ತುಳುನಾಡಿನ ದೀಪಾವಳಿ -ವಿ. ಕೆ. ವಾಲ್ಪಾಡಿ

Picture of RB NEWS

RB NEWS

Bureau Report

ದೀಪಾವಳಿಯನ್ನು ಆಚರಿಸುವಲ್ಲಿನ ಅತಿ ಮಹತ್ವದ ಪದ್ಧತಿಗಳು ಗ್ರಾಮೀಣ ನಾಡಿನಲ್ಲಿ ಈಗಲೂ ಅನುಕರಣೆಯಲ್ಲಿದೆ ಸತ್ಯ.

ತುಳುನಾಡಿನ ದೀಪಾವಳಿಯ ಸೊಗಡು,ಸಂತಸಗಳು ಕಾಣತ್ತಿದ್ದುದೇ ಬೇಸಾಯಗಾರರ ತಂಪು ನಾಡಿನಲ್ಲಿ. ಪೇಟೆಯ ಕಟ್ಟಡಗಳಲ್ಲಿ ಗೂಡುದೀಪ ಮತ್ತು ಅಂಗಡಿ ಪೂಜೆಯ ದಿನದ ಪಟಾಕಿ ಸದ್ದುಗಳ ಗದ್ದಲವಷ್ಟೇ ದೀಪಾವಳಿಯಾಗಿದ್ದರೆ ರೈತರ ನಾಡು ಬೀಡಿನಲ್ಲಿ ನಿಜವಾದ ದೀಪೊಲಿ ಬೆಳಗುತ್ತಿರುವುದು.( ತುಳು ಪದ ದೀಪೊಲಿ.)
ಭತ್ತದ ಬೇಸಾಯ ಕಡಿಮೆಯಾಗಿರುವುದು, ಸಾಗುವಳಿ ಭೂಮಿಯ ಅನೇಕ ಎಕರೆ ಪ್ರದೇಶಗಳು ವಾಣಿಜ್ಯಭೂಮಿಯಾಗಿ ಮಾರ್ಪಟ್ಟಿವೆ. ಕೃಷಿಕೂಲಿ ಕಾರ್ಮಿಕರ ಧಾರಾಳ ಕೊರತೆಯಿಂದಾಗಿ ಬೇಸಾಯವೇ ಬೇಸತ್ತು ಹೋಗಿದೆ.ಆ ಬೇಸರದಿಂದಾಗಿ ತುಳುನಾಡಿನ ವಿಶಾಲ ಕ್ಷೇತ್ರದಲ್ಲಿ ದೀಪಾವಳಿಯ ಸೊಗಸು ಸೊಗಡುಗಳು ಮರೆಯಾಗಿದೆ.
ಧನ ,ಧಾನ್ಯಗಳನ್ನು ಬೆಳಕಿನಲ್ಲಿಟ್ಚು ಪೂಜಿಸುವುದೂ ದೀಪಾವಳಿಯ ಅರ್ಥಗಳಲ್ಲಿ ಒಂದಾಹಿರುತ್ತದೆ.

ತುಳುನಾಡಿನ ಮನೆಗಳಲ್ಲಿ ಗುತ್ತು ಮನೆ ಎನ್ನುವ ವಿಶೇಷ ಸ್ಥಾನಮಾನವನ್ನು ಕೊಡಲಾಗಿದೆ,ಈಗಲೂ ಇದೆ. ಗುತ್ತು ಮನೆ ಎನ್ನಬೇಕಾಗರೆ ಅಲ್ಲಿ ಅಷ್ಟೇ ಬೇಸಾಯ,ಜನ,ಜಾನುವಾರು ಮತ್ತು ಗತ್ತು ಕಡ್ಡಾಯವಾಗಿ ಇರುತ್ತಿತ್ತು. ಆ ಮನೆಗೊಂದು ಬಾಕ್ಯಾರು ಗದ್ದೆ ಇದ್ದೇ ಇದೆ.ಬಾಕ್ಯಾರು(ಬಾಕಿಮಾರು)ಗದ್ದೆ ಇರುವಾಗ ಮನೆಯ ಭೂಮಿಯ ದೈವದ ಆರಾಧನೆಯೂ ಪ್ರಬಲವಾಗಿರುತ್ತದೆ. ಅದನ್ನು ದೈವದ ಗದ್ದೆ ಎಂದು ವಾಡಿಕೆ ಮಾಡಲಾಗಿರುತ್ತದೆ.ಆ ಗದ್ದೆಯ ಸಾಗುವಳಿಯಾಗುವಾಗ ನಡುಮಧ್ಯೆ ಬಾಳೆಗಿಡ ನೆಡುವ ಪದ್ಧತಿ ಇದೆ. ಅಲ್ಲದೇ ಸಣ್ಣ ಗಾತ್ರದ ಪೂಕರೆ ಇಡುವ ಕ್ರಮವೂ ಇದೆ.

