ಬೆಳಗಾವಿ ಉದ್ಯಮಿಯ ಕೊಲೆ; ಪತ್ನಿಯ ಪ್ರಿಯಕರನ ಕರಿಛಾಯೆ: ಮಂಗಳೂರು ಯುವಕ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್

Picture of RB NEWS

RB NEWS

Bureau Report

ಬೆಳಗಾವಿ: ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ (47) ಅವರ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇದು ಸಂಚು ರೂಪಿಸಿ ಮಾಡಿದ ಕೊಲೆ’ ಎಂದು ಪೊಲೀಸರು ಸಂದೇಹಪಟ್ಟಿದ್ದಾರೆ. ಬುಧವಾರ ಶವ ಹೊರ ತೆಗೆದು ತನಿಖೆ ಆರಂಭಿಸಲಾಗಿದೆ. ಸಂತೋಷ ಪತ್ನಿ ಹಾಗೂ ಇತರ ನಾಲ್ವರ ವಿರುದ್ಧ ಅವರ ಪುತ್ರಿ ಸಂಜನಾ ದೂರು ದಾಖಲಿಸಿದ್ದಾರೆ.

‘ಸಂಜನಾ ಅವರ ತಾಯಿ ಉಮಾ (41), ಇವರ ಫೇಸ್‌ಬುಕ್‌ ಸ್ನೇಹಿತ, ಮಂಗಳೂರು ಮೂಲದ ಶೋಭಿತ್‌ ಗೌಡ (30), ಮನೆಗೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ಹಾಗೂ ಇನ್ನೊಬ್ಬ ಅಪರಿಚಿತ ಸೇರಿಕೊಂಡು ಕೊಲೆ ಮಾಡಿದ್ದಾರೆ’ ಎಂದು ಎಫ್‌ಐಆರ್‌ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವರ ಪುತ್ರಿ ಸಂಜನಾ (19) ಅದೇ ದಿನ ಬೆಳಗಾವಿಗೆ ಬಂದರು. ತಮ್ಮ ತಂದೆಯ ಕೊನೆಯ ಕ್ಷಣಗಳನ್ನು ನೋಡಬೇಕು ಎಂದು ಬಯಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸತೊಡಗಿದರು. ಅವರನ್ನು ಗದರಿಸಿದ ತಾಯಿ ಉಮಾ, ಸ್ನಾನ ಮಾಡಿಕೊಂಡು ಬಾ ನಂತರ ತೋರಿಸುತ್ತೇನೆ ಎಂದು ಕಳಿಸಿದ್ದರು.

ಸಂಜನಾ ಅತ್ತ ಹೋಗುತ್ತಿದ್ದಂತೆಯೇ ತಮ್ಮ ಇಬ್ಬರು ಪುತ್ರರನ್ನು ಕರೆದ ಉಮಾ; ಕೊಲೆ ನಡೆದ ಸಮಯದ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲಿಟ್‌ ಮಾಡಿಸಿದ್ದರು.

ಈ ವಿಷಯವನ್ನು ಇಬ್ಬರೂ ಬಾಲಕರು ತಮ್ಮ ಅಕ್ಕ ಸಂಜನಾಗೆ ತಿಳಿಸಿದರು. ಆ ಕ್ಷಣದಿಂದಲೇ ಸಂಜನಾಗೆ ಅನುಮಾನ ಶುರುವಾಯಿತು.

ತನ್ನ ತಂದೆ ಆರೋಗ್ಯವಾಗಿದ್ದರು. ಅವರದು ಸಹಜ ಸಾವಲ್ಲ; ಕೊಲೆ ಎಂದು ಅನುಮಾನಿಸಿ ಅ.15ರಂದು ಇಲ್ಲಿನ ಮಾಳಮಾರುತಿ ಠಾಣೆಗೆ ದೂರು ನೀಡಿದರು.

ಇಲ್ಲಿನ ಸದಾಶಿವನಗರದಲ್ಲಿ ಹೂತಿದ್ದ ಸಂತೋಷ ಅವರ ಶವವನ್ನು ಹೊರತೆಗೆದ ಪೊಲೀಸರು, ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಎಸಿ ಶ್ರವಣ್‌ಕುಮಾರ್ ಸಮ್ಮುಖದಲ್ಲಿ ಬೀಮ್ಸ್ ವೈದ್ಯರು, ಎಫ್‌ಎಸ್‌ಎಲ್, ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ, ಪಾಲಿಕೆ ಸಿಬ್ಬಂದಿ, ಕಂದಾಯ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top