ಸ್ವರ್ಗ – ನರಕ ಎಲ್ಲಿದೆ, ಯಾವುದು ?

Picture of RB NEWS

RB NEWS

Bureau Report

ವಾರದ ಬೆಳಕು

ಪುರಾಣ ಕಥೆಗಳಲ್ಲಿ ಬರೆಯಲಾದ, ಹೇಳಲಾಗುವ, ವರ್ಣಿಸಲಾದಂಥ ಸ್ವರ್ಗ – ನರಕ ನಿಜಕ್ಕೂ ಇದೆಯೇ, ಇದ್ದರೆ ಎಲ್ಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸಹಜವಾದ, ಸರಳವಾದ, ನೇರವಾದ ಉತ್ತರವೆಂದರೆ “ಇಲ್ಲ” ಅಥವಾ “ಗೊತ್ತಿಲ್ಲ” ಎಂಬುದೇ ಆಗಿರುತ್ತದೆ.

ಕಣ್ಣಿಗೆ ಕಾಣದ ಸ್ವರ್ಗಕ್ಕಾಗಲೀ, ನರಕಕ್ಕಾಗಲೀ ಹೋಗಿ ಬಂದವರು ಯಾರಿಲ್ಲ. ಕಣ್ಣಿಗೆ ಕಾಣದ ಸರ್ಗ – ನರಕಗಳ ಪರಿಮಳವನ್ನಾಗಲೀ, ದುರ್ವಾಸನೆಯನ್ನಾಗಲೀ ಆಘ್ರಾಣಿಸಿದವರೂ ಇಲ್ಲ. ಸ್ವರ್ಗ – ನರಕದಲ್ಲಿದ್ದವರ ಜೊತೆಗೆ ಭೂಮಿಯಲ್ಲಿ ಜೀವಂತವಿದ್ದವರು ಯಾರೊಬ್ಬರೂ ಇದುವರೆಗೂ ಮಾತನಾಡಿದ್ದೂ ಇಲ್ಲ. ಅಲ್ಲಿದ್ದವರ ಯಾವುದೇ ರೀತಿಯ ಧ್ವನಿಯನ್ನೂ ಇದುತನಕ ಯಾರೂ ಆಲಿಸಿದ್ದೂ ಇಲ್ಲ.

ಪುರಾಣ ಕರ್ತೃಗಳು, ಕವಿಗಳು, ವಿದ್ವಾಂಸರು ಕಲ್ಪಿಸಿಕೊಂಡು, ಊಹಿಸಿಕೊಂಡು ಬರೆಯಲಾದ ಭ್ರಮಾಲೋಕವೊಂದನ್ನು ಎಲ್ಲರೂ “ಇದೆ”, “ಇರಬಹುದು” ಎಂದು ನಂಬಿಕೊಂಡು ಬರಲಾಗಿದೆಯಷ್ಟೆ. ಬರೆಯುವವರು ನೂರಾರು ವರ್ಷಗಳಿಂದ “ಇದೆ” ಎಂಬಂತೆ ಬರೆದುಕೊಂಡು ಬಂದಿದ್ದಾರೆ. ಹರಿಕಥೆ, ಯಕ್ಷಗಾನ, ನಾಟಕ, ಪ್ರವಚನ, ಧಾರ್ಮಿಕ ಭಾಷಣಗಳ ಸಹಿತ ವಿವಿಧ ಮಾಧ್ಯಮಗಳ ಮೂಲಕ “ಇದೆ” ಎಂಬಂತೆಯೇ ವರ್ಣಿಸಿ ಕೇಳುಗರ ಕಿವಿಗಳಿಗೆ, ಮನಸ್ಸುಗಳಿಗೆ ಪರಿಣಾಮಕಾರಿಯಾಗಿ ವರ್ಗಾಯಿಸಲು ಯಶಸ್ವಿಯಾಗಿದೆ.

ವಿದ್ವಾಂಸರು, ಕವಿಗಳು, ಮತ ಧರ್ಮ ಪಂಡಿತರು, ಮುಖ್ಯಸ್ಥರು, ಮತಗ್ರಂಥಗಳು (ಬಹುತೇಕ ಎಲ್ಲಾ ಮತಧರ್ಮಗಳ ಮತಗ್ರಂಥಗಳಲ್ಲೂ ಈ ಕಲ್ಪನೆ ಇದೆ) ಹೇಳಿದ್ದು, ಪ್ರಚುರಗೊಂಡ, ಕಣ್ಣಿಗೆ ಕಾಣಿಸದ ಸ್ಥಳಗಳನ್ನು, ವಿಷಯಗಳನ್ನು, ಹೆಸರುಗಳನ್ನು, ವ್ಯಕ್ತಿತ್ವಗಳನ್ನು ಯಾವತ್ತೂ, ಹೆಚ್ಚಿನವರೂ ಸತ್ಯ, ಇದೆ, ಇದ್ದಿರಬಹುದು ಎಂದು ನಂಬುವುದು ಹೆಚ್ಚಾಗಿ ನಡೆದಿದೆ. ಯೋಚಿಸುವ, ಪ್ರಶ್ನಿಸುವ, ವಿಮರ್ಶಿಸುವ, ಅಧ್ಯಯನ ನಡೆಸುವ, ವಿವೇಚನಾ ಗುಣ – ಸ್ವಭಾವ – ಅಭ್ಯಾಸ ಕಡಿಮೆಯಿದ್ದಾಗ ಕಲ್ಪನೆ, ಭ್ರಮೆಗಳನ್ನು ಬಾಲಿಶವಾಗಿ ನಂಬುವುದು, ಒಪ್ಪುವುದು ನಡೆಯುವುದು ಸಹಜವಾಗಿದೆ.

