ್ ಕಂಬ

ಸೋಮವಾರ ಸಂಜೆ ಬೋಳಿಯಾರ್ ಕಡೆಯಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಸ್ಕೂಟರ್‌ಗೆ ಹಿಂಬದಿಯಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ವಿದ್ಯುತ್ ಕಂಬಕ್ಕೆ ಬಡಿದಿದ್ದು, ಕಂಬವೇ ಮುರಿದು ಬಿದ್ದಿದೆ. ಸ್ಕೂಟರ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು.

ಗಂಭೀರ ಗಾಯಗೊಂಡಿದ್ದ ಅರ್ಫಾಝ್‌ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದಾರಿಮಧ್ಯೆಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮತ್ತೋರ್ವ ಸವಾರ ಜುನೈದ್‌ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತನು ಮೃತಪಟ್ಟಿದ್ದಾನೆ.

ಮಾತಿನ ಚಕಮಕಿ ಬಳಿಕ ಬೆನ್ನಟ್ಟಿ ಢಿಕ್ಕಿ?

ಈ ಅಪಘಾತದ ಹಿಂದೆ ಪ್ರತೀಕಾರದ ಉದ್ದೇಶವಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಅಪಘಾತಕ್ಕೂ ಮುನ್ನ ಬೋಳಿಯಾರ್‌ನಲ್ಲಿ ಪಿಕಪ್ ಚಾಲಕ ಮತ್ತು ಸ್ಕೂಟರ್ ಸವಾರರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಬಳಿಕ ಪಿಕಪ್ ಚಾಲಕ ಸ್ಕೂಟರ್ ಸವಾರರನ್ನು ಬೆನ್ನಟ್ಟಿ, ಓವರ್‌ಟೇಕ್ ಮಾಡಿ ಢಿಕ್ಕಿ ಹೊಡೆದಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಪಿಕಪ್ ಚಾಲಕ ಉದ್ದೇಶಪೂರ್ವಕವಾಗಿ ವಾಹನ ಢಿಕ್ಕಿ ಹೊಡೆಸಿ ಅಪಘಾತವೆಸಗಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಈ ಆರೋಪಗಳು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಅಪಘಾತದ ಬಳಿಕ ಪಿಕಪ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಪೊಲೀಸರಿಂದ ತನಿಖೆ

ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆ ಹಾಗೂ ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯಗಳು ದಾಖಲಾಗಿದ್ದು, ತನಿಖೆಗೆ ಮಹತ್ವದ ಸುಳಿವು ದೊರೆಯುವ ಸಾಧ್ಯತೆಯಿದೆ. ಅಪಘಾತದ ನೈಜ ಕಾರಣ ಹಾಗೂ ಪಿಕಪ್ ಚಾಲಕನ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕುಟುಂಬಗಳಿಗೆ ಮತ್ತೊಂದು ಆಘಾತ

ಮೃತ ಜುನೈದ್‌ನ ಸಹೋದರ ಕೋವಿಡ್ ಅವಧಿಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿದ್ದ ಎನ್ನಲಾಗಿದೆ. ಇನ್ನು ಅರ್ಫಾಝ್‌ನ ಸಹೋದರ ಕೆಲವು ವರ್ಷಗಳ ಹಿಂದೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮರದ ಕೊಂಬೆ ಬಿದ್ದು ಮೃತಪಟ್ಟಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಇಬ್ಬರು ಯುವಕರು ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಶೋಕ ಮೂಡಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top