ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಕಾರ್ಕಳದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ
RB NEWS
Bureau Report
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಕಾರ್ಕಳದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ
ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಕರಾವಳಿ ಭಾಗದ ನಿರ್ಲಕ್ಷ್ಯವನ್ನು ಖಂಡಿಸಿ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶನಿವಾರ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆಗಳು ನಡೆಯುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಶಾಸಕ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಕ್ಷೇತ್ರದ ಸುಮಾರು 35 ಕಡೆಗಳಲ್ಲಿ ಈ ಪ್ರತಿಭಟನೆಗಳು ನಡೆಯುವಂತಾಯಿತು. ಬಜಗೋಳಿ ಪ್ರದೇಶದ ಮುಡಾರು ಗ್ರಾಮ ಸಮಿತಿ ವತಿಯಿಂದ ಆಯೋಜಿಸಲಾದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್ ಅವರು ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದರು. ಕಳೆದ ಮೂರು ವರ್ಷಗಳಲ್ಲಿ ನಾಲ್ಕು ಬಜೆಟ್ ಮಂಡಿಸಿದರೂ ಕರಾವಳಿ ಭಾಗದ ಅಭಿವೃದ್ಧಿಗೆ ನಯಾಪೈಸೆಯೂ ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ಬಿಜೆಪಿ ಆಡಳಿತಾವಧಿಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಪರ್ವಕ್ಕೆ ಈಗಿನ ಸರ್ಕಾರ ಬ್ರೇಕ್ ಹಾಕಿದೆ ಎಂದು ಅವರು ಕಿಡಿಕಾರಿದರು. ವಿದ್ಯುತ್ ಬಿಲ್ ಗಗನಕ್ಕೇರಿದ್ದು, ಆರ್ಟಿಸಿ ದರ ಹೆಚ್ಚಳವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರಿಗೆ ಆಶ್ರಯ ಮನೆಗಳು ದೊರೆಯುತ್ತಿಲ್ಲ. ಮರಳು ಸಮಸ್ಯೆಯಿಂದ ಕಟ್ಟಡ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಗುಲಗಳ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ ಅವರು, ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಅಭಿವೃದ್ಧಿ ಕಾರ್ಯಗಳ ಕ್ರೆಡಿಟ್ ಪಡೆಯಲು ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು. ಪ್ರವಾಸೋದ್ಯಮ ಕ್ಷೇತ್ರಕ್ಕೂ ಹಾನಿ ಉಂಟುಮಾಡಲಾಗಿದೆ ಎಂದು ಅವರು ಆರೋಪಿಸಿದರು. ಈ ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.