ಕಾರ್ಕಳ : ಅತ್ತೂರು ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವವು ಭಕ್ತಿಭಾವ ಹಾಗೂ ಸಾಂಭ್ರಮಿಕ ವಾತಾವರಣದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಮಹೋತ್ಸವದ ಕೊನೆಯ ದಿನ ಬಸಿಲಿಕಾ ಪುಣ್ಯಕ್ಷೇತ್ರಕ್ಕೆ ಅನೇಕ ಭಕ್ತಾದಿಗಳು ನಿರಂತರವಾಗಿ ಆಗಮಿಸಿ ತಮ್ಮ ಪಾಲಕ ಸಂತನಿಗೆ ವಂದನೆ ಸಲ್ಲಿಸಿದರು. ದಿನವಿಡೀ ಭಕ್ತಿಭಾವ ತುಂಬಿದ ವಾತಾವರಣ ನಿರ್ಮಾಣವಾಗಿತ್ತು. ಮಹೋತ್ಸವದ ಅಂಗವಾಗಿ ವಿವಿಧ ಯಾಜಕರು ಪವಿತ್ರ ಬಲಿಪೂಜೆಗಳನ್ನು ಅರ್ಪಿಸಿದರು. ಪ್ರಮುಖ ಸಾಂಭ್ರಮಿಕ ಬಲಿಪೂಜೆ ಬೆಳಿಗ್ಗೆ 10 ಗಂಟೆಗೆ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಪೀಟರ್ ಪೌಲ್ ಸಲ್ದಾನ್ಹಾ ಅವರು ಅರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ಬಾಸಿಲಿಕಾದ ರೆಕ್ಟರ್ ಹಾಗೂ ಅನೇಕ ಯಾಜಕರು ಸಹಭಾಗಿತರಾಗಿದ್ದರು. ತಮ್ಮ ಪ್ರವಚನದಲ್ಲಿ ಪರಮಪೂಜ್ಯರು “ನಾನು ನಿನ್ನನ್ನು ಪ್ರೀತಿಸಿದ್ದೇನೆ” ಎಂಬ ಜಗದ್ಗುರುಗಳ ಪ್ರೇಷಿತ ಪತ್ರದ ಆಧಾರದಲ್ಲಿ ಬಡವರ ಮೇಲಿನ ಪ್ರೀತಿ ಮತ್ತು ನಿರ್ವ್ಯಾಜ ಪ್ರೀತಿಯ ಮಹತ್ವವನ್ನು ವಿವರಿಸಿದರು. ದೇವರು ಮಾನವನನ್ನು ಯಾವುದೇ ಶರತ್ತುಗಳಿಲ್ಲದೆ ಪ್ರೀತಿಸುವಂತೆ ನಾವು ಸಹ ಪರಸ್ಪರ ಪ್ರೀತಿಸಬೇಕೆಂದು ಅವರು ಭಕ್ತರನ್ನು ಪ್ರೇರೇಪಿಸಿದರು. ಬಸಿಲಿಕಾದ ರೆಕ್ಟರ್ ವಂ. ಅಲ್ಬನ್ ಡಿಸೋಜ ಅವರು ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹೋತ್ಸವಕ್ಕೆ ಉದಾರ ದೇಣಿಗೆ ನೀಡಿದ ಭಕ್ತರು ಮತ್ತು ಧರ್ಮಕೇಂದ್ರದ ಸದಸ್ಯರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಧರ್ಮ ರಕ್ಷಣೆ’ ಎಂಬ ಯಕ್ಷಗಾನವನ್ನು ‘ಕಲಾಕರ್, ಮಂಗಳೂರು’ ತಂಡವು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ರಾತ್ರಿ ವೇಳೆ ಸಂತ ಲಾರೆನ್ಸರ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ಮೂಲಸ್ಥಾನಕ್ಕೆ ಭವ್ಯವಾಗಿ ಮರಳಿಸಲಾಯಿತು. ಧ್ವಜಾವರೋಹಣದೊಂದಿಗೆ 2026ರ ಸಂತ ಲಾರೆನ್ಸರ ವಾರ್ಷಿಕ ಹಬ್ಬಕ್ಕೆ ಅಧಿಕೃತ ಮುಕ್ತಾಯವಾಯಿತು. ವಿವಿಧ ಧರ್ಮಕೇಂದ್ರಗಳ ಸ್ವಯಂಸೇವಕರು ಹಾಗೂ ಸಂಘಟಕರ ಸಹಕಾರದಿಂದ ಮಹೋತ್ಸವವು ಶಿಸ್ತಿನಿಂದ ಹಾಗೂ ಯಶಸ್ವಿಯಾಗಿ ನೆರವೇರಿತು.