ಅಕ್ಷರ ದಾಸೋಹ ನೌಕರರ ಹಕ್ಕುಗಳನ್ನು ರಕ್ಷಿಸಲು ಒತ್ತಾಯ: ಮಂಗಳೂರಿನಲ್ಲಿ ಪ್ರತಿಭಟನೆ
RB NEWS
Bureau Report
ಅಕ್ಷರ ದಾಸೋಹ ನೌಕರರ ಹಕ್ಕುಗಳನ್ನು ರಕ್ಷಿಸಲು ಒತ್ತಾಯ: ಮಂಗಳೂರಿನಲ್ಲಿ ಪ್ರತಿಭಟನೆ
ಮಂಗಳೂರು, ಫೆ.12: ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸಿಐಟಿಯು (CITU) ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಆಗ್ರಹಿಸಿದರು. ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಅಕ್ಷರ ದಾಸೋಹ ನೌಕರರ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯಾದ್ಯಂತ ಅಕ್ಷರ ದಾಸೋಹ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ 13 ವರ್ಷಗಳಿಂದ ಬಿಸಿಯೂಟ ಯೋಜನೆಗೆ ಕೇಂದ್ರ ಸರ್ಕಾರ ಅನುದಾನವನ್ನು ಹೆಚ್ಚಿಸದೆ, ಬದಲಿಗೆ ಕಡಿತ ಮಾಡಿರುವುದನ್ನು ಅವರು ಟೀಕಿಸಿದರು. ಈ ಬಾರಿಯ ಬಜೆಟ್ನಲ್ಲಿಯೂ ಯೋಜನೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. ಹೊಸ ಕಾರ್ಮಿಕ ಸಂಹಿತೆಗಳ ಜಾರಿಯಿಂದ ಕಾರ್ಮಿಕ ಸಂಘಟನೆ ರಚನೆ, ಚೌಕಾಸಿ ಹಾಗೂ ಮುಷ್ಕರ ನಡೆಸುವುದು ಅಪರಾಧವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಬಲಪಂಥೀಯ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಹೇಳಿದರು. ಬಿಸಿಯೂಟ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು, ಕೆಲಸದ ಭದ್ರತೆ ಒದಗಿಸಬೇಕು ಹಾಗೂ ತಿಂಗಳಿಗೆ ರೂ.10,000 ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು. ಯಾವುದೇ ಕಾರಣಕ್ಕೂ ಶಾಲೆಗಳಿಗೆ ಇಸ್ಕಾನ್ ಸಂಸ್ಥೆಯಿಂದ ಆಹಾರ ಪೂರೈಕೆ ಮಾಡಲು ಅವಕಾಶ ನೀಡಬಾರದು ಎಂದು ಕೂಡ ಒತ್ತಾಯಿಸಿದರು. ರಾಜ್ಯ ಸರ್ಕಾರ ಬಜೆಟ್ನಲ್ಲಿ ಬಿಸಿಯೂಟ ಕಾರ್ಮಿಕರ ವೇತನವನ್ನು ಹೆಚ್ಚಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷೆ ಭವ್ಯ, ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ಭಾಗವಹಿಸಿದ ಎಲ್ಲಾ ಕಾರ್ಮಿಕರನ್ನು ಅಭಿನಂದಿಸಿದರು. ಪ್ರತಿಭಟನೆಯಲ್ಲಿ ಉಮಾವತಿ, ಶಭಾನಾಬಾನು, ರೇಖಾಲತಾ, ಆಸ್ಮಾ, ಶಾಲಿನಿ ಸೇರಿದಂತೆ ಹಲವರು ನೇತೃತ್ವ ವಹಿಸಿದ್ದರು.