
ಮೂಡುಬಿದಿರೆಯಲ್ಲಿ ೨೩ನೇ ವರ್ಷದ
‘ಕೋಟಿ-ಚೆನ್ನಯ ಹೊನಲು ಬೆಳಕಿನ
ಜೋಡುಕರೆ ಕಂಬಳ
ಮೂಡುಬಿದಿರೆ: ತುಳುನಾಡಿನ ಸುಪ್ರಸಿದ್ಧ ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ ಕೋಟಿ-ಚೆನ್ನಯ ೨೩ನೇ ವರ್ಷದ ಹೊನಲು ಬೆಳಕಿನ ಬಯಲು ಕಂಬಳೋತ್ಸವ ಶಾಸಕ ಉಮಾನಾಥ ಎ. ಕೋಟ್ಯಾನ್ ನೇತೃತ್ವದಲ್ಲಿಜನವರಿ ೩೧ರಂದು ಪೂರ್ವಾಹ್ನ ಗಂಟೆ ೭.೦೦ರಿಂದ ನಡೆಯಲಿದೆ.
ಅಂದು ಪೂರ್ವಾಹ್ನ ಮೂಡುಬಿದಿರೆ ಚೌಟರ ಅರಮನೆ ಕುಲದೀಪ ಎಂ. ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಂಬಳೋತ್ಸವವನ್ನು ಅಲಂಗಾರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇ|ಮೂ| ಈಶ್ವರ ಭಟ್, ಅಲಂಗಾರು ಚರ್ಚ್ನ ಧರ್ಮಗುರು ವಂ| ಫಾ| ಮೆಲ್ವಿನ್ ನೊರೊನ್ಹಾ, ಪುತ್ತಿಗೆ ನೂರಾನಿ ಮಸ್ಜಿದ್ನ ಮೌಲಾನಾ ಝೀಯಾವುಲ್ಲಾ ಹಕ್, ಕುಂಟಾಡಿ ಸುಧೀರ್ ಹೆಗ್ಡೆಯವರು ಉದ್ಘಾಟಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸಭಾ ವೇದಿಕೆಯನ್ನು ಉದ್ಘಾಟಿಸಲಿದ್ದು, ಆಧ್ಯಾತ್ಮಿಕ ಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮೀಜಿ ದೀಪ ಪ್ರಜ್ವಲನೆಗೈಯಲಿದ್ದಾರೆ. ರಾಣಿ ಅಬ್ಬಕ್ಕ ದೇವಿಯ ಕುರಿತು ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಉಪನ್ಯಾಸ ನೀಡಲಿದ್ದಾರೆ. ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕ ಅಮರ್ಕೋಟೆಯವರಿಗೆ ಗೌರವ ಸನ್ಮಾನ ನಡೆಯಲಿದೆ. ಅಂದು ಸಾಯಂಕಾಲ ೫.೦೦ ಗಂಟೆಗೆ ಫೆಬಿಯನ್ ಕೊಲಾಸೋ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಆಂಧ್ರ ಪ್ರದೇಶ ಘನತೆವೆತ್ತ ರಾಜ್ಯಪಾಲರು ಹಾಗೂ ನಿವೃತ್ತ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು ನ್ಯಾ.ಮೂ. ಅಬ್ದುಲ್ ನಝೀರ್ ನೆರವೇರಿಸಲಿದ್ದಾರೆ. ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ, ದ.ಕ. ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡುರಾವ್ ಗೌರವ ಉಪಸ್ಥಿತಿ ಹೊಂದಲಿದ್ದಾರೆ. ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಗೌರವ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಮತ್ತು ನಟ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೋ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವಿ. ಸುನಿಲ್ ಕುಮಾರ್, ರಾಜೇಶ್ ನಾಕ್, ಡಾ. ವೈ. ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ಹರೀಶ್ ಪೂಂಜ, ಅಶೋಕ್ ಕುಮಾರ್ ರೈ, ಭಾಗೀರತಿ ಮುರುಳ್ಯ, ಯಶ್ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯರಾದ ಡಾ| ಧನಂಜಯ ಸರ್ಜಿ, ಕಿಶೋರ್ ಕುಮಾರ್ ಪುತ್ತೂರು, ಪ್ರತಾಪಸಿಂಹ ನಾಯಕ್, ಐವನ್ ಡಿಸೋಜಾ, ಎಸ್.ಎಲ್. ಭೋಜೆಗೌಡ, ಮಂಜುನಾಥ ಭಂಡಾರಿ, ಮಾಜಿ ಸಚಿವ ರಾದ ಕೆ. ಅಭಯಚಂದ್ರ ಜೈನ್, ಕೃಷ್ಣ ಜೆ. ಪಾಲೇಮಾರ್ ಭಾಗವಹಿಸಲಿದ್ದಾರೆ.
ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ, ಮಾಜಿ ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಸೇರಿದಂತೆ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಫೆ. ೦೧ರಂದು ಪೂರ್ವಾಹ್ನ ಮೂಡುಬಿದಿರೆ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಶ್ರೀಧರ ಎಸ್. ಮುಂಡಾಲಮನಿ, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ., ಹಾಗೂ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.

ಗೌರವ ಸನ್ಮಾನ: ಜಿಲ್ಲೆಯಲ್ಲಿ ನಡೆಯುವ ಪ್ರತಿಷ್ಠಿತ ೨೩ನೇ ವರ್ಷದ ಮೂಡುಬಿದಿರೆಯ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಪ್ರತಿ ವರ್ಷವೂ ಸಾಧಕ ಗಣ್ಯರನ್ನು ಸನ್ಮಾನಿಸುವ ಸಂಪ್ರದಾಯವಿದೆ. ನೂತನ ಕರೆ ನಿರ್ಮಾಣದ ಗೌರವ ಎಂಬಂತೆ ಕರೆ ನಿರ್ಮಾಣಕಾರ ಜೋನ್ ಸಿರಿಲ್ ಡಿಸೋಜಾ ಸರಪ್ಪಾಡಿ, ಶ್ರೀನಿವಾಸ ಗೌಡ ಮಿಜಾರು ಅಶ್ವತ್ಥಪುರ, ಕಂಬಳ ಓಟಗಾರ ರಾಜೇಶ್ ಮಾರ್ನಾಡ್ ರನ್ನು ಗುರುತಿಸಲಾಗುವುದು.
ಬಹುಮಾನಗಳು: ಕನೆಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಲ್ಲಿ ಏಳುವರೆ ಕೋಲುಗೆ ಒಂದುವರೆ ಪವನು, ಆರುವರೆ ಕೋಲುಗೆ ಮುಕ್ಕಾಲು ಪವನು, ಹಗ್ಗ, ಹಿರಿಯ ವಿಭಾಗದಲ್ಲಿ ಪ್ರಥಮ ಒಂದುವರೆ ಪವನು, ದ್ವಿತೀಯ ಮುಕ್ಕಾಲು ಪವನು, ನೇಗಿಲು ಹಿರಿಯ ವಿಭಾಗ ಪ್ರಥಮ ಒಂದು ಪವನು, ದ್ವಿತೀಯ ಅರ್ಧ ಪವನು, ಅಡ್ಡ ಹಲಗೆ ವಿಭಾಗ ಪ್ರಥಮ ಮುಕ್ಕಾಲು ಪವನು, ದ್ವಿತೀಯ ಅರ್ಧ ಪವನು, ಹಗ್ಗ ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಮುಕ್ಕಾಲು ಪವನು, ದ್ವಿತೀಯ ಅರ್ಧ ಪವನು, ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನು, ವಿಜೇತ ಕೋಣಗಳ ಸಹಾಯಕ ತಂಡಕ್ಕೆ ರೂ. ೧೦೦೦ ನಗದು ಬಹುಮಾನ ಲಭಿಸಲಿದೆ. ಪ್ರಧಾನ ತೀರ್ಪುಗಾರರಾಗಿ ವಿಶ್ರಾಂತ ಪ್ರಾಂಶುಪಾಲ ಕೆ. ಗುಣಪಾಲ ಕಡಂಬ, ತೀರ್ಪುಗಾರರ ಸಂಚಾಲಕರಾಗಿ ವಿಜಯಕುಮಾರ್ ಕಂಗಿನ ಮನೆ, ವೀಕ್ಷಕ ವಿವರಣೆ ಮತ್ತು ತೀರ್ಪುಗಾರರಾಗಿ ರಾಜೀವ ಶೆಟ್ಟಿ ಎಡ್ತೂರು, ರವೀಂದ್ರ ಕುಮಾರ್ ಕುಕ್ಕುಂದೂರು, ನವೀನ್ಚಂದ್ರ ಅಂಬೂರಿ, ಸುಧಾಕರ ಶೆಟ್ಟಿ ಮುಗ್ರೋಡಿ, ಸತೀಶ್ ಹೊಸ್ಮಾರು, ವಿದ್ಯಾಧರ ಜೈನ್ ರೆಂಜಾಳ ಸಹಕರಿಸಲಿದ್ದಾರೆ. ವೀಡಿಯೋ ತೀರ್ಪುಗಾರರಾಗಿ ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ್ ಶೆಟ್ಟಿ, ಮೂಡುಬಿದಿರೆ ಕಂಬಳ ಸಮಿತಿ ಉಪಾಧ್ಯಕ್ಷ ಸುರೇಶ್ ಕೆ. ಪೂಜಾರಿ, ತೋಡಾರು ಪಂಚಶಕ್ತಿ ರಂಜಿತ್ ಪೂಜಾರಿ ಸಹಕರಿಸಲಿದ್ದಾರೆ. ಸ್ಕೈವ್ಯೂ ಕಾರ್ಕಳ ವತಿಯಿಂದ ಲೇಸರ್ ಬೀಂ ನೆಟ್ವರ್ಕ್ ಸಿಸ್ಟಮ್ ಮತ್ತು ಟೈಮರ್ ಮೂಲಕ ದಾಖಲೀಕರಣ ನಡೆಯಲಿದೆ. ನಗ್ರಿ ಸಂಕಪ್ಪ ಶೆಟ್ಟಿ, ಸಾಣೂರು ಕೆ. ಶ್ರೀಧರ ಆಚಾರ್, ಕೊಡಂಗಲ್ಲು ಜಗನ್ನಾಥ ಭಟ್, ಕಕ್ಯಪದವು ದಿನೇಶ್ ಬರವಣಿಗೆ ಮತ್ತು ದಾಖಲೆ ನಿರ್ವಹಣೆ ಮಾಡಲಿದ್ದಾರೆ. ಕೋಣಗಳನ್ನು ಗದ್ದೆಗೆ ಇಳಿಸಲು ನೇಗಿಲು ಕಿರಿಯ ವಿಭಾಗಕ್ಕೆ ಪೂರ್ವಾಹ್ನ ಗಂಟೆ ೮.೦೦, ಹಗ್ಗ ಹಿರಿಯ ಕಿರಿಯ ವಿಭಾಗ ಮಧ್ಯಾಹ್ನ ಗಂಟೆ ೨.೦೦, ನೇಗಿಲು ಹಿರಿಯ ಬೆಳಿಗ್ಗೆ ಗಂಟೆ ೧೦.೩೦, ಕನೆಹಲಗೆ ಮತ್ತು ಅಡ್ಡಹಲಗೆ ಅಪರಾಹ್ನ ಗಂಟೆ ೪.೦೦ಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಕೋಣಗಳನ್ನು ಮೇಲೆ ಸೂಚಿಸಿರುವ ಸಮಯಕ್ಕೆ ಸರಿಯಾಗಿ ಕರೆಗೆ ಇಳಿಸಲಾಗುವುದು. ತಡವಾಗಿ ಬಂದ ಕೋಣಗಳಿಗೆ ಮಂಜೊಟ್ಟಿಯಲ್ಲಿ ಕರೆಗೆ ಇಳಿಯಲು ಅವಕಾಶವಿಲ್ಲ.
ಜಿಲ್ಲಾ ಕಂಬಳ ಸಮಿತಿಯು ಜಾರಿಗೊಳಿಸಿದ ಎಲ್ಲಾ ನಿಯಮಗಳನ್ನು ಈ ಕಂಬಳದಲ್ಲಿ ಪಾಲಿಸಲು ತೀರ್ಮಾನಿಸಲಾಗಿದೆ. ಅಹಿಂಸಾತ್ಮಕ ವಾಗಿ ಕಾನೂನಿನ ಚೌಕಟ್ಟಿನಲ್ಲಿ ನಿಗಧಿತ ಕಾಲಮಿತಿಯೊಳಗೆ ಕಂಬಳ ಕೂಟ ನಡೆಯಲಿದೆ.
ಕಂಬಳವು ಶೂನ್ಯ ತ್ಯಾಜ್ಯವಾಗಿ ಮೂಡಿಬರಲಿದ್ದು, ಏಕಬಳಕೆ ವಸ್ತುಗಳಾದ ಪ್ಲಾಸ್ಟಿಕ್, ಥರ್ಮಕೋಲ್, ಪ್ಲೇಟ್ ಬೌಲ್, ಪೇಪರ್ ಪ್ಲೇಟ್, ಸ್ಟ್ರಾ ಮುಂತಾದ ಬಳಕೆಯನ್ನು ನಿಷೇಧಿಸಲಾಗಿದೆ. ಸ್ಟೀಲ್ ಲೋಟ, ಸ್ಟೀಲ್ ಪ್ಲೇಟ್, ತೆಂಗಿನ ಗೆರಟೆ, ಅಡಿಕೆ ಹಾಳೆ ಪ್ಲೇಟ್, ಮರದ ಎಲೆಗಳಿಂದ ರಚಿತ ವಸ್ತುಗಳನ್ನು ಬಳಸಿ ತಿಂಡಿ ತಿನಸುಗಳ ಸೇವನೆಗೆ ಅವಕಾಶ ಮಾಡಿಕೊಡಲಾಗಿದೆ.























