ಪೊಳಲಿ ಅನಂತು ಅಂತಿಮ ಯಾತ್ರೆಯಲ್ಲಿ ಸ್ಫೋಟಗೊಂಡ ಗಲಭೆ : 20 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ವಾರಂಟ್ ಆರೋಪಿ

Picture of RB NEWS

RB NEWS

Bureau Report


ಮಂಗಳೂರು: ಎರಡು ದಶಕಗಳ ಹಿಂದೆ ದಾಖಲಾಗಿದ್ದ ಕೋಮು ಗಲಭೆ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಅವರ ಅಪರಾಧ ಪತ್ತೆ ತಂಡ ಬಂಧಿಸಿದೆ.
ಬಂಧಿತನನ್ನು ಮಂಗಳೂರಿನ ಎನ್.ಎಂ.ಪಿ.ಟಿ. ಕಾಲೋನಿಯ 2ನೇ ಅವಿನ್ಯೂ ಮೂಲದ, ಪ್ರಸ್ತುತ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿ ವಾಸವಾಗಿದ್ದ ಮನೋಜ್ (44) ಎಂದು ಗುರುತಿಸಲಾಗಿದೆ.
ಶವ ಮೆರವಣಿಗೆಯ ಗಲಾಟೆ ಪ್ರಕರಣ
2005ರಲ್ಲಿ ಕೋಮು ಗಲಭೆಯ ವೇಳೆ ಹತ್ಯೆಯಾಗಿದ್ದ ಪೊಳಲಿ ಅನಂತು ಅವರ ಶವ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಬಜಪೆ ಪೊಲೀಸ್ ಠಾಣೆಯಲ್ಲಿ ಮನೋಜ್ ವಿರುದ್ಧ ಎರಡು ಪ್ರಕರಣಗಳು (ಅ.ಕ್ರ. 101/2005 ಮತ್ತು 104/2005) ದಾಖಲಾಗಿದ್ದವು.
ಪ್ರಕರಣ ದಾಖಲಾದ ಎರಡು ವರ್ಷಗಳ ಬಳಿಕ, ಅಂದರೆ 2007ರಲ್ಲಿ ಆತ ವಿದೇಶಕ್ಕೆ ತೆರಳಿದ್ದ. ನಂತರ ಭಾರತಕ್ಕೆ ಮರಳಿದರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದಲ್ಲಿ ವಾಸವಿದ್ದ ಎನ್ನಲಾಗಿದೆ.
ಆತನ ನಿರಂತರ ಗೈರುಹಾಜರಿಯನ್ನು ಪರಿಗಣಿಸಿ ಮಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯವು ಎಲ್‌ಪಿಸಿ ನಂ. 26/2016 ಮತ್ತು 50/2016ರ ಅಡಿಯಲ್ಲಿ ಎರಡು ಪ್ರಕರಣಗಳಿಗೂ ಸಂಬಂಧಿಸಿ ವಾರಂಟ್ ಜಾರಿಗೊಳಿಸಿತ್ತು.
ಖಚಿತ ಮಾಹಿತಿ ಆಧರಿಸಿ ಬಂಧನ
ಹಳೆಯ ವಾರಂಟ್ ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಅವರ ಅಪರಾಧ ಪತ್ತೆ ತಂಡ ನವೆಂಬರ್ 14ರಂದು ಕಾರ್ಕಳದಲ್ಲಿ ಮನೋಜ್‌ನನ್ನು ಪತ್ತೆಹಚ್ಚಿ ಬಂಧಿಸಿದೆ.
ಬಂಧಿತನನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top