ರಿಯಲ್ ಎಸ್ಟೇಟ್ ಹೆಸರಿನಲ್ಲಿ ಭಾರೀ ಮೋಸ: ಅಶ್ಲೀಲ ವಿಡಿಯೊ ಬ್ಲ್ಯಾಕ್‌ಮೇಲ್ ಜಾಲ ಬಯಲು

Picture of RB NEWS

RB NEWS

Bureau Report

ಉಡುಪಿ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಂಟಿ ಹೂಡಿಕೆ ಹೆಸರಿನಲ್ಲಿ ₹70 ಲಕ್ಷ ಹಣ ಪಡೆದು ವಂಚನೆ ಎಸಗಿದ ಪ್ರಕರಣದ ಜೊತೆಗೆ ಬ್ಲ್ಯಾಕ್‌ಮೇಲ್ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಉಡುಪಿ ಮೂಲದ ದೂರುದಾರರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿತೆ ಜೀನತ್ ಇಬ್ರಾಹಿಂ ಅವರ ಪರಿಚಯವಾಗಿತ್ತು. ನಂತರ ಇಬ್ಬರೂ ಸೇರಿ ಉಡುಪಿಯಲ್ಲಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿಯನ್ನು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಆರೋಪಿತೆಯ ಮಾತು ನಂಬಿದ ದೂರುದಾರರು ಹೂಡಿಕೆ ಉದ್ದೇಶದಿಂದ ₹70 ಲಕ್ಷ ಹಣ ನೀಡಿದ್ದರು. ಆದರೆ, ಜಮೀನು ಖರೀದಿಗೆ ಬಳಸಬೇಕಿದ್ದ ಈ ಹಣವನ್ನು ಆರೋಪಿತೆ ತನ್ನ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚನೆ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ದೂರುದಾರರು ತಮ್ಮ ಕಚೇರಿಯನ್ನು ಮುಚ್ಚುವ ವೇಳೆ ಅಲ್ಲಿದ್ದ ಕೆಲವು ರಹಸ್ಯ ಕಡತಗಳು ಮತ್ತು ಪೆನ್‌ಡ್ರೈವ್‌ಗಳು ದೊರೆತಿದ್ದು, ಅವುಗಳಲ್ಲಿ ಹಲವಾರು ಪ್ರಭಾವಿ ವ್ಯಕ್ತಿಗಳ ಖಾಸಗಿ ಹಾಗೂ ಅಶ್ಲೀಲ ಛಾಯಾಚಿತ್ರಗಳು ಮತ್ತು ವಿಡಿಯೊಗಳು ಇರುವುದಾಗಿ ತಿಳಿಸಲಾಗಿದೆ.

ಹಣವನ್ನು ವಾಪಸ್ ಕೇಳಿದಾಗ ಆರೋಪಿತೆ ದೂರುದಾರರ ಹೊಸ ಕಚೇರಿಗೆ ತೆರಳಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಅಲ್ಲದೆ, ತನ್ನ ಬಳಿ ದೂರುದಾರರ ಅಶ್ಲೀಲ ವಿಡಿಯೊಗಳಿವೆ ಎಂದು ಹೇಳಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ದೂರುದಾರರ ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿ ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಸಬೀನಾ ಇಲಿಯಾಸ್ ಸೇರಿದಂತೆ ಇತರರು ಆರೋಪಿತೆಯೊಂದಿಗೆ ಸೇರಿ ಅಕ್ರಮ ಹಣ ವಸೂಲಿ ಜಾಲ ನಡೆಸುತ್ತಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

ಈ ದೂರಿನ ಆಧಾರದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 79/2026ರಡಿ ಬಿಎನ್‌ಎಸ್ ಕಲಂ 308(6), 351(2), 318(2) ಮತ್ತು 3(5) ಅನ್ವಯ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಗೆ ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ) ಭರತೇಶ್ ಕಂಕಣವಾಡಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಜುಲೈ 2ರಂದು ಆರೋಪಿತೆ ಜೀನತ್ ಇಬ್ರಾಹಿಂ (ಪತಿ: ಅಬ್ದಲ್ ಸಲಾಂ) ಅವರನ್ನು ಪಡುಬಿದ್ರೆಯ ಕಂಚಿನಡ್ಕದಲ್ಲಿರುವ ಬಾಡಿಗೆ ಮನೆಯಿಂದ ಬಂಧಿಸಿದೆ.

ಬಂಧಿತ ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಈ ರೀತಿಯ ಮೋಸ ಅಥವಾ ವಂಚನೆಗೆ ಒಳಗಾದವರು ಇದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top