ಆ ಗುತ್ತಿನ ಮನೆಯವರ ಅಂಗಳದ ಎದುರು ಅಥವಾ ಮನೆಯೆದುರಿನ ಬಾಕಿಮಾರು ಗದ್ದೆಯೊದುರಿನ ಹುಣಿ (ಬದು) ದೀಪಗಳ ಅಟ್ಟಳಿಗೆ ಇಡುವುದಕ್ಕಿದೆ. ಅದು ಮರದ ಕೋಲಿಗೆ ಅಟ್ಟೆಗಳನ್ನು ಜೋಡಿಸಿಡುವುದು. ಆಳೆತ್ತರದ ದಪ್ಪನೆಯ ಕೋಲಿಗೆ ತೂತು ಕೊರೆದು ಸುಮಾರು ಐದು ಅಂತಸ್ತಿನಲ್ಲಿ ಅಟ್ಟಳಿಗೆ ಜೋಡಿಸುವುದು. ಅದು ದೀಪದ ಹಣತೆ ಇಡುವುದಕ್ಕಷ್ಟೆ ಅಗಲವಿದ್ದು ಒಟ್ಟು ಸುಮಾರು ಇಪ್ಪತ್ತೈದು ಐವತ್ತರ ಸಂಖ್ಯೆಯಷ್ಟು ಹಣತೆಗಳನ್ನು ಇಡಲಿಕ್ಕಾಗುತ್ತದೆ.
ಆ ದೀಪದಟ್ಟಳಿಗೆಯನ್ನು ಊರಿನ ಸಂಪ್ರದಾಯಗಳ ತಯಾರಿಗೆ ಈತನೇ ಎಂದು ದೈವಸಾನಿಧ್ಯದಲ್ಲಿ ಹಕ್ಕು (ನಂಬುಗೆ) ಪಡೆದಿರುವ ಆಚಾರಿಯೇ ಮಾಡಿ ತಂದು ಮನೆಗೊಪ್ಪಿಸಬೇಕು ಹೊರತು, ಊರೊಳಗಿನ ಯಾರೇ ಆಚಾರಿ ಮಾಡಿ ತರುವಂತಿಲ್ಲ. ಆತನಿಗೆ ಅಸೌಖ್ಯ ಮತ್ತು ಅಮೆ ಸೂತಕವಾಗಿದ್ಗಲ್ಲಿ ಅವನ ಅನುಮತಿ ಮೇರೆಗೆ ಸೂಚಿಸಿದ ಆಚಾರಿ ಮಾಡಿ ಒಪ್ಪಿಸುತ್ತಾನೆ.

ಹಾಗೆ ದೀಪದ ಅಟ್ಟೆ ತಂದ ಆಚಾರಿಗೆ ತುಂಬಾ ಮರ್ಯಾದೆ ,ಗೌರವದಿಂದ ಸಂಭಾವನೆ,ಮಜೂರಿ ಕೊಡುವುದು ಪದ್ಧತಿ. ಇಂತಿಷ್ಟೇ ಪ್ರಮಾಣ ಬೆಳ್ತಿಗೆ ಅಕ್ಕಿ,ಎರಡು ತೆಂಗಿನ ಕಾಯಿ,ಎರಡು ಅಡಿಕೆ, ಕನಿಷ್ಠ ಒಂದು ಕವಳೆ( ಐದು )ವೀಳ್ಯದೆಲೆಯನ್ನೆಲ್ಲ ಹರಿವಾಣದಲ್ಲಿಟ್ಚು ,ಆತ ಹೇಳಿದಷಟ್ು ಮೊತ್ತದ ಮಜೂರಿಯನ್ನು ಆ ವೀಳ್ಯದೆಲೆಯ ಮೇಲಿಟ್ಚು ಮನೆಯ ಯಜಮಾನ ಅಥವಾ ಮನೆಗೆ ಸಂಬಂಧ ಪಟ್ಟವರು ಕೊಡಬೇಕು. ಆ ಪದ್ಧತಿ ಈಗಲೂ ಇದೆ.