ಕೆಲ ಮಂದಿ ಋಷಿ ಮುನಿಗಳ ಸಹಿತ ಈಗಾಗಲೇ ಆಗಿಹೋದ ಸಮಾಜಸುಧಾರಕನೇಕರು ಸ್ವರ್ಗ -ನರಕಗಳೆಂಬ ಕಾಲ್ಪನಿಕ ಭ್ರಮೆಗಳನ್ನು ಯಾವುದೇ ಮುಲಾಜಿಲ್ಲದೆ ಸಾರಾಸಗಟು ನಿರಾಕರಿಸಿರುವುದು, ತಿರಸ್ಕರಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ.

ಸ್ವರ್ಗ – ನರಕ ಎಂಬುದು ಒಂದು ಪಕ್ಷ ಇದ್ದರೆ, ಅದು ನಿತ್ಯ ಜೀವನದಲ್ಲಿ ಎಂದು ತಿಳಿದುಕೊಳ್ಳಬಹುದು. ಹುಟ್ಟು – ಸಾವುಗಳ ನಡುವೆ, ಬದುಕಿನಲ್ಲಿ ಅನುಭವಿಸುವ ಸುಖ – ದುಃಖ, ಆರೋಗ್ಯ – ಅನಾರೋಗ್ಯ, ಮಾನಸಿಕ – ದೈಹಿಕ ವೇದನೆ – ಸಂತೋಷ – ಸಂತೃಪ್ತಿ – ನೆಮ್ಮದಿ ಇತ್ಯಾದಿಗಳೇ ಸ್ವರ್ಗ – ನರಕ ಎಂದು ಭಾವಿಸಬಹುದು. ಇವುಗಳನ್ನು ಹೊರತುಪಡಿಸಿದ ಸ್ಚರ್ಗ – ನರಕ ಇದೆ ಎಂದು ನಂಬುವುದನ್ನು ಮೌಢ್ಯದ, ಅಂಧ ಶ್ರದ್ಧೆಯ ಪಟ್ಟಿಗೆ ಸೇರಿಸಬಹುದು.

ಪುರಾಣೋತ್ತರ ರಾಜ ಪ್ರಭುತ್ವ ಕಾಲದಲ್ಲಿ, ನಂತರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೈನಿಕರು, ಪೊಲೀಸರು, ಸೆರೆಮನೆ ಇತ್ಯಾದಿಗಳು ಜನರನ್ನು ಭಯಪಡಿಸಲು, ಪ್ರಭುತ್ವಗಳಿಗೆ ಜನರನ್ನು ಅಣಿಯಾಗಿಸಲು, ಧಮನಿಸಲು ಇರುವಂತೆ, ಪುರಾಣ ಕಾಲದಲ್ಲಿ ಪುರಾಣ ರಚಿಸಿದ ಒಂದು ನಿರ್ಧಿಷ್ಟ ವರ್ಗದ ಮಂದಿ ಇತರರನ್ನು ತಮ್ಮ ಅಡಿಯಾಳನ್ನಾಗಿ ಮಾಡಲು, ಇಡಲು ಸ್ವರ್ಗ – ನರಕಗಳನ್ನು ಸೃಷ್ಟಿಸಿರಬಹುದು ಎನ್ನಬಹುದು.

ಏನೇ ಇದ್ದರೂ, ಆದರೂ ಈ ಸ್ವರ್ಗ – ನರಕಗಳು ಕಾಲ್ಪನಿಕ ಭ್ರಮಾಲೋಕ ಎನ್ನುವುದೇ ಹೆಚ್ಚು ವಾಸ್ತವ. ಮನೋರಂಜನೆಗೆ ಬೇಕಾದರೆ ಇವುಗಳಿರಲಿ, ಇರಬಹುದು. ಆದರೆ ಯಾರನ್ನೂ ಶೋಷಣೆಗೆ ಈಡುಮಾಡಲು ಇದು ಅಸ್ತ್ರವಾಗಬಾರದು. ಆದರೂ ಈಗಲೂ ಶೋಷಿಸುವ ವರ್ಗದ ನಿರ್ಧಿಷ್ಟ ಜನರು ಇವುಗಳನ್ನು ಮುಂದಿಟ್ಟುಕೊಂಡೇ ತಮ್ಮ ಹೊಟ್ಟೆ ತುಂಬಿಸುವುದರ ಜೊತೆಗೆ ಸಂಪತ್ತು ಸಂಗ್ರಹಿಸುತ್ತಿರುವುದು ಮತ್ತು ಈಗಲೂ ಮೌಢ್ಯದಲ್ಲಿ ಬಿದ್ದಿರುವ ದೊಡ್ಡ ಸಂಖ್ಯೆಯ ಜನರು ಈ ಕಲ್ಪನೆಯ ಭ್ರಮಾಲೋಕವನ್ನೇ ಇರಬಹುದೆಂದು ನಂಬಿಕೊಂಡು ಅಂಧಾಚರಣೆಗಳಿಗೆ ಜೋತುಬಿದ್ದು ಕಷ್ಟ – ನಷ್ಟ ಅನುಭವಿಸುತ್ತಿರುವುದು ನಿಜಕ್ಕೂ ವುಷಾದನೀಯ.

~ ಶ್ರೀರಾಮ ದಿವಾಣ, ಉಡುಪಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top