
ಅತ್ತೂರು ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವ – 2026ಕ್ಕೆ ಚಾಲನೆ


ಕಾರ್ಕಳ : ಸಂತ ಸೆಬಾಸ್ಟಿಯನ್ ಹಬ್ಬದ ಅಂಗವಾಗಿ, ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವ–2026ರ ಪ್ರಯುಕ್ತ ನಡೆಯುವ ನವದಿನಗಳ ಪ್ರಾರ್ಥನಾ ಮಹೋತ್ಸವಕ್ಕೆ ಭಕ್ತಿಪೂರ್ವಕ ಚಾಲನೆ ನೀಡಲಾಯಿತು. ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ–ವೈಸಿಎಸ್ ಯುವ ನಿರ್ದೇಶಕರಾದ ವಂದನೀಯ ಫಾದರ್ ಸ್ಟೀವನ್ ಫರ್ನಾಂಡಿಸ್ ಅವರು ದೀಪ ಬೆಳಗಿಸುವ ಮೂಲಕ ಪ್ರಾರ್ಥನಾ ಮಹೋತ್ಸವವನ್ನು ಉದ್ಘಾಟಿಸಿದರು.
ಈ ಮೂಲಕ ಅತ್ತೂರು ಸಂತ ಲೋರೆನ್ಸರ ಬಸಿಲಿಕೆಯಲ್ಲಿ ಪೂಜೆ ವಿಧಾನದೊಂದಿಗೆ ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವದ ಅಂಗವಾಗಿ ನಡೆಯುವ ಪ್ರಾರ್ಥನಾ ಕಾರ್ಯಕ್ರಮಗಳು ಭಕ್ತಿಭಾವದಿಂದ ಆರಂಭಗೊಂಡವು.
ಕಾರ್ಯಕ್ರಮದಲ್ಲಿ ಸಂತ ಲೋರೆನ್ಸರ ಪುಣ್ಯಕ್ಷೇತ್ರದ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅತ್ತೂರು ಸಂತ ಲೋರೆನ್ಸರ ಪುಣ್ಯಕ್ಷೇತ್ರದ ನಿರ್ದೇಶಕರಾದ ರೆ. ಫಾದರ್ ಆಲ್ಬನ್ ಡಿಸೋಜಾ, ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ರಾಬಿನ್ ಸಾಂತ್ಮಯೆರ್, ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ನಾ, ನೂತನ ಉಪಾಧ್ಯಕ್ಷ ವಂದೇಶ್ ಮತ್ತಾಯಸ್ ಹಾಗೂ ನೂತನ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದರು.








































