ಪತ್ರಕರ್ತರ ಹಾಗೂ ಪತ್ರಿಕೆಗಳ ಬೌದ್ಧಿಕ ದಿವಾಳಿತನಕ್ಕೆ ವಿಷಾದಿಸಿದ ಮಹಾಬಲೇಶ್ವರ ರಾವ್
ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಓರ್ವ ಸಭಿಕನಾಗಿ ನಾನು ಭಾಗವಹಿಸಿದ್ದೆ.
ಕಾಲೇಜಿನ ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಭಾಂಗಣದ ಎಲ್ಲ ಆಸನದಲ್ಲಿ ತುಂಬಿದ್ದರು.
ಅಷ್ಟು ದೊಡ್ಡ ಸಭೆಯಲ್ಲಿ ಸೇರಿದ ಎಲ್ಲರೂ ಏಕಕಾಲದಲ್ಲಿ ಉಸಿರಾಡುವುದು ಸಹ ಸಣ್ಣ ಮಟ್ಟದ ಸದ್ದು ಹೌದೇ ಹೌದು. ಹಾಗಿದ್ದೂ ಕೂಡಾ ಶಿಸ್ತು ಬದ್ಧತೆಯ ಶಿಷ್ಟಾಚಾರವಾಗಿ ಅಧ್ಯಾಪಕರೊಬ್ಬರು ಅಲ್ಲಿ ನಡುವಿಗೆ ಬಂದು
No one should make noise. This is a valuable program ಎಂದು ಹೇಳಿ ಎಚ್ಚರಿಸಿದರು.
ಅದನ್ನು ಕೇಳಿಸಿಕೊಂಡ ನನಗೆ ಸ್ವತಃ ಒಮ್ಮೆ ಹಾವಸೆಯಾಗಿ ನೆಲಕ್ಕಪ್ಪಚ್ಚಿಯಾದ ಅನುಭವವಾದಂತಾಯಿತು! ಯಾಕೆಂದರೆ ಈ ಕಾಲಘಟ್ಟದಲ್ಲೂ ಪತ್ರಕರ್ತರ ಮೇಲಿರುವ ಗೌರವ ಹಾಗೂ ಅಭಿಮಾನ ಗಾಢವಾಗಿ ಉಳಿದಿರುವುದು.!

ಕಾರ್ಯಕ್ರಮದ ಉದ್ಘಾಟಕರೂ ಆಗಿದ್ದ ಕಾಲೇಜಿನ ಸಂಸ್ಥಾಪಕರಲ್ಲೊಬ್ಬರಾಗಿರುವ ಅಶ್ವತ್ ಎಸ್. ಎಲ್. ಅವರು , ತಮ್ಮ ಸಂಸ್ಥೆಗೆ ಸಾಕಷ್ಟು ಕಿರುಕುಳ ನೀಡಿರುವ ವೆಬ್ ನ್ಯೂಸ್ ಚಾನೆಲ್ ಒಂದರ ಬಗ್ಯೆಯೇ ಹೇಳಿ ತನಗಾಗಿದ್ದ ಅತೀವ ನೋವನ್ನು ಹೊರಹಾಕಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಶಿಕ್ಷಣ ತಜ್ಞ ಉಡುಪಿಯ ಮಹಾಬಲೇಶ್ವರ ರಾವ್ , ಅವರ ಭಾಷಣದಲ್ಲಿ ಯೋಗ್ಯ ವಿಚಾರಗಳನ್ನು ವ್ಯಕ್ತಪಡಿಸಿದರು. ಪತ್ರಿಕೆ ಮತ್ತು ಪತ್ರಕರ್ತರ ಬದ್ಧತೆಗಳನ್ನು ವಿವರಿಸಿದರು ಹಾಗೂ ಪತ್ರಕ್ರತರ ಮತ್ತು ಪತ್ರಿಕೆಗಳ ಬೌದ್ಧಿಕ ದಿವಾಳಿಯನ್ನು ತುಂಬಾ ಅರ್ಥವತ್ತಾಗಿ ವಿವರಿಸಿ ವಿಷಾದಪಡಿಸಿದರು. ಬಹುವಿಧಗಳ ಮಾಧ್ಯಮದ ಹೊರತಾಗಿಯೂ ಮುದ್ರಣ ಮಾಧ್ಯಮಕ್ಕೆ ಅದರದೇ ಆದ ಓದುಗರಿದ್ದಾರೆ. ಹಾಗಿರುವಾಗ ಅಲ್ಲಿರುವ ಬಹು ಆಕರ್ಷಣೆಗಳು,ಅಗತ್ಯಗಳು ಏನೆಂಬುದನ್ನು ಪದರಪದರವಾಗಿ ವಿವರಿಸಿದ ಮಹಾಬಲೇಶ್ವರ ರಾವ್, ವಿದ್ಯಾರ್ಥಿ ದೆಸೆಯಿಂದಲೇ ದಿನದಲ್ಲಿ ಒಂದು ಘಂಟೆ ಸಮಯ ಪತ್ರಿಕೆ ಓದುವುದನ್ನು ರೂಢಿ ಮಾಡಿಕೊಳ್ಳಬೇಕೆಂದು ಹೇಳಿದರು.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನ ಅವರು ,ಪತ್ರಕರ್ತ ಮತ್ತು ಪತ್ರಿಕೆ ಕುರಿತಾಗಿ ಮಾತಾಡಿದರು. ಇವತ್ತಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತರ ಬರೆಯಬೇಕಾದರೆ ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕೆಯೆನ್ನು ಓದಿ ಮಾಹಿತಿ ಸಂಗ್ರಹಿಸುವ ಅಗತ್ಯವಿರುವುದನ್ನು ಸವಿವರವಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ವಹಿಸಿದ್ದರು. ಪ್ರಜಾವಾಣಿ ಪತ್ರಿಕೆಯ ವರದಿಗಾರ ವಾಸುದೇವ ಭಟ್ ಸ್ವಾಗತ ಭಾಷಣ ಮಾಡಿದರು. ಕಾಲೇಜಿನ ಕನ್ನಡ ಭಾಷಾ ಶಿಕ್ಷಕಿ ಪ್ರಿಯಾಂಕ ಅವರು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಅವಿನ್ ಶೆಟ್ಟಿ ವಂದನಾರ್ಪಣೆಗೈದರು.
ಬಹಳ ರುಚಿಕಟ್ಟಾದ ಊಟದ ಏರ್ಪಾಟು ಮಾಡಿರುವುದು ಬಹಳಷ್ಟು ಖುಶಿ ನೀಡಿತು. ಶ್ರೀ ಲಕ್ಷ್ಮೀ ಕೆಟರರ್ಸ್ ಅವರ ಊಟದ ತಯಾರಿಯಾಗಿತ್ತು. ಮಾವಿನ ಮಿಡಿಯ ಉಪ್ಪಿನಕಾಯಿ,ಎಣ್ಣೆಯಲ್ಲಿ ಕರಿದ ಪುಟ್ಟ ಪುಟ್ಟ ಬೆಂಡೆಕಾಯಿ ಬೇಕಷ್ಟು ಉಣ್ಣುವಲ್ಲಿ ಸಹಕರಿಸಿತು!






























