


.

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ವಾರ್ಷಿಕ ಮಹೋತ್ಸವ: ಮೂರನೇ ದಿನ ಭಕ್ತಿಭಾವದ ಮಹಾಸಂಗಮ





ಕಾರ್ಕಳ : ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನವು ಸಾವಿರಾರು ಭಕ್ತಾದಿಗಳ ಭಕ್ತಿಭಾವದ ಮಹಾಸಂಗಮವಾಗಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ದಿನವಿಡೀ ಸುಮಾರು ಹತ್ತು ದಿವ್ಯ ಬಲಿಪೂಜೆಗಳು ನಡೆಯುತ್ತ, ಪುಣ್ಯಕ್ಷೇತ್ರದ ಆವರಣದಲ್ಲಿ ಆಧ್ಯಾತ್ಮಿಕ ವಾತಾವರಣ ತುಂಬಿ ತುಳುಕಿತು.
ಈ ವರ್ಷದ ಮಹೋತ್ಸವದ ಧ್ಯೇಯ ವಾಕ್ಯವಾಗಿರುವ “ನಾನು ನಿನ್ನನ್ನು ಪ್ರೀತಿಸಿದ್ದೇನೆ” ಎಂಬ ಸಂದೇಶದ ಆಧಾರದಲ್ಲಿ, ಬಡವರ ಬಗೆಗಿನ ಕಾಳಜಿ, ಮಾನವೀಯ ಸೇವೆ ಹಾಗೂ ಸಮಾಜದತ್ತ ಕ್ರೈಸ್ತರ ಜವಾಬ್ದಾರಿ ಕುರಿತು ಆಳವಾದ ಬೋಧನೆ ನೀಡಲಾಯಿತು. ಪ್ರೀತಿಯ ಸಾಕ್ಷಿಯಾಗಿ ಬಡವರೊಂದಿಗೆ ನಿಂತು, ದುರ್ಬಲರ ಕೈ ಹಿಡಿಯುವ ಕ್ರೈಸ್ತ ಜೀವನದ ಮಹತ್ವವನ್ನು ಯಾಜಕರು ವಿಶೇಷವಾಗಿ ಒತ್ತಿಹೇಳಿದರು.
ದಿನದ ಪ್ರಮುಖ ಸಾಂಭ್ರಮಿಕ ದಿವ್ಯ ಬಲಿಪೂಜೆಯನ್ನು ಅಲಹಾಬಾದ್ ಧರ್ಮಪ್ರಾಂತ್ಯದ ಪರಮಪೂಜ್ಯ ಲುವಿಸ್ ಮಸ್ಕರೇನ್ಹಸ್ ಅವರು ಅರ್ಪಿಸಿ, ಬಡವರೇ ಕ್ರಿಸ್ತನ ಪ್ರತಿರೂಪವಾಗಿರುವುದರಿಂದ ಅವರ ಕಡೆಗೆ ನಮ್ಮ ಜೀವನದ ಏಕಾಗ್ರತೆ ಇರಬೇಕು ಎಂದು ಸಂದೇಶ ನೀಡಿದರು. ವಿವಿಧ ಯಾಜಕರು ಸಹಭಾಗಿಯಾಗಿ ದಿವ್ಯ ಬಲಿಪೂಜೆ, ಆರಾಧನೆ ಹಾಗೂ ಭಕ್ತಿಕಾರ್ಯಗಳನ್ನು ನೆರವೇರಿಸಿದರು.
ಕಾರ್ಣಿಕ ಹಾಗೂ ಪವಾಡಗಳಿಗೆ ಪ್ರಸಿದ್ಧವಾಗಿರುವ ಅತ್ತೂರು ಪುಣ್ಯಕ್ಷೇತ್ರಕ್ಕೆ ವಿವಿಧ ಧರ್ಮದ ಭಕ್ತರು ಸಹ ಆಗಮಿಸಿ ಭಕ್ತಿಭಾವದಿಂದ ಭಾಗವಹಿಸಿದರು. ಭಕ್ತರು ಮೊಂಬತ್ತಿ ಬೆಳಗಿಸಿ, ಹರಕೆ ಸಲ್ಲಿಸಿ, ಸಂತ ಲಾರೆನ್ಸ್ ಅವರ ವಿಶೇಷ ಅವಶೇಷಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಪವಿತ್ರ ನೀರಿನ ಕೊಳದ ಬಳಿ ನೀರನ್ನು ಚಿಮುಕಿಸಿ, ಪುಷ್ಪಪ್ರಸಾದ ಹಾಗೂ ಪ್ರೋಕ್ಷ ತೀರ್ಥವನ್ನು ಸ್ವೀಕರಿಸಿ ತಮ್ಮ ನಂಬಿಕೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಮಹೋತ್ಸವದಲ್ಲಿ ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಪದ್ಮರಾಜ್ ಹೆಗ್ಡೆ, ದಿನೇಶ್ ಹೆಗ್ಡೆ, ಕೊಲ್ಲೂರು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಂದ್ರ ಶೆಟ್ಟಿ ಸೇರಿದಂತೆ ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್, ನಿಯೋಜಿತ ಉಪಾಧ್ಯಕ್ಷ ವಂದೀಶ್ ಮಥಾಯಸ್, ನಿಯೋಜಿತ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತಲಿನೊ, ಪಿಯುಸ್ ರೊಡ್ರಿಗಸ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು.
ಪುಣ್ಯಕ್ಷೇತ್ರವು ವೈಭವಯುತ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಬೆಳಕಿನ ಹೊಳಪಿನಲ್ಲಿ ದೇವಾಲಯವು ದಿವ್ಯ ಸ್ವರ್ಗಸೌಂದರ್ಯವನ್ನು ನೆನಪಿಸುವಂತಿತ್ತು. ಕುಟುಂಬ ಸಮೇತರಾಗಿ ಆಗಮಿಸಿದ ಸಾವಿರಾರು ಭಕ್ತಾದಿಗಳು ಪ್ರಾರ್ಥನೆ, ಭಕ್ತಿ ಮತ್ತು ಸಂಭ್ರಮದೊಂದಿಗೆ ಈ ಪವಿತ್ರ ಹಬ್ಬವನ್ನು ಆಚರಿಸಿದರು.
ಅತ್ತೂರು ಸಂತ ಲಾರೆನ್ಸ್ ಮಹೋತ್ಸವವು ಧಾರ್ಮಿಕ ಭಕ್ತಿಭಾವದ ಜೊತೆಗೆ ಸಾಮಾಜಿಕ ಸೇವೆ ಹಾಗೂ ಜನಸಾಮಾನ್ಯರ ಐಕ್ಯತೆಯನ್ನು ಪ್ರತಿಬಿಂಬಿಸುವ ಮಹತ್ತರ ಧಾರ್ಮಿಕ ಉತ್ಸವವಾಗಿ ಮೂಡಿಬಂದಿದೆ.


































