ಅಡಿಕೆಯಲ್ಲಿ ಚಂಡೆ ಕೊಳೆರೋಗ – ನಿಯಂತ್ರಣ ಹೇಗೆ?

Picture of RB NEWS

RB NEWS

Bureau Report


ಕಾರ್ಕಳ : ತಾಲ್ಲೂಕಿನಾದ್ಯಂತ ಇತ್ತೀಚಿಗೆ ಅಡಿಕೆ ತೋಟಗಳಲ್ಲಿ ಚಂಡೆಕೊಳೆ ರೋಗ (crown rot)
ಕಾಣಿಸಿಕೊಳ್ಳುತ್ತಿದ್ದು ದೊಡ್ಡ ಪ್ರಮಾಣದಲ್ಲಿ ರೈತರಿಗೆ ನಷ್ಟವನ್ನುಂಟು ಮಾಡುತ್ತಿದೆ. ಭಾದಿತ ಮರಗಳು ಕ್ರಮೇಣ ಸತ್ತು
ಹೋಗುವುದರಿಂದ ರೈತರಿಗೆ ಹೆಚ್ಚು ನಷ್ಟ ಸಂಭವಿಸುತ್ತಿದೆ. ಅಡಿಕೆ ಕೊಳೆ ರೋಗಕ್ಕೆ ಕಾರಣವಾಗುವ ಶೀಲೀಂದ್ರ ಪೈಟೋಪ್ತೆರಾ
ಮಿಡಿಯೈ ಶೀಲೀಂದ್ರವೇ ಈ ರೋಗಕ್ಕೂ ಕಾರಣವಾಗಿದ್ದು, ಹೆಚ್ಚು ಕಾಯಿ ಕೊಳೆ ಭಾದಿತ ತೋಟಗಳಲ್ಲಿ ಈ ರೋಗ ಕಂಡು
ಬರುತ್ತದೆ. ಈ ರೋಗವು ಅಗಸ್ಟ್- ಸೆಪ್ಟೆಂಬರ್‍ನಿಂದ ಪ್ರಾರಂಭವಾಗಿ ತೋಟಗಳಲ್ಲಿ ಡಿಸೆಂಬರ್-ಜನವರಿ ವರೆಗೂ ಕಂಡು
ಬರುತ್ತದೆ. ಬಿಸಿಲು-ಮಳೆ, ರಾತ್ರಿಯ ಕಡಿಮೆ ಉಷ್ಣಾಂಶ ಹಾಗೂ ಮಂಜು ಬೀಳುವಿಕೆ ಈ ರೋಗದ ಶೀಲೀಂದ್ರದ ಬೆಳೆವಣಿಗೆಗೆ
ಸಹಕಾರಿ. ಪ್ರಾರಂಭದ ಲಕ್ಷ್ಮಣವಾಗಿ ಹಸಿರು ಗರಿಗಳು ಜೋತು ಬೀಳುತ್ತವೆ. ಕ್ರಮೇಣ ಅವುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.
ಸುಳಿ ಗರಿ ತುಂಬಾ ಸಮಯ ಹಸಿರಾಗಿ ಉಳಿದು ತದನಂತರ ಒಣಗಿ ಚಂಡೆ ಭಾಗ ಕಳಚಿ ಬೀಳುತ್ತದೆ. ಅಡಿಕೆ ಹಾಳೆಯ ಒಳ ಬುಡ
ಭಾಗದಲ್ಲಿ ಕಂದು ಬಣ್ಣದ ಭಾಗ ಕಾಣಬಹುದು. ಅಡಿಕೆ ಹಾಳೆಯು ಕಾಂಡಕ್ಕೆ ಅಂಟಿಕೊಳ್ಳುವ ಭಾಗದಲ್ಲಿ ಶೀಲೀಂದ್ರ ಪ್ರವೇಶಿಸಿ
ಕಾಂಡದ ಒಳಭಾಗವನ್ನು ಪೂರ್ಣ ಕೊಳೆಯುವಂತೆ ಮಾಡುತ್ತದೆ.

  1. ಸಮರ್ಪಕ ಬಸಿಗಾಲುವೆಗಳ ನಿರ್ವಹಣೆ.
  2. ಮಣ್ಣು ಪರೀಕ್ಷೆ ಆಧಾರದಲ್ಲಿ ಶೀಫಾರಸ್ಸು ಮಾಡಿದ ಪೋಷಕಾಂಶಗಳನ್ನು ನಿಯಮಿತವಾಗಿ ನೀಡುವುದು.
  3. ಬೇವಿನ ಹಿಂಡಿ ಹಾಗೂ ಟ್ರೈಕೋಡರ್ಮಾ ಮಿಶ್ರಣವನ್ನು ಮಳೆಗಾಲದ ಪೂರ್ವದಲ್ಲಿ ಅಡಿಕೆ ಮರಗಳಿಗೆ ನೀಡುವುದು.
  4. ಕೊಳೆರೋಗ ಭಾದಿತ ಸಿಂಗಾರಗಳನ್ನು ಸಂಗ್ರಹಿಸಿ ಸುಡುವುದು.
  5. ಚಂಡೆ ಕೊಳೆಭಾದೆಯಿಂದ ಸತ್ತಂತಹ ಮರಗಳನ್ನು ಕತ್ತರಿಸಿ ಸುಡುವುದು.
  6. ಪ್ರಾರಂಭಿಕ ಹಂತದ ರೋಗ ಲಕ್ಷಣ ಹೊಂದಿರುವ (ಹಸಿರು ಗರಿಗಳು ಜೋತು ಬೀಳುವುದು) ಮರಗಳ ಕುಬೆ ಭಾಗಕ್ಕೆ ಶೇ.
    10ರ ಬೋರ್ಡೊ ಪೇಸ್ಟ್ ಹಚ್ಚುವುದು ಹಾಗೂ ಸುತ್ತಲಿನ ಮರಗಳ ಕುಬೆ ಭಾಗಕ್ಕೆ ಶೇ. 1 ರ ಬೋರ್ಡೊ ಸಿಂಪರಣೆ
    ಮಾಡುವುದು.
  7. ಪ್ರಾರಂಭಿಕ ಹಂತದ ರೋಗ ಲಕ್ಷಣ ಹೊಂದಿರುವ ಮರಗಳ ಎಲೆಗಳಿಗೆ ಮೆಟಾಲಾಕ್ಸಿಲ್ 35% – 1.50 ಗ್ರಾಂ 1 ಲೀಟರ್
    ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು. ಸಿಂಪರಣೆ ಮಾಡಿದ ತರುವಾಯು ಕನಿಷ್ಠ 3-4 ಗಂಟೆಗಳ ಬಿಸಿಲು ಅವಶ್ಯ.
  8. ರೈತರು ನಿಯಮಿತವಾಗಿ ಅಡಿಕೆ ಕೊಳೆ ನಿಯಂತ್ರಣಕ್ಕೆ ಸಿಂಪಡಿಸುವ ಬೋರ್ಡೊ ದ್ರಾವಣವನ್ನು ಮಳೆ ಪ್ರಾರಂಭವಾದ
    ನಂತರದಲ್ಲಿ ಮಾತ್ರ ನೀಡುವುದಲ್ಲದೇ, ಮಳೆಗಾಲ ಪ್ರಾರಂಭದ ಪೂರ್ವದಲ್ಲಿ ನೀಡಬೇಕು ಹಾಗೂ 2-3ನೇ ಬಾರಿ
    ಬೋರ್ಡೊ ಸಿಂಪರಣೆ ಸಮಯದಲ್ಲಿ ಕುಬೆ ಭಾಗಕ್ಕೂ ಸಿಂಪರಣೆ ಮಾಡುವುದು ಸಹಕಾರಿ.

– ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
ಉಡುಪಿ ಜಿಲ್ಲಾ ಪಂಚಾಯತ್, ಕಾರ್ಕಳ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top