ದೀಪಾವಳಿಯ ಅಮಾವಾಸ್ಯೆ ದಿನದಂದು ಆ ದೀಪದ ಅಟ್ಟಳಿಗೆಯನ್ನು ಸಿಂಗರಿಸಿ ದೀಪ ಹಚ್ಚುವ ಸಂಭ್ರಮ ಬಹಳ ಜೋರಾಗಿರುತ್ತದೆ.ಮನೆಯ ಯಜಮಾನ ಮತ್ತಾಕೆಯ ಹೆಂಡತಿ ಮಕ್ಕಳು ಮತ್ತು ಮನೆಯವರೆಲ್ಲರೂ ಒಂದೊಂದು ಹಣತೆಗೆ ದೀಪ ಹಚ್ಚಿ ಏಕಕಾಲದಲ್ಲಿ ಬೆಳಗಿಸುತ್ತಾರೆ.

ದೀಪ ಬೆಳಗಿಸಿದ ನಂತರ ಬಲೀಂದ್ರನ ಕುರಿತಾದ ಜನಪದ ಸಾಲುಗಳನ್ನು ಬಾಯಿಪಾಠ ಗೊತ್ತಿದ್ದವನು ಯಾವನಾದರೂ ಒಬ್ಬ ಹೇಳಲು ಆರಂಭಿಸುತ್ತಾನೆ. ನಡು ನಡುವೆ ಆತನ ಜೊತೆಗೆ ಕೂ ಕೂ ಎಂದು ಎಲ್ಲರೂ ಹೇಳಬೇಕಾಗುತ್ತದೆ. ಅಲ್ಲಿ ಕೂ ಹೇಳುವುದೇಕೆಂದರೆ ಅದು ಬಲೀಂದ್ರನನ್ನು ತಮ್ಮ ಮನೆಯತ್ತ ಬಾ ,ಬಂದು ದೀಪ ನೋಡು ಎಂದು ಕರೆಯುವುದು. ತುಳು ಜನರು ದೂರದಿಂದ ದೂರಕ್ಕೆ ಒಬ್ಬರನ್ನೊಬ್ಬರು ಕರೆಯೂವುದು ಹಾಗೆ ಕೂ…ಹಾಕಿ. ಅದನ್ನು ಪೂರ್ತಿ ಹೇಳಿ ಮುಗಿಸುವುದಕ್ಕೆ ಸುಮಾರು ಒಂದು ಘಂಟೆ ಸಮಯವೂ ಸಾಕಾಗುವುದಿಲ್ಲ,ಅಷ್ಟು ದೀರ್ಘವಾಗಿದೆ. ಅದು ಮುದ್ರಣ ರೂಪದಲ್ಲಿ ಅಚ್ಚಾಗಿತ್ತು ಕೂಡ.
ಆಸುಪಾಸಿನವರೆಲ್ಲ ಬಂದು ಸೇರಿರುತ್ತಾರೆ. ಈ ನಡುವೆ ಬಿದಿರಿನ ಕಡ್ಡಿಗೆ ಆರಿಂಚು ಉದ್ದಕ್ಕೆ ತೆಳುವಾದ ಬಿಳಿ ಬಟ್ಟೆಯ ರಿಬ್ಬನ್ ಸುತ್ತಿ ಅದನ್ನು ಎಣ್ಣೆಯಲ್ಲಿ ಅದ್ದಿದ ಕೋಲುತಿರಿ ಮಾಡಿದ್ದನ್ನು ಉರಿಸಿ ಎಲ್ಲ ಗದ್ದೆಯ ನಡುವಿಗೂ,ಬೈ ಹುಲ್ಲು ರಾಶಿಯ ಅಂಗಳ,ಗೊಬ್ಬರ ರಾಶಿ ,ಬಾವಿ ಕಟ್ಟೆ ಕೊಟ್ಟಿಗೆ ,ಭತ್ತದ ರಾಶಿ ಎಲ್ಲ ಕಜೆಯಲ್ಲೂ ಒಂದೊಂದು ಕೋಲುತಿರಿ ದೀಪ ಇಡಲಾಗುತ್ತದೆ. ಇಡೀ ಭೂಮಿಯೇ ಬೆಳಕಿನ ದೀಪದಿಂದ ಕಂಗೊಳಿಸುತ್ತದೆ.ಆ ನಂತರ ಸುಡುಮದ್ದುಗಳನ್ನು ತಂದು ಹೆಡಿಗೆಯಲ್ಲಿ ಹಾಕಿಕೊಡಲಾಗುತ್ತದೆ.
ಅವರಿವರೆಲ್ಲರೂ ಕೈಯಲ್ಲಿ ಬಾಚಿ ತೆಗೆದು ಪಟಾಕಿ ಸಿಡಿಸುವುದಕ್ಕೆ ತೊಡಗುತ್ತಾರೆ.ಅದಾಗ ನಂತರ ದೋಸೆ ,ಕಡುಬು ತಿಂದು ಮುಗಿಸಿ ಮನೆಗೆ ತೆರಳುವುದು.
( ಚಿತ್ರದಲ್ಲಿ ಕಾರ್ಕಳ ಸಾಂತರ ಗುತ್ತು ಮನೆಯ ಯಜಮಾನ ಆದಿರಾಜ ಅಜ್ರಿ ಮತ್ತವರ ಧರ್ಮಪತ್ನಿ ಜೊತೆಯಾಗಿ ಅಟ್ಟಳಿಗೆಯಲ್ಲಿ ದೀಪದ ಹಣತೆ ಹಚ್ಚಿಡುತ್ತಿರುವುದು)
(ಮತ್ತೊಂದು ಚಿತ್ರ ತುಳುನಾಡಿನ ಇಂದಿರಾ ಹೆಗ್ಗಡೆಯವರ ಫೇಸ್ ಬುಕ್ ಪುಟದಿಂದ ತೆಗೆದಿರುವುದು)

ಇನ್ನೊಂದು ಪ್ರಧಾನ ಸಂಗತಿಯೆಂದರೆ ಗೋಪೂಜೆ .ಬಡವ,ಶ್ರೀಮಂತ, ವರ್ಗ ಭೇದವಿಲ್ಲದೆನೆ ಜಾನುವಾರು ಸಾಕುವ ಪ್ರತಿಯೊಬ್ಬರೂ ಮನೆಯ ಗೋವುಗಳನ್ನು ಪೂಜಿಸುವುದುಂಟು.

ಊರೊಳಗೆ ಹರಿಯುವ ನದಿಯಲ್ಲಿ ಆ ದಿನ ಎಲ್ಲರ ಮನೆಯ ಜಾನುವಾರುಗಳ ಈಜಾಟ,ಅವುಗಳ ಕಾಲಿನಿಂದ ಬೆನ್ನಿನವರೆಗೆ ತಿಕ್ಕಿ ತೊಳೆಯುವುದು. ನೂರಾರು ಜಾನುವಾರುಗಳು ಜೊತೆಗೆ ಅಷ್ಟೇ ಜನಗಳು ತುಂಬಿರುವ ಹೊಳೆಯ ದೃಶ್ಯ ಅಷ್ಟೇ ಮನೋಹರ!

ಸಂಜೆಯಾದ ನಂತರ ಕತ್ತಲಾಗುತ್ತಿದ್ದಂತೆ ಗೋವಿನ ಪೂಜೆಗೆ ಅಣಿ ಮಾಡಲಾಗುತ್ತದೆ.ಇನ್ನು ಕೆಲವರೊಲ್ಲ ರಾತ್ರಿ ವೇಳೆ ದೀಪ ತೋರಿಸುವ ಕೆಲಸದೊಡನೆ ಗೋಪೂಜೆ ಮಾಡುತ್ತಾರೆ.

ಜಾನುವಾರುಗಳ ಕೊರಳಿಗೆ ಚೆಂಡಳಿಗೆ ಹೂವಿನ ಸರವನ್ನು ಕಟ್ಟುವುದು. ಉಪ್ಪು ಸೇರಿಸದ ಅಕ್ಕಿ ಹಿಟ್ಟನ್ನು ತೆಳು ಮಾಡಿ ಅದಕ್ಕೆ ತೆಂಗಿನ ಕಾಯಿ ಗೆರಟೆಯ ಅಂಚನ್ನು ಅದ್ದಿ ಜಾನುವಾರಗಳ ಬೆನ್ನು ಹೊಟ್ಟೆಗೆಲ್ಲ ಕಡೆ ಅಚ್ಚು ಹಾಕುವುದು!ಬೆಳಗಾಗುವಾಗ ಆ ದನ ಜಾನುವಾರುಗಳ ಅಂದ ಚೆಂದವೇ ವಿಶೇಷ.

ಮೇಯುವುದಕ್ಕೆಂದು ಹಟ್ಟಿಯಿಂದ ಹೊರ ಬಂದ ಜಾನುವಾರುಗಳು ದಾರಿಯಲ್ಲಿ ಹೋಗುವುದು,ಬಾಕಿ ಎಲ್ಲ ದನಗಳೊಂದಿಗೆ ಒಟ್ಟಾಗಿ ಗುಂಪಗೂಡುವುದು. ಒಂದರ ಮಾಲೆಯ ಹೂವನ್ನು ತಿನ್ನುವುದಕ್ಕಾಗಿ ಮತ್ತೊಂದು ದನ ಬಾಯಿ ಹಾಕುವುದು. ಸರ ತುಂಡಾಗುವುದು,ಕೆಲವವುಗಳ ಕುತ್ತಿಗೆಯಲ್ಲೇ ನೇತಾಡುವುದು, ಕೆಲವುದರ ಹಗ್ಗ ಮಾತ್ರ ಹಾಗೇ ಉಳಿದಿರುವುದು!ಎಲ್ಲವೂ ಒಂದು ಚೆಂದವೇ ಹೌದು!


(ಚಿತ್ರದಲ್ಲಿ ಕಾರ್ಕಳದ ಶಾಸಕ,ಮಾಜಿ ಸಚಿವ ವಿ. ಸುನಿಲ್ ಕುಮಾರ್ ಮತ್ತವರ ಧರ್ಮಪತ್ನಿ ಅವರು ಗೋಪೂಜೆ ಮಾಡುತ್ತಿರುವುದು)

ವಿ. ಸುನಿಲ್ ಕುಮಾರ್ ಅವರು ಪ್ರತಿ ವರ್ಷ ದೀಪಾವಳಿಯಂದೂ ಗೋವಿನ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ರಾಜಕೀಯವಾಗಿ ಏನೂ ಅರ್ಥ ಕಲ್ಪಿಸಿಕೊಳ್ಳಬಹಹುದಾದರೂ ಅದೆಷ್ಟೋ ಪುರುಷರಿಗೆ ಈ ಶಾಸಕರು ಮಾದರಿಯಾಗುತ್ತಾರೆ. ಹೆಚ್ಚಿನ ಮನೆಗಳಲ್ಲಿ ಗೃಹಿಣಿಯರು,ಯುವತಿಯರು,ಮನೆ ಮಕ್ಕಳು ಗೋವಿನ ಪೂಜೆ ಮಾಡುವುದು. ಗಂಡುಸರುಗಳು ಆ ಆಚರಣೆಯಲ್ಲಿ ಪಾಲ್ಗೊಳ್ಳುವುದು ತೀರಾ ಅಪರೂಪ. ಅವರದು ಜನಪ್ರತಿನಿಧಿತ್ವದ ಕುರುಹಿನಲ್ಲಿ ಅವರು ತನ್ನ ಕಛೇರಿಯ ವಠಾರದಲ್ಲಿ ಗೋಪೂಜೆ ಮಾಡುವ ಉದ್ದೇಶ ಇರಲೂಬಹುